ಸಾರಾಂಶ
ಡಾ.ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಡಿಜಿಟಲ್ ಗ್ರಂಥಾಲಯವನ್ನು ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ. ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸಂಸ್ಥೆಗಳಲ್ಲೊಂದಾದ ಡಾ.ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಡಿಜಿಟಲ್ ಗ್ರಂಥಾಲಯವನ್ನು ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ. ಉದ್ಘಾಟಿಸಿದರು.ಎಡ್ವೈಸ್ ಲರ್ನ್ ಡಿಜಿಟಲ್ ಲೈಬ್ರರಿಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕಲಿಕಾ ಸಾಮಗ್ರಿಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ.ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಪ್ರಾಂಶುಪಾಲರು, ಆಧುನಿಕ ಜಗತ್ತಿಗೆ ತಕ್ಕ ಹಾಗೆ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ಒದಗಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದ್ದು, ಆ ಹಿನ್ನೆಲೆಯಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.
ಗ್ರಂಥಾಲಯದ ಡಿಜಿಟಲೀಕರಣದಿಂದ ವಿದ್ಯಾರ್ಥಿಗಳು ತಮಗೆ ಅನುಕೂಲವಾದ ಕಡೆ ತಮ್ಮನ್ನು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬಹುದು. ಕೊಠಡಿಗಳ ಆಚೆಗೂ ಜ್ಞಾನಾರ್ಜನೆಯ ಅವಕಾಶವನ್ನು ಈ ಡಿಜಿಟಲೀಕರಣ ತೆರೆದಿಟ್ಟಿದೆ ಎಂದರು.ಎಡ್ವೈಸ್ ಲರ್ನ್ ಡಿಜಿಟಲ್ ಲೈಬ್ರೆರಿಯ ಧೀರಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮೊಬೈಲ್‌ನಲ್ಲಿಯೇ ಪಠ್ಯ ಪುಸ್ತಕ, ಪರಮಾರ್ಶನ ಪುಸ್ತಕ, ಸಂಶೋಧನಾ ಪುಸ್ತಕಗಳು, ಜರ್ನಲ್‌ಗಳು, ಸಾಹಿತ್ಯಿಕ ಪುಸ್ತಕಗಳನ್ನು ಒದಗಿಸುವುದು ಸಂಸ್ಥೆಯ ಉದ್ದೇಶ ಎಂದು ತಿಳಿಸಿದರು.ಕಾಲೇಜಿನ ಮುಖ್ಯ ಗ್ರಂಥಪಾಲಕಿ ಶಾಲಿನಿ ಶೆಟ್ಟಿ ಹಾಗೂ ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.