ಪ್ರಯಾಣಿಕರಿಗೆ ಕಡೂರು ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲ, ಕುಡಿಯುವ ನೀರಿಲ್ಲ, ಬಿಸಿಲಿನಿಂದ‌ ರಕ್ಷಿಸಿಕೊಳ್ಳಲು ಶೆಡ್ ವ್ಯವಸ್ಥೆ ಇಲ್ಲ, ಶೌಚಕ್ಕೆ ಮೂಗು ಮುರಿದುಕೊಂಡು ಹೋಗಬೇಕು ಹಾಗೂ ಪ್ರಯಾಣಿಕರ ಗೋಳು ಕೇಳದ ಸ್ಥಿತಿಯಲ್ಲಿ ಬಸ್ ನಿಲ್ದಾಣಾಧಿಕಾರಿಗಳು ಇದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಬಳಿ ನಿಲ್ದಾಣದ ಸಮಸ್ಯೆ ಬಗ್ಗೆ ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡರು.

ಕನ್ನಡಪ್ರಭ ವಾರ್ತೆ ಕಡೂರು

ಮಂಗಳವಾರ ಪಟ್ಟಣದ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ನಿಲ್ದಾಣದ ಅವ್ಯವಸ್ಥೆ ಪರಿಶೀಲಿಸಿ, ಪ್ರಯಾಣಿಕರ ಸುರಕ್ಷತೆ ಕುರಿತು ಮಾಹಿತಿ ಪಡೆದು ಸ್ವಚ್ಛತೆಯಿಲ್ಲದ ನಿಲ್ದಾಣವನ್ನು ಗಮನಿಸಿ ದೂರವಾಣಿ ಮೂಲಕ ಸಾರಿಗೆ ಇಲಾಖೆಯ ವಿಭಾಗ ನಿಯಂತ್ರಣಾಧಿಕಾರಿಗೆ ತರಾಟೆಗೆ ತೆಗೆದುಕೊಂಡರು.

ನಿಲ್ದಾಣದಲ್ಲಿರುವ ತಾಯಿ ಮಗುವಿಗೆ ಹಾಲುಣಿಸುವ ಕೊಠಡಿಗೆ ಬೀಗ ಹಾಕಿರುವ ಕುರಿತು ಗರಂ ಆದ ಅಧ್ಯಕ್ಷೆ, ಸುಡುಬಿಸಿಲಲ್ಲಿ ನಿಲ್ಲುವ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ನಿರ್ಲಕ್ಷತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮೂರು ದಿನಗಳಲ್ಲಿ ಬಸ್ ನಿಲ್ದಾಣಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳ ಜೊತೆ ಕುಡಿಯುವ ನೀರು, ಶೌಚಾಲಯ ಶುಚಿಗೊಳಿಸಿ ಪ್ರಯಾಣಿಕರ ಹಿತ ಕಾಪಾಡಬೇಕು ಎಂದು ಸೂಚನೆ ನೀಡಿದರು.

ಇದಕ್ಕೂ ಮುನ್ನ ಕಡೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ವ್ಯವಸ್ಥೆ ಪರಿಶೀಲಿಸಿದರು. ಪೊಲೀಸ್ ವೃತ್ತ ನಿರೀಕ್ಷಕ ರಫೀಕ್ ರವರ ಕಚೇರಿಯಲ್ಲಿ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ದೂರುಗಳ ಸ್ಪಂದನೆ ಬಗ್ಗೆ ಕ್ಯೂರ್ ಆರ್ ಕೋಡ್ ಸ್ಕ್ಯಾನಿಂಗ್ ಮೂಲಕ 1 ರಿಂದ 5 ರವರೆಗೆ ರೇಟಿಂಗ್ ನೀಡಬಹುದು. ಇದರಿಂದ ಪೊಲೀಸರ ಸ್ಪಂದನೆಯ ಕಾರ್ಯ ವೈಖರಿ ದಾಖಲಾಗುತ್ತದೆ. ದೂರುದಾರರಿಗೆ ಇಲಾಖೆಯ ಸಿಬ್ಬಂದಿ ಸ್ಪಂದನೆ ಮುಖ್ಯ. ಮುಖ್ಯವಾಗಿ ಹೆಣ್ಣುಮಕ್ಕಳ ರಕ್ಷಣೆಗಾಗಿ ಆರಕ್ಷಕ ಗೆಳತಿಯನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿನಿಯರ ಪ್ರತಿ ಹಾಸ್ಟೆಲ್‌ಗಳಲ್ಲಿ ಮಹಿಳಾ ಪಿಎಸ್ಐ ಹಾಗೂ ಮಹಿಳಾ ಸಿಬ್ಬಂದಿ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಆಯೋಗದ ಅಧ್ಯಕ್ಷರಿಗೆ ವಿವರಿಸಿದರು.

ಈ‌ ನಡುವೆ ರಿಜಿಸ್ಟರ್ ಬುಕ್‌ನಲ್ಲಿದ್ದ ದೂರುದಾರರೊಬ್ಬರಿಗೆ ಕರೆ ಮಾಡಿ ಪೊಲೀಸರ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಪಿಎಸ್ಐಗಳಾದ ಸರ್ಜಿತ್ ಕುಮಾರ್, ಲೀಲಾವತಿ, ವಿದ್ಯಾ, ಸಿಡಿಪಿಒ ಶಿವಪ್ರಕಾಶ್, ರೈಲ್ವೆ ಪೊಲೀಸ್ ಇಲಾಖೆಯ ಎಎಸ್ಐ‌ ನವೀನ್, ಸುನೀಲ್ ಮತ್ತಿತರಿದ್ದರು.