ಡಾ.ಫ.ಗು. ಹಳಕಟ್ಟಿ ವಚನ ವಿಶ್ವವಿದ್ಯಾಲಯವಿದ್ದಂತೆ: ಪಿ.ಎಚ್. ಪೂಜಾರ

| Published : Jul 03 2024, 12:22 AM IST

ಡಾ.ಫ.ಗು. ಹಳಕಟ್ಟಿ ವಚನ ವಿಶ್ವವಿದ್ಯಾಲಯವಿದ್ದಂತೆ: ಪಿ.ಎಚ್. ಪೂಜಾರ
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದ ಬಸವಾದಿ ಪ್ರಮಥರು ರಚಿಸಿದ ವಚನಗಳನ್ನು ಇಂದು ನಮಗೆಲ್ಲ ತಲುಪಿಸುವ ಕಾರ್ಯ ಮಾಡಿದ ಡಾ.ಫ.ಗು. ಹಳಕಟ್ಟಿ ಅವರು ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

12ನೇ ಶತಮಾನದ ಬಸವಾದಿ ಪ್ರಮಥರು ರಚಿಸಿದ ವಚನಗಳನ್ನು ಇಂದು ನಮಗೆಲ್ಲ ತಲುಪಿಸುವ ಕಾರ್ಯ ಮಾಡಿದ ಡಾ.ಫ.ಗು. ಹಳಕಟ್ಟಿ ಅವರು ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.

ನವನಗರದ ಡಾ.ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಫ.ಗು. ಹಳಕಟ್ಟಿ ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಳಕಟ್ಟಿಯವರು ಹುಟ್ಟೂರು ಧಾರವಾಡವಾಗಿದ್ದರೂ ಅವರ ಕರ್ಮಭೂಮಿ ವಿಜಯಪುರವಾಗಿತ್ತು. ವಿದ್ಯಾರ್ಥಿ ದಿನಗಳಲ್ಲಿಯೇ ಕನ್ನಡ ನಾಡುನುಡಿ ನೆಲ, ಜಲ ಸಾಹಿತ್ಯ ಸಂಸ್ಕೃತಿಗಾಗಿ ದುಡಿಯಲು ದೃಢಸಂಕಲ್ಪ ಮಾಡಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಅನೇಕ ಸಂಘ-ಸಂಸ್ಥೆ ಸ್ಥಾಪನೆಗಳನ್ನು ಸಹ ಸ್ಥಾಪನೆ ಮಾಡಿದ್ದು, ಅದರಲ್ಲಿ ವಿಜಯಪುರದ ಇಂದಿನ ಬಿ.ಎಲ್.ಡಿ.ಇ ಸಂಸ್ಥೆ, ಸಿದ್ದೇಶ್ವರ ಅರ್ಬನ್ ಕೋ-ಆಫ್‌ ಬ್ಯಾಂಕ್, ಗ್ರಾಮೀಣ ಅಭಿವೃದ್ಧಿ ಸಂಘ, ನೇಕಾರ ಸಂಘ, ಹತ್ತಿ ಮಾರಾಟ ಸಂಘಗಳು ಸೇರಿದಂತೆ ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿ 1951ರಲ್ಲಿ ನವ ಕರ್ನಾಟಕ ಎಂಬ ವಾರ ಪತ್ರಿಕೆ ಆರಂಭಿಸಿದ್ದರು. ಇಂತಹ ಮಹಾನ್ ವ್ಯಕಿ ನಮ್ಮ ಭಾಗದವರಾಗಿದ್ದು, ನಮಗೆಲ್ಲ ಹೆಮ್ಮೆ ಎಂದ ಅವರು ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಜೀವನದಲ್ಲಿ ಅನುಸರಿಸಿಕೊಂಡಾಗ ಮಾತ್ರ ಜಯಂತ್ಯುತ್ಸವ ಆಚರಿಸಿದಕ್ಕೂ ಸಾರ್ಥಕವಾಗುತ್ತದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಡಾ.ಅಲ್ಲಮಪ್ರಭು ಅಂಬಿ ಮಾತನಾಡಿ, ಡಾ.ಫ.ಗು. ಹಳಕಟ್ಟಿ ಅವರು 12ನೇ ಶತಮಾನದ ನಶಿಸಿ ಹೋಗುತ್ತಿರುವ ಅಪರೂಪದ ತಾಳೆಗರಿಯಲ್ಲಿರುವ ವಚನಗಳನ್ನು ಮರು ಮುದ್ರಣಗೊಳಿಸಿದ ಕೀರ್ತಿ ಇವರದ್ದಾಗಿದ್ದು, ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. 1920ರಲ್ಲಿ ಮುಂಬಯಿ ವಿಧಾನ ಪರಿಷತ್ತಿನ ಸದಸ್ಯತ್ವ ಪಡೆದಿದ್ದರು. ಮೂರನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷರಾಗಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ ಪಡೆದು, 1933ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇವರ ಸೇವೆ ಕಂಡು ಕರ್ನಾಟಕ ವಿಶ್ವವಿದ್ಯಾಲಯ 1956ರಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿತು ಎಂದರು.

ತಹಸೀಲ್ದಾರ್‌ ಅಮರೇಶ ಪಮ್ಮಾರ, ಸಮುದಾಯದ ಮುಖಂಡರಾದ ಡಾ.ಎಂ.ಎಸ್. ದಡ್ಡೇನವರ, ಗುರುಬಸಪ್ಪ ನಿಲುಗಲ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಇತರರು ಉಪಸ್ಥಿತರಿದ್ದರು. ಶಂಕರಲಿಂಗ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

ಪತ್ನಿಯ ಊರಾದ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿರುವ ಮನೆಯಲ್ಲಿ ದೊರೆತ ಅಪರೂಪದ ಹಾಗೂ ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಗಂಟೊಂದರಿಂದ ಪ್ರಭಾವಿತರಾಗಿ ಬಸವಣ್ಣನವರ ಕಾಲದ ವಚನಗಳನ್ನು ಹುಡುಕಿ ಹೊರತಂದ ಕೀರ್ತಿ ಹಳಕಟ್ಟಿಯವರದ್ದಾಗಿದೆ. ಆರ್ಥಿಕ ಸಂಕಷ್ಟದಲ್ಲಿ ಇಂತಹ ವಚನಗಳನ್ನು ಮರುಮುದ್ರಿಸಲು ತಮ್ಮ ಮನೆಯನ್ನೇ ಮಾರಿದರು. ಒಂದೆಡೆ ವಕೀಲ ವೃತ್ತಿ, ಪತ್ರಿಕೋದ್ಯಮ, ನೇಕಾರಿಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ

- ಪಿ.ಎಚ್. ಪೂಜಾರ ವಿಧಾನ ಪರಿಷತ್ ಸದಸ್ಯ