ಅದ್ಭುತ ಬಹುಭಾಷಾ ವಿಶಾರದ ಮಾತೃ ಹೃದಯಿ ಡಾ. ಪಂಚಾಕ್ಷರಿ

| Published : Jan 08 2024, 01:45 AM IST

ಸಾರಾಂಶ

ಡಾ. ಪಂಚಾಕ್ಷರಿ ಹಿರೇಮಠ ಅವರ ಅನುವಾದಿತ ಕೃತಿ ‘ಹೇಮಂತ ಋತುವಿನ ಸ್ವರಗಳು’ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಕೃತಿಯ ಕುರಿತು ಉಪನ್ಯಾಸ ಸಾಹಿತಿ ಚನ್ನಪ್ಪ ಅಂಗಡಿ ನೀಡಿದರು.

ಹೇಮಂತ ಋತುವಿನ ಸ್ವರಗಳು ಕೃತಿಯ ಕುರಿತು ಉಪನ್ಯಾಸದಲ್ಲಿ ಸಾಹಿತಿ ಚನ್ನಪ್ಪ ಅಂಗಡಿ

ಕನ್ನಡಪ್ರಭ ವಾರ್ತೆ ಧಾರವಾಡ

ಹೈದರಾಬಾದ್‌ ವಿಮೋಚನಾ ಹೋರಾಟದಲ್ಲಿ ರಜಾಕರ ಹಾಗೂ ಹೈದರಾಬಾದ್‌ ನಿಜಾಮರ ಸೈನ್ಯದ ಗುಂಡಿಗೆ ಎದೆಯೊಡ್ಡಿ ಹೋರಾಟ ಮಾಡಿದ್ದ ಹಿರಿಯ ಪಂಚ ಭಾಷಾ ಕವಿ ಡಾ. ಪಂಚಾಕ್ಷರಿ ಹಿರೇಮಠ ಅದ್ಭುತ ಬಹುಭಾಷಾ ವಿಶಾರದ ಮಾತೃ ಹೃದಯೀ ಆಗಿದ್ದರು ಎಂದು ಸಾಹಿತಿ ಚನ್ನಪ್ಪ ಅಂಗಡಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ವಿದ್ಯಾ ವಾಚಸ್ಪತಿ ಡಾ. ಪಂಚಾಕ್ಷರಿ ಹಿರೇಮಠ ಅವರ 91ನೇ ಜನ್ಮ ದಿನಾಚರಣೆ ದತ್ತಿ ಅಂಗವಾಗಿ ಆಯೋಜಿಸಿದ್ದ ಡಾ. ಪಂಚಾಕ್ಷರಿ ಹಿರೇಮಠ ಅವರ ಅನುವಾದಿತ ಕೃತಿ ‘ಹೇಮಂತ ಋತುವಿನ ಸ್ವರಗಳು’ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಕೃತಿಯ ಕುರಿತು ಉಪನ್ಯಾಸ ನೀಡಿದರು.

ಅಸ್ಖಲಿತ ಮಾತಿನ ಹರಿವು, ಅವರ ಸ್ಪಷ್ಟ ಧ್ವನಿಯೊಂದಿಗೆ ಬದುಕಿನುದ್ದಕ್ಕೂ ತತ್ವ ಸಿದ್ಧಾಂತದ ಮೇಲೆ ಬಾಳಿ ಬದುಕಿದವರು. ವಿಭಿನ್ನ ಸಂಸ್ಕೃತಿಯ ಹಿನ್ನೆಲೆಯ ಪರಿಚಯಿಸುವ ಅನುವಾದಿತ ವಿಭಾಗದಲ್ಲಿ ‘ಹೇಮಂತ ಋತುವಿನ ಸ್ವರಗಳು’ ಕುರಿತಾಗಿ ಅದರ ಅಂತರ್ಗತ ಕಥಾನಕ ಹಂದರಗಳನ್ನು ವಿಮರ್ಶಾತ್ಮಕವಾಗಿ ಚನ್ನಪ್ಪ ಅಂಗಡಿ ಹೇಳಿದರು.

ಸಂವಿಧಾನದ ಪರಿಚ್ಛೇದದಲ್ಲಿ ಸೂಚಿಸಿದಂತೆ 24 ಭಾಷೆಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಇದುವರೆಗೆ 7000 ಇಂಥ ಕೃತಿಗಳನ್ನು ಪ್ರಕಟ ಮಾಡಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಮತ್ತು ಕನ್ನಡದಲ್ಲಿಯೇ ಅನುವಾದಿಸಿ ಆ ಮೂಲಕ ಜಾತಿವಾರು, ಸಂಸ್ಕೃತಿ, ರಾಜಕಾರಣಿಗಳ ಮಕ್ಕಳು ಮೋಜು ಮಸ್ತಿಯಲ್ಲಿ ಸಾಗಿದ್ದ ಅನೇಕ ನೋವಿನ ಸಂಗತಿಗಳು ಸೇರಿದಂತೆ ಹೃದಯ ವಿದ್ರಾವಕ ಘಟನೆಗಳು ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಹಾಗೂ ದೇಶ-ವಿದೇಶಗಳಿಗೂ ಸಲ್ಲುವ ಕಥಾನಕಗಳು ಡಾ. ಪಂಚಾಕ್ಷರಿ ಹಿರೇಮಠರ ಕೃತಿಗಳಲ್ಲಿ ಕಂಡು ಬರುತ್ತವೆ ಎಂದು ಅಂಗಡಿ ವಿವರಿಸಿದರು.

ದತ್ತಿದಾನಿಗಳ ಪರವಾಗಿ ಮಾತನಾಡಿದ ಖ್ಯಾತ ಕಾದಂಬರಿಕಾರ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಮಾತೃ ವಾತ್ಸಲ್ಯದ ಭಾವುಕ ಜೀವಿ, ಸದಾ ಎಲ್ಲರನ್ನು ಪ್ರೀತಿಸಿ, ಪ್ರೀತಿಯ ಧಾರೆ ಎರೆದವರು ಡಾ. ಪಂಚಾಕ್ಷರಿ ಹಿರೇಮಠ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಉರ್ದು, ಹಿಂದಿ ಕವಿತೆಗಳಿದ್ದರೆ ಅದು ಪಂಚಾಕ್ಷರಿ ಹಿರೇಮಠ ಧ್ವನಿಯು ಆಕಾಶವಾಣಿಯಲ್ಲಿ ಬಿತ್ತರಿಸುವ ಅನೇಕಾನೇಕ ಕಾವ್ಯದ ನೆನಪುಗಳು ಕಾಡುತ್ತವೆ. ಕರುಳು, ಭೂಮಿಯ ಋಣದಂತ ಅನೇಕ ಕೃತಿಗಳಲ್ಲಿ ಅನುಭಾವ ಸಿಗುತ್ತದೆ. ವಿದ್ವತ್‌ಪೂರ್ಣ ಭಾಷಣ, ಅದ್ಭುತ ಮೇಧಾವಿ ವಿದ್ವಾಂಸರಾಗಿ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸುವಲ್ಲಿ ಅದ್ವಿತೀಯ ಪಾತ್ರ ವಹಿಸಿದ್ದರು ಎಂದು ಹಲವಾರು ವಿಚಾರಗಳನ್ನು ತಿಳಿಸಿ 100ಕ್ಕೂ ಹೆಚ್ಚು ಕೃತಿಳನ್ನು ಬರೆದ ಹೆಗ್ಗಳಿಕೆ ಡಾ. ಪಂಚಾಕ್ಷರಿ ಹಿರೇಮಠ ಅವರದ್ದಾಗಿದೆ ಎಂದರು.

ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಂಗಣ್ಣ ಕುಂಟಿ, ಪ್ರೊ. ಜಯದೇವ ಹಿರೇಮಠ, ಎಂ.ಎಂ. ಚಿಕ್ಕಮಠ, ಪುಷ್ಪಾ ಹಿರೇಮಠ, ಹೆಲನ್ ಮೈಸೂರ, ಶಿವರಾಮ, ಕೂಡಲಪ್ಪ ಮೆಣಸಿನಕಾಯಿ, ಎ.ಎಲ್. ದೇಸಾಯಿ ಇದ್ದರು.