ಕೊಳವೆಬಾವಿ ಮೊರೆ ಹೋಗುತ್ತಿರುವ ನದಿ ತೀರದ ರೈತರು!

| Published : Jan 08 2024, 01:45 AM IST / Updated: Jan 08 2024, 01:27 PM IST

ಸಾರಾಂಶ

ನದಿ ತೀರದ ಬಹುತೇಕ ಗ್ರಾಮಗಳಲ್ಲಿ ರೈತರು ತಮ್ಮ ಭತ್ತದ ಗದ್ದೆಗಳಲ್ಲೇ ಕೊಳವೆಬಾವಿ ಕೊರೆಸುತ್ತಿದ್ದಾರೆ. ರೈತರು ಹಗಲು-ರಾತ್ರಿ ಎನ್ನದೇ ಕೊಳವೆ ಬಾವಿ ಕೊರೆತ ಜೋರಾಗಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತುಂಗಭದ್ರಾ ನದಿ ನೀರುವ ಬಳಸಿ ನೀರಾವರಿ ಮಾಡುತ್ತಿದ್ದ ನದಿತೀರದ ರೈತರು ಇದ್ದಕ್ಕಿದ್ದಂತೆ ಕೊಳವೆಬಾವಿ ಮೊರೆ ಹೋಗಿದ್ದು, ಎಲ್ಲೆಂದರಲ್ಲಿ ಈಗ ಕೊಳವೆ ಬಾವಿ ಕೊರೆತ ಜೋರಾಗಿದೆ!

ಬರಗಾಲದ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತುಂಗಭದ್ರಾ ನದಿ ತೀರದ ರೈತರು ಎರಡನೇ ಬೆಳೆ ಬೆಳೆಯಲು ನದಿ ನೀರು ಬಳಸದಂತೆ ಈಗಾಗಲೇ ಜಿಲ್ಲಾಡಳಿತ ರೈತರಿಗೆ ಎಚ್ಚರಿಕೆ ನೀಡಿದೆ.

 ಜ. 15ರಿಂದ ಮೇ 15ರ ವರೆಗೂ ಸಿಂಗಟಾಲೂರು ಬ್ಯಾರೇಜ್ ಕೆಳಗಿರುವ ಗ್ರಾಮಗಳಿಗೆ ಮತ್ತು ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕೆಂಬ ಉದ್ದೇಶದಿಂದ ರಾಜವಾಳದಿಂದ ಹಕ್ಕಂಡಿ ಗ್ರಾಮದವರೆಗೂ ನದಿ ತೀರದ ರೈತರ ಪಂಪ್‌ಸೆಟ್‌ಗಳಿಗೆ ಕಲ್ಪಿಸಿರುವ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲು ಜೆಸ್ಕಾಂ ಸಿದ್ಧತೆ ಮಾಡಿಕೊಂಡಿದೆ.

ವಿದ್ಯುತ್‌ ಸಂಪರ್ಕ ಸ್ಥಗಿತ ವೇಳೆ ರೈತರು ಗಲಾಟೆ ಹಾಗೂ ತೊಂದರೆ ನೀಡುತ್ತಾರೆಂಬ ಕಾರಣಕ್ಕಾಗಿ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಹಾಗಾಗಿ ಸರ್ಕಾರದ ವಿರುದ್ಧ ಹೋರಾಟ ಅಸಾಧ್ಯ ಎನ್ನುವುದನ್ನು ಮನಗಂಡ ರೈತರು ತಮ್ಮ ಹೊಲಗಳಲ್ಲಿ ಕೊಳವೆ ಬಾವಿ ಕೊರೆಸಿ ಎರಡನೆ ಬೆಳೆ ರಕ್ಷಣೆಗೆ ಮುಂದಾಗಿದ್ದಾರೆ.

ನಿತ್ಯ 3 ಅಡಿ ಕಡಿಮೆ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಲ್ಲಿ 1.6 ಟಿಎಂಸಿ ಮಾತ್ರ ನೀರು ಸಂಗ್ರಹವಾಗಿದೆ. ಕಳೆದೊಂದು ವಾರದ ಹಿಂದೆ 1.8 ಟಿಎಂಸಿ ನೀರು ಸಂಗ್ರಹವಾಗಿತ್ತು. ಈಗಾಗಲೇ ನದಿ ತೀರದ ಗ್ರಾಮಗಳಲ್ಲಿ ರೈತರು ಭತ್ತದ ನಾಟಿ ಮಾಡುತ್ತಿದ್ದು, ನಿತ್ಯ ನದಿಯಲ್ಲಿ 2ರಿಂದ 3 ಅಡಿ ನೀರು ಕಡಿಮೆಯಾಗುತ್ತಿದೆ. ಬ್ಯಾರೇಜ್‌ನಲ್ಲಿ ಸಂಗ್ರಹವಾಗಿರುವ ನೀರು 1 ತಿಂಗಳಿಗೆ ಮಾತ್ರ ಆಗಲಿದೆ.

ನದಿ ತೀರದ ಬಹುತೇಕ ಗ್ರಾಮಗಳಲ್ಲಿ ರೈತರು ತಮ್ಮ ಭತ್ತದ ಗದ್ದೆಗಳಲ್ಲೇ ಕೊಳವೆಬಾವಿ ಕೊರೆಸುತ್ತಿದ್ದಾರೆ. ರೈತರು ಹಗಲು-ರಾತ್ರಿ ಎನ್ನದೇ ಕೊಳವೆ ಬಾವಿ ಕೊರೆತ ಜೋರಾಗಿದೆ.

ಮಳೆ ಇಲ್ಲದೇ ಅಂತರ್ಜಲ ಕಡಿಮೆಯಾಗುತ್ತಿದ್ದರೂ ತಾಲೂಕಿನ ಮಾಗಳ ಗ್ರಾಮದಲ್ಲಿ ಕೊಳವೆ ಬಾವಿಗಳಲ್ಲಿ ಭರಪೂರ ನೀರು ಸಿಕ್ಕಿದೆ. ನೀರು ಸಿಕ್ಕಿರುವ ಪ್ರತಿಯೊಂದು ಕೊಳವೆಬಾವಿಯಲ್ಲಿ 3ರಿಂದ 4 ಇಂಚು ನೀರು ರೈತರಿಗೆ ಸಿಕ್ಕಿದೆ. ನೀರು ಸಿಕ್ಕಿರುವುದರಿಂದ ರೈತರು ಬಹಳ ಖುಷಿಯಲ್ಲಿ ಭತ್ತದ ನಾಟಿ ಮಾಡುತ್ತಿದ್ದಾರೆ.

ನೀರು ಬಿಡುಗಡೆ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಲ್ಲಿ ಸದಸ್ಯ 1.6 ಟಿಎಂಸಿ ನೀರು ಲಭ್ಯವಿದೆ. ಈ ನೀರು ಒಂದು ತಿಂಗಳಿಗೆ ಮಾತ್ರ ಆಗಲಿದೆ. ಫೆಬ್ರವರಿಯಲ್ಲಿ ಮೈಲಾರಲಿಂಗೇಶ್ವರ ಜಾತ್ರೆ ಇರುವ ಹಿನ್ನೆಲೆಯಲ್ಲಿ ಭದ್ರಾ ನೀರು ಬಿಡುಗಡೆ ಮಾಡಬೇಕೆಂಬ ವಿಷಯ ಚರ್ಚೆಯಲ್ಲಿದೆ. ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಬ್ಯಾರೇಜಿನ ಕೆಳಗಿನ ಹಳ್ಳಿಗಳಿಗೆ ನೀರು ಬಿಡುಗಡೆ ಮಾಡುತ್ತೇವೆ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಉಪ ವಿಭಾಗದ ಎಇಇ ರಾಘವೇಂದ್ರ ತಿಳಿಸಿದರು.

ಭತ್ತ ಬೆಳೆಯಲು ಪ್ರಯತ್ನ: ಈಗಾಗಲೇ ಜಿಲ್ಲಾಡಳಿತವು ನದಿ ನೀರು ಬಳಕೆ ಮಾಡಿ 2ನೇ ಬೆಳೆಯನ್ನು ಬೆಳೆಯಬಾರದು ಎಂದು ಆದೇಶ ಹೊರಡಿಸಿರುವ ಹಿನ್ನೆಯಲ್ಲಿ ಭತ್ತ ಬೆಳೆಯಲು ನೀರು ಕಡಿಮೆಯಾಗುತ್ತಿದೆ. ಆದ್ದರಿಂದ ನಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿಕೊಂಡಿದ್ದೇವೆ. ಬರ ಇದ್ದರೂ ನೀರು ಚೆನ್ನಾಗಿ ಬಂದಿದೆ. ಆ ನೀರಿನಲ್ಲಿ ಭತ್ತ ಬೆಳೆಯಲು ಪ್ರಯತ್ನಿಸುತ್ತೇವೆ ಎಂದರು ರೈತ ಜೆ. ಬಸವರಾಜ.