ಸಾರಾಂಶ
ನಿಗಮ-ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿ ಸಿದ್ಧಪಡಿಸುವಾಗ ನಮ್ಮ ಅಭಿಪ್ರಾಯವನ್ನು ಯಾರೂ ಕೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲೇ ನಿಗಮ-ಮಂಡಳಿಗಳಿಗೆ ನಿರ್ದೇಶಕರು/ಸದಸ್ಯರ ಆಯ್ಕೆಗೆ ಸಮಿತಿ ರಚನೆ
ಬೆಂಗಳೂರು : ನಿಗಮ-ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿ ಸಿದ್ಧಪಡಿಸುವಾಗ ನಮ್ಮ ಅಭಿಪ್ರಾಯವನ್ನು ಯಾರೂ ಕೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲೇ ನಿಗಮ-ಮಂಡಳಿಗಳಿಗೆ ನಿರ್ದೇಶಕರು/ಸದಸ್ಯರ ಆಯ್ಕೆಗೆ ಸಮಿತಿ ರಚನೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಮಾಡಿದ್ದಾರೆ.
ಜತೆಗೆ, ಸಮಿತಿಯು ನಿಗಮ-ಮಂಡಳಿ ಸದಸ್ಯರ ಪಟ್ಟಿಯನ್ನು ಸಿದ್ಧಪಡಿಸಿ ಒಂದು ತಿಂಗಳ ಒಳಗಾಗಿ ಸಲ್ಲಿಕೆ ಮಾಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಹಿಂದೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿ ಸಿದ್ಧಪಡಿಸುವಾಗ ನಮ್ಮ ಅಭಿಪ್ರಾಯ ಕೇಳಿಲ್ಲ ಎಂದು ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದರು. ನಾನು ಸಹ ಎಂಟು ವರ್ಷ ಪಕ್ಷದ ಅಧ್ಯಕ್ಷನಾಗಿದ್ದವನು. ಯಾರೆಲ್ಲ ಕೆಲಸ ಮಾಡಿದ್ದಾರೆ, ಮಾಡಿಲ್ಲ ಎಂಬುದು ಗೊತ್ತಿರುತ್ತದೆ. ಕೆಲಸ ಮಾಡದವರಿಗೆ ಅವಕಾಶ ನೀಡಿದರೆ ಕೆಲಸ ಮಾಡಿದವರಿಗೆ ನೋವು, ಅಸಮಾಧಾನವಾಗುತ್ತದೆ. ಹೀಗಾಗಿ ಮುಖಂಡರು, ಜಿಲ್ಲಾ ಅಧ್ಯಕ್ಷರ ಸಲಹೆ ಪಡೆಯಬೇಕಾಗುತ್ತದೆ ಎಂದಿದ್ದರು.
ಇದೀಗ ಸೋಮವಾರ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಗಮ-ಮಂಡಳಿಗಳ ನಿರ್ದೇಶಕರು/ಸದಸ್ಯರುಗಳನ್ನು ಆಯ್ಕೆ ಮಾಡಲು ಗೃಹ ಸಚಿವ ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದಾರೆ. ಸಮಿತಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಸಮಿತಿಯು ಕೂಡಲೇ ಕಾರ್ಯಪ್ರವೃತ್ತವಾಗಿ ಒಂದು ತಿಂಗಳ ಒಳಗೆ ನಿರ್ದೇಶಕರು ಅಥವಾ ಸದಸ್ಯರುಗಳ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ.