ಶ್ವಾಸಕೋಶದ ಸೋಂಕು ಹಾಗೂ ಅನಾರೋಗ್ಯದಿಂದ ಭಾನುವಾರ ನಿಧನರಾದ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಗಣ್ಯರು ಹಾಗೂ ಜನಸಾಗರವೇ ಹರಿದುಬಂದಿತು.
-
- - -ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಶ್ವಾಸಕೋಶದ ಸೋಂಕು ಹಾಗೂ ಅನಾರೋಗ್ಯದಿಂದ ಭಾನುವಾರ ನಿಧನರಾದ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಗಣ್ಯರು ಹಾಗೂ ಜನಸಾಗರವೇ ಹರಿದುಬಂದಿತು. ಚಳ್ಳಕೆರೆ ನಗರದ ಎಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕೃಷಿ ಸಚಿವ ಚೆಲುವರಾಯಸ್ವಾಮಿ, ಕಾರ್ಮಿಕ ಸಚಿವ ಸಂತೋಷ್ ಲಾಡ್, ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಎಂ. ಶಾಮನೂರು ಹಾಗೂ ಕೇಂದ್ರದ ಮಾಜಿ ಸಚಿವ ಜಿ.ಎಂ ಸಿದ್ದೇಶ್ವರ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಸುಧಾಕರ್ 45 ವರ್ಷಗಳಿಂದ ನನಗೆ ಆತ್ಮೀಯ ಸ್ನೇಹಿತರಾಗಿದ್ದರು. ಜೈನ ಸಮುದಾಯದವರಾಗಿದ್ದರೂ ಎಲ್ಲ ವರ್ಗದ ಜನರ ಪ್ರೀತಿ ಗಳಿಸಿ ಜನಾನುರಾಗಿಯಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಮ್ಮನ್ನು ಅಗಲಿರುವುದು ದುರದೃಷ್ಟಕರ. ಇಂದು ಅಂತಿಮ ದರ್ಶನಕ್ಕೆ ಹರಿದು ಬರುತ್ತಿರುವ ಜನಸಾಗರವೇ ಅವರು ಎಂತಹ ಸ್ನೇಹಜೀವಿ ಎಂಬುದಕ್ಕೆ ಸಾಕ್ಷಿ ಎಂದು ಸ್ಮರಿಸಿದರು.ಪ್ರಭಾ ಮಲ್ಲಿಕಾರ್ಜುನ ಸಂತಾಪ:
ಸಚಿವ ಡಿ.ಸುಧಾಕರ್ ಅವರು ಒಬ್ಬ ಅತ್ಯುತ್ತಮ ರಾಜಕಾರಣಿಯಾಗಿದ್ದರು. ಅವರು ಜನಾನುರಾಗಿಯಾಗಿ ಕೆಲಸ ಮಾಡಿದ ರೀತಿ ಇಂದಿನ ಎಲ್ಲ ರಾಜಕಾರಣಿಗಳಿಗೆ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಹೇಳಿದರು. ಡಿ.ಸುಧಾಕರ್ ಅವರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಸುಧಾಕರ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸಿದ್ದಾರೆ. ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಅವರ ಕೆಲಸಗಳ ಬಗ್ಗೆ ಕೇಳಿದಾಗ ಅವರು ಜನರಿಗಾಗಿ ಎಷ್ಟು ಶ್ರಮಿಸಿದ್ದಾರೆ ಎಂಬುದು ತಿಳಿಯುತ್ತದೆ. ಸ್ತ್ರೀಶಕ್ತಿ ಸಂಘಗಳ ಕಾರ್ಯಕ್ರಮಗಳಲ್ಲಿ ಅವರನ್ನು ಭೇಟಿಯಾದಾಗ, ಅವರಿಗೆ ಸಂಘಟನೆಯ ಮೇಲೆ ಇದ್ದ ನಂಬಿಕೆ ಮತ್ತು ತಳಮಟ್ಟದ ಜನರೊಂದಿಗೆ ಅವರಿಗಿದ್ದ ಸಂಪರ್ಕ ಎಂತಹದ್ದು ಎಂಬುದು ನನಗೆ ಅರಿವಾಯಿತು. ಸಹಕಾರಿ ಕ್ಷೇತ್ರದಲ್ಲಿ ಅವರ ಸೇವ ಅಗಾಧವಾದದು. ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯವಾದುದು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಅವರು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ನೂತನ ಶಾಸಕ ಸಮರ್ಥ ಶಾಮನೂರು ಇದ್ದರು.- - -
(ಫೋಟೋಗಳಿವೆ)