ಕೊಟ್ಟೂರು: ದಿವಂಗತ ಡಾ. ಪುನೀತ ರಾಜಕುಮಾರ ಸ್ವಾರ್ಥವಿಲ್ಲದೆ ಸಮಾಜ ಸೇವೆ ಮಾಡಿದ್ದು, ಈ ಕಾರಣಕ್ಕಾಗಿ ಜನಮಾನಸದಲ್ಲಿ ಅವರು ಅಜರಾಮರರಾಗಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ ಹೇಳಿದರು.
ಇಲ್ಲಿನ ತೇರು ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಡಾ . ಪುನೀತ ರಾಜ್ ಕುಮಾರ ಅವರ 51ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪುನೀತ ಅವರ ಕಟ್ಟಾ ಅಭಿಮಾನಿಯಾಗಿರುವ ಪಟ್ಟಣದ ಆರ್. ಪ್ರಕಾಶ್ ಮತ್ತು ಅವರ ಬಳಗದವರೂ ಪುನೀತ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಜನ್ಮದಿನಾಚರಣೆ ಎಂದು ಪ್ರತಿ ವರ್ಷ ಹಲವು ಬಗೆಯ ಸಮಾಜ ಸೇವೆ ಮಾಡಿಕೊಂಡು ಬರುತ್ತಿರುವುದು ಮಾದರಿ ಎಂದರು.
ಡಾ. ಪುನೀತರಾಜ ಕುಮಾರ ಹುಟ್ಟು ಹಬ್ಬದ ನಿಮಿತ್ತ ಇಲ್ಲಿನ ಬಸ್ ನಿಲ್ದಾಣಗಳಲ್ಲಿ ನೀರಿನ ಅರವಟ್ಟಿಗೆ ಉದ್ಗಾಟಿಸಲಾಯಿತು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.ಪಪಂ ಮಾಜಿ ಸದಸ್ಯ ಬಿ ದುರುಗೇಶ, ಡಿಎಸ್ಎಸ್ ಮುಖಂಡ ಬಿ. ಮರಿಸ್ವಾಮಿ ಮಾತನಾಡಿದರು, ಕಲಾವಿದ ಸಿದ್ದೇಶ್ ಅಂಗಡಿ ನಾಗೇಶ್, ರಾಜೇಶ್ವರಿ, ಪರಿಮಳಾ ಮತ್ತಿತರರು ಕಲ್ಪತರು ಕಲಾಟ್ರಸ್ಟ್ ವತಿಯಿಂದ ಪುನೀತ್ ರಾಜಕುಮಾರ್ ಅವರಿಗೆ ಗೀತೆಗಳ ಮೂಲಕ ನಮನ ಸಲ್ಲಿಸಿದರು.
ಮುಖಂಡರುಗಳಾದ ಪಿ. ಸುಧಾಕರ ಪಾಟೀಲ್, ಡಾ. ರಾಕೇಶ್, ಟಿ. ಹನುಮಂತಪ್ಪ, ನಾಗರಾಜ ಗೌಡ , ಶಿಕ್ಷಕ ಅಜ್ಜಪ್ಪ, ರಮೇಶ್, ಆರ್. ಶ್ರೀನಿವಾಸ, ಅಪ್ಪು ಅಭಿಮಾನಿ ಬಳಗದ ಆರ್. ಪ್ರಕಾಶ್, ಬಿ. ರಾಜ್, ಕೊಟ್ರೇಶ್, ಅಪ್ಪಣ್ಣ, ವೀರೇಶ್ ಮತ್ತಿತರರು ಇದ್ದರು.
ಅಪ್ಪು ಅಭಿಮಾನಿಗಳಿಂದ ಜನ್ಮದಿನ ಆಚರಣೆ
ಹೊಸಪೇಟೆ: ಡಾ. ಪುನೀತ ರಾಜಕುಮಾರ ಅವರ ಹುಟ್ಟು ಹಬ್ಬವನ್ನು ಹೊಸಪೇಟೆ ನಗರದಲ್ಲಿ ಮಂಗಳವಾರ ಅವರ ಅಭಿಮಾನಿಗಳು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು.ನಗರದ ಡಾ. ಪುನೀತ ರಾಜಕುಮಾರ್ ಪ್ರತಿಮೆಗೆ ಮಾಲಾರ್ಪಣೆ, ವಿಶೇಷ ಪೂಜೆ ಸಲ್ಲಿಸಿದ ಅಪ್ಪು ಅಭಿಮಾನಿಗಳು, ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿ, ಸಂಭ್ರಮಿಸಿದರು.ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು. ಇದೇ ವೇಳೆ ಬಂಗಾರ ಬುಡ್ಡಿ ಚಲನಚಿತ್ರದ ಟೀಸರ್ ಬಿಡುಗಡೆ ಹಾಗೂ ಜೋಗಿ ಕಾಮನ್ ಮ್ಯಾನ್ ಚಲನಚಿತ್ರದ ಹಾಡಿನ ವಿಡಿಯೋ ಬಿಡುಗಡೆ ಮಾಡಲಾಯಿತು.ಅಭಿಮಾನಿಗಳಾದ ಕಿಚಿಡಿ ವಿಶ್ವ, ಜೋಗಿ ತಾಯಪ್ಪ, ಹೊನ್ನೂರು ವಲಿ, ತನ್ವೀರ್ ಶೇಠ್, ಮಹೇಂದ್ರ ಶಾನಬಾಗ ಸೇರಿದಂತೆ ಅಪ್ಪು ಅವರ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.ತಾಲೂಕಿನ ಮರಿಯಮ್ಮನಹಳ್ಳಿ ಬಸ್ ನಿಲ್ದಾಣದಲ್ಲಿರುವ ಡಾ. ಪುನೀತರಾಜಕುಮಾರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮರಿಯಮ್ಮನಹಳ್ಳಿಯ 7ನೇ ವಾರ್ಡಿನಲ್ಲಿ ಅಪ್ಪು ವೃತ್ತದಲ್ಲಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ಮಾಡಲಾಯಿತು.