ಸಾರಾಂಶ
- ನರೇಗಾ ಜಾಬ್ ಕಾರ್ಡ್ ಗೆ ಇ-ಕೆವೈಸಿ ಕಡ್ಡಾಯ
ಕನ್ನಡಪ್ರಭ ವಾರ್ತೆ, ತರೀಕೆರೆಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯಡಿ ಕೆಲಸ ಮಾಡುತ್ತಿರುವ ತರೀಕೆರೆ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿನ ಜಾಬ್ ಕಾರ್ಡ್ ಕೂಲಿಕಾರರಿಗೆ ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯ ಗೊಳಿಸಲಾಗಿದೆ. ತಾಲೂಕಿನ ಎಲ್ಲಾ 26 ಗ್ರಾಮ ಪಂಚಾಯತಿ ವ್ಯಾಪ್ತಿಯ ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರು ಇ-ಕೆವೈಸಿ ಪ್ರಕ್ರಿಯೆ ಅ. 31, 2025ರ ಒಳಗೆ ಪೂರ್ಣಗೊಳಿಸಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ದೇವೇಂದ್ರಪ್ಪ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಸೂಚನೆಯಂತೆ, ಎನ್ ಎಂ ಎಂ ಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ ) ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯ. ಐಇಸಿ ಚಟುವಟಿಕೆಗಳ ಮೂಲಕ ವ್ಯಾಪಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಗ್ರಾಮಸ್ಥರಿಗೆ ಇ-ಕೆವೈಸಿ ಮಹತ್ವ ತಿಳಿಸಲಾಗುತ್ತಿದೆ. ಕಾರ್ಮಿಕರು ತಮ್ಮ ಜಾಬ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಸಹಿತವಾಗಿ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ, ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ ಎಂದು ತಿಳಿಸಿದ್ದಾರೆ.ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಕೂಲಿ ಪಾವತಿಯಲ್ಲಿ ವೇಗ ಮತ್ತು ಪಾರದರ್ಶಕತೆ ಹೆಚ್ಚುತ್ತದೆ. ಕಾರ್ಮಿಕರ ಹಾಜರಿ ಯನ್ನು ಮುಖ ಆಧಾರಿತ ತಂತ್ರಜ್ಞಾನದ ಮೂಲಕ ಎನ್ ಎಂಎಂಎಸ್ ಅಪ್ಲಿಕೇಶನ್ ನಲ್ಲಿ ನಿಖರವಾಗಿ ದಾಖಲಿಸಬಹುದು. ಇದು ನರೇಗಾ ಯೋಜನೆ ವಿಶ್ವಾಸಾರ್ಹತೆ ಮತ್ತು ಪರಿಣಾಮ ಹೆಚ್ಚಿಸುತ್ತದೆ. ಸದ್ಯದಲ್ಲೇ ಎನ್.ಎಂ.ಎಂ.ಎಸ್. ಅಪ್ಲಿಕೇಶನ್ ನಲ್ಲಿ ಕಾರ್ಮಿಕರ ಫೋಟೊ ಸೆರೆಹಿಡಿದು, ಆಧಾರ್ ಸಂಖ್ಯೆಯೊಂದಿಗೆ ಮುಖ ಹೊಂದಾಣಿಕೆ ಮೂಲಕ ಹಾಜರಾತಿ ದೃಢಪಡಿಸಲಾಗುತ್ತಿದೆ. ಇ-ಕೆವೈಸಿ ಪೂರ್ಣಗೊಳಿಸದ ಕಾರ್ಮಿಕರ ಹಾಜರಾತಿ ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ. ತರೀಕೆರೆ ತಾಲೂಕಿನ ಒಟ್ಟು 26 ಗ್ರಾಪಂ ಗಳಲ್ಲಿ 52020 ನೋಂದಣಿ ಆದ ಕೂಲಿಕಾರರು ಇದ್ದಾರೆ. ಅವರಲ್ಲಿ 20308 ಸಕ್ರಿಯ ಕೂಲಿಕಾರರು ಇರುತ್ತಾರೆ. ಇವರೆಲ್ಲರೂ ಇ-ಕೆವೈಸಿ ಮಾಡಿಕೊಳ್ಳಲು ತಿಳಿಸಿದ್ದಾರೆ. ತಾಲೂಕಿನಲ್ಲಿ ಸಾಮೂಹಿಕ ಹಾಗೂ ವೈಯಕ್ತಿಕ ಕಾಮಗಾರಿಗಳ ಮೂಲಕ ಕೂಲಿಕಾರರಿಗೆ 100 ದಿನಗಳ ಉದ್ಯೋಗ ಖಾತ್ರಿ ಜೊತೆಗೆ ದಿನ ಒಂದಕ್ಕೆ ₹370 ಗಂಡು, ಹೆಣ್ಣಿಗೆ ಸಮಾನ ಕೂಲಿ ಒದಗಿಸಲಾಗುತ್ತಿದೆ. ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲಾ ಕಾರ್ಮಿಕರು ತುರ್ತಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಸಾರ್ವಜನಿಕರು ಆಸ್ತಿ, ನೀರಿನ ತೆರಿಗೆ ಮತ್ತು ಇತರೆ ತೆರಿಗೆಗಳನ್ನು ಸಕಾಲಕ್ಕೆ ಗ್ರಾಮ ಪಂಚಾಯತಿಗೆ ಪಾವತಿಸಿ ತಮ್ಮ ಗ್ರಾಮಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.--16ಕೆಟಿಆರ್.ಕೆ.15ಃ ಡಾ.ಆರ್.ದೇವೇಂದ್ರಪ್ಪ