ಬೆಂಗಳೂರಿನಲ್ಲಿ ಶೇ. 60 ಕ್ಕಿಂತ ಹೆಚ್ಚು ಅನ್ಯ ಭಾಷಿಕರು ವಾಸ ಮಾಡುತಿದ್ದು, ಕನ್ನಡದ ಮೇಲೆ ಸವಾರಿ ಮಾಡುತ್ತಿದ್ದಾರೆ
ಗಂಗಾವತಿ: ಕನ್ನಡ ನೆಲ,ಜಲ, ಭಾಷೆಯ ಉಳಿವಿಗಾಗಿ ಡಾ. ರಾಜ್ ಕುಮಾರ ಅವರ ಸೇವೆ ಅಮೂಲ್ಯವಾಗಿದೆ ಎಂದು ಅಖಿಲ ಕರ್ನಾಟಕ ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದ ಹೇಳಿದರು.
ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಹಾಗೂ ಅಪ್ಪು ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಬೆಂಗಳೂರಿನಲ್ಲಿ ಶೇ. 60 ಕ್ಕಿಂತ ಹೆಚ್ಚು ಅನ್ಯ ಭಾಷಿಕರು ವಾಸ ಮಾಡುತಿದ್ದು, ಕನ್ನಡದ ಮೇಲೆ ಸವಾರಿ ಮಾಡುತ್ತಿದ್ದಾರೆ. ಗೋಕಾಕ ಹೋರಾಟದ ರೂವಾರಿ ಡಾ. ರಾಜಕುಮಾರ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಟ ಮಾಡಿ ಮಾದರಿಯಾಗಿದ್ದಾರೆ. ಅನ್ಯ ರಾಜ್ಯಗಳಲ್ಲಿ ಅಲ್ಲಿನ ಭಾಷೆ ಸಮೃದ್ಧವಾಗಿದೆ. ಮಹಾದಾಯಿ, ಕಳಸಾ ಬಂಡೂರಿ, ಮೇಕೆದಾಟು ಹೀಗೆ ಹಲವು ಯೋಜನೆ ಅನುಷ್ಠಾನಕ್ಕೆ ಕನ್ನಡ ಪರ ಹೋರಾಟಗಾರರು ನಿತ್ಯ ಶ್ರಮಿಸುತ್ತಿದ್ದಾರೆ. ಮಹಾದಾಯಿ, ಕಳಸಾ ಬಂಡೂರಿ ಯೋಜನೆಗೆ ಗೋವಾ, ತಮಿಳುನಾಡು ಆಕ್ಷೇಪವಿದೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಎರಡನೇಯ ಬೆಳೆಗೆ ನೀರಿಲ್ಲ. ಪ್ರೊ. ನಂಜುಂಡಸ್ವಾಮಿ ನಿಸ್ವಾರ್ಥವಾಗಿ ಆಲಮಟ್ಟಿ ಡ್ಯಾಂ ಎತ್ತರಿಸಲು ಹೋರಾಟ ಮಾಡಲಾಗಿದೆ. ನಾಡು,ನುಡಿಗಾಗಿ ಸರ್ವರೂ ಹೋರಾಟದಲ್ಲಿ ಧುಮುಕಬೇಕೆಂದರು.
ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಗೋಕಾಕ ಚಳವಳಿ ಮೂಲಕ ಕನ್ನಡದ ಆಸ್ಮಿತೆ ಮೂಲಕ ತೆಲುಗು ಬಾಹುಳ್ಯದ ಬಳ್ಳಾರಿ ಜನರು ಕನ್ನಡ ಹೆಚ್ಚು ಬಳಸುವಂತೆ ಮಾಡಲಾಯಿತು.ಅನ್ಯ ಭಾಷಿಕರು ಮನಸಾಕ್ಷಿಯಿಂದ ಕನ್ನಡ ನಾಡು ನುಡಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಬೇಕು. ನನ್ನ ವಿರೋಧಿಗಳು ನನಗೆ ಕನ್ನಡ ಬರಲ್ಲ ಎಂದು ಟೀಕಿಸಿದಾಗ ನಾನು ಹಳೆಗನ್ನಡದ ಮೂಲಕ ಮಹಾನ್ ಗ್ರಂಥ ಓದಿ ಉತ್ತರ ಕೊಟ್ಟಿದ್ದೇನೆ. ನನ್ನ ಸುಪುತ್ರ ಚಿತ್ರನಟ ಕೀರಿಟಿ ಕನ್ನಡ ಸಿನೆಮಾದಲ್ಲಿ ಎಲ್ಲ ಹಿರಿಯ ನಟರಿಗೆ ಗೌರವ ನೀಡಿದ್ದಾರೆ. ಗಂಗಾವತಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಹಾಗೂ ಡಾ. ವಿಷ್ಣುವರ್ಧನ್ ಪುತ್ಥಳಿ ಪ್ರತಿಷ್ಠಾಪಿಸಲಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸೈಯದ್ ಜಿಲಾನಿ ಖಾದ್ರಿ ಮಾತನಾಡಿ, ನಾಡು, ನುಡಿ. ನೆಲ, ಜಲದ ಸಂರಕ್ಷಣೆಗಾಗಿ ನಮ್ಮ ಸಂಘಟನೆ ನಿರಂತರ ಹೋರಾಟ ಮಾಡಲಾಗುತ್ತಿದ್ದು, ಜನರ ಸಮಸ್ಯೆಗಳಿಗೂ ಸ್ಪಂದಿಸಲಾಗಿದೆ. ಕಳೆದ 13 ವರ್ಷಗಳಿಂದ ಎಲ್ಲರ ಸಹಕಾರ ಪಡೆದು ಕನ್ನಡ ನಾಡು ನುಡಿ ಕೆಲಸ ಕಾರ್ಯ ಸಂಘಟನೆ ಮಾಡುತ್ತಾ ಬಂದಿದೆ ಎಂದರು.ವೇದಿಕೆ ಮೇಲೆ ಕಲ್ಮಠ ಡಾ. ಕೊಟ್ಟೂರು ಮಹಾಸ್ವಾಮಿಗಳು, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ತಿಪ್ಪೇರುದ್ರಸ್ವಾಮಿ, ಜೋಗದ ನಾರಾಯಣಪ್ಪ ನಾಯಕ , ಜೋಗದ ಹನುಮಂತಪ್ಪ, ವಡ್ರಟ್ಟಿ ವೀರಭದ್ರಪ್ಪ ನಾಯಕ, ದುರಗಪ್ಪ ದಳಪತಿ, ಮೌನೇಶ ದಡೇಸೂಗೂರು, ಮನೋಹರಗೌಡ, ಕೆ. ದುರುಗಪ್ಪ ಆಗೋಲಿ, ಅಮರಜ್ಯೋತಿ ನರಸಪ್ಪ, ಫಯಾಜ್ ಮೈಸೂರು, ಎಸ್.ಬಿ. ಖಾದ್ರಿ, ಲಕ್ಷ್ಮಿಪತಿ ಸ್ವಾಮಿ, ಶ್ರೀನಿವಾಸ, ಯಮನೂರ ಚೌಡ್ಕಿ, ಆನಂದಗೌಡ, ಮೌಲಸಾಬ್, ಬಿ.ನಾಗರಾಜ ಸೇರಿದಂತೆ ಅನೇಕರು ಭಾಗವಹಿಸಿದ್ದರು.