ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಖ್ಯಾತ ಸರೋದ್ ವಾದಕರಾಗಿದ್ದ ಡಾ.ರಾಜೀವ್ ತಾರಾನಾಥ್ ಅವರು ವಿಧಿವಶರಾದುದು ವಿಷಾದದ ಸಂಗತಿ ಎಂದು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.ಅವರು ಹಿಂದಿನ ತಲೆಮಾರಿನ ಸಂಗೀತ ದಿಗ್ಗಜರಾದ ಉಸ್ತಾದ್ ಅಕ್ಬರ್ ಅಲಿಖಾನ್ ಅವರ ಬಳಿ ಸರೋದ್ ವಾದನವನ್ನು ಗುರುಕುಲ ಮಾದರಿಯಲ್ಲಿ ಅಧ್ಯಯನ ಮಾಡಿದ್ದವರು. ಪಂ.ರವಿಶಂಕರ್ ಮತ್ತು ಅನ್ನಪೂರ್ಣಾದೇವಿ ಅವರು ತಾರಾನಾಥ್ ಅವರ ಹಿರಿಯ ಗುರುಗಳಾಗಿದ್ದರು. ಮೈಸೂರು ವಿವಿಯ ಇಂಗ್ಲಿಷ್ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾಗಿದ್ದರು. ಆಗಿನ ಕಾಲಕ್ಕೇ ಕೈ ತುಂಬಾ ಸಂಬಳ ಬರುತ್ತಿದ್ದರೂ ಉದ್ಯೋಗವನ್ನು ತೊರೆದು ಸಂಗೀತಕ್ಕೆ ಅವರ ಇಡೀ ಜೀವನವನ್ನು ಸಮರ್ಪಿಸಿಕೊಂಡಿದ್ದರು. ಸಂಗೀತ ಕಛೇರಿ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಜಗತ್ತಿನಾದ್ಯಂತ ಪರಿಚಿತರಾಗಿದ್ದರು. ಸರ್ವಧರ್ಮ ಸಮಭಾವದ ಪ್ರತಿನಿಧಿಯಂತಿದ್ದರು. ಶ್ರೇಷ್ಠ ಕಲಾವಿದರಾಗಿದ್ದಂತೆಯೇ ಶ್ರೇಷ್ಠ ಮಾನವತಾವಾದಿಯೂ ಆಗಿದ್ದರು. ಬಡವರು ಹಾಗೂ ದೀನದಲಿತರಿಗೆ ಅವರ ಸಹಾಯಹಸ್ತ ಸದಾ ಮುಕ್ತವಾಗಿರುತ್ತಿತ್ತು ಎಂದು ತಿಳಿಸಿದ್ದಾರೆ.
ಪಂ.ತಾರಾನಾಥರ ಪುತ್ರರಾಗಿ ತಂದೆಯ ಸಾಂಸ್ಕೃತಿಕ ವಾಸುದಾರರಾಗಿದ್ದರು. ಸರಳತೆಯೇ ಮೈವೆತ್ತಿದಂತಿದ್ದರು. ಸಾಹಿತ್ಯ ಮತ್ತು ಸಂಗೀತ ಇವೆರಡೂ ಅವರ ಆಸಕ್ತಿಯ ಕ್ಷೇತ್ರಗಳಾದರೂ ಸಂಗೀತ ಅವರ ಪಾಲಿನ ಉಸಿರಾಗಿತ್ತು. ಲಾಸ್ ಏಂಜಲೀಸ್ ನಲ್ಲಿರುವ ಕ್ಯಾಲಿಫೋರ್ನಿಯ ಇನ್ಸ್ಸ್ಟಿಟ್ಯೂಟ್ಆಫ್ ಆರ್ಟ್ಸ್ ಸಂಗೀತ ವಿಭಾಗದಲ್ಲಿ ಅಧ್ಯಾಪಕರಾಗಿದ್ದರು. ಕನ್ನಡದ ಸಂಸ್ಕಾರವೂ ಸೇರಿದಂತೆ ಹಲವಾರು ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ರಾಷ್ಟ್ರದ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳಲ್ಲದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿತ್ತು. ಅವರು ಶ್ರೀಮಠದ ಅಭಿಮಾನಿಗಳೂ ಆಗಿದ್ದರೆಂಬುದು ಸ್ಮರಣೀಯವಾದುದು. ಅವರ ಅಗಲುವಿಕೆಯಿಂದಾಗಿ ಮೈಸೂರಿನ ಸಾಂಸ್ಕೃತಿಕ ವಲಯಕ್ಕೆ ಕೊರತೆಯಾದಂತಾಗಿದೆ.ದಿವಂಗತರ ಆತ್ಮಕ್ಕೆ ಶಾಂತಿಯನ್ನು, ಅವರ ಕುಟುಂಬವರ್ಗದವರು ಮತ್ತು ಅಭಿಮಾನಿಗಳಿಗೆ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಅವರು ಹಾರೈಸಿದ್ದಾರೆ.