ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಟಸಾರ್ವಭೌಮ ಡಾ. ರಾಜ್‌ಕುಮಾರ್ ಸೂರ್ಯ, ಚಂದ್ರ ಇರುವ ತನಕ ಕಲಾಪ್ರಚಂಚದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ ಅಭಿಪ್ರಾಯಪಟ್ಟರು.ನಗರದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಡಾ.ಎಸ್.ಸಿ.ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಗಾನ ಗಾಂಧರ್ವ ಡಾ. ರಾಜ್ ಕುಮಾರ್ ಹಾಗೂ ಗಾನ ಕೋಗಿಲೆ ಎಸ್. ಜಾನಕಮ್ಮಜನ್ಮದಿನೋತ್ಸವ ಅಂಗವಾಗಿ ಗೀತಾಗಾಯನ ಹಾಗೂ ರಂಗಭೂಮಿ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಡಾ. ರಾಜ್‌ಕುಮಾರ್ ಜೀವನ, ಆದರ್ಶ, ನಡೆ, ನುಡಿ ಎಲ್ಲವೂ ಕೂಡ ಪರಿಶುದ್ಧವಾದದ್ದು. ನನಗೆ ಅತ್ಯಂತ ಶ್ರೇಷ್ಟವಾದ ಸ್ಥಾನವನ್ನು ನೀಡಿರುವ ಚಾಮರಾಜನಗರವೇ ನನಗೆ ಸ್ವರ್ಗದ ಬಾಗಿಲು ಎಂದು ಹೇಳುತ್ತಿದ್ದರು. ಡಾ.ರಾಜ್‌ಕುಮಾರ್ ಮಹಾಪುರುಷರು, ಅವರ ಜೀವನ ಮೌಲ್ಯಗಳು, ಜೀವನ ಸಂದೇಶಗಳು, ಸಾಮಾಜಿಕ ಕಳಕಳಿ, ರಾಜಕೀಯ ಜೀವನ, ಪೌರಾಣಿಕ, ಇತಿಹಾಸ, ಯಾವುದೇ ಕ್ಷೇತ್ರದಲ್ಲೂ ನೋಡಿದರು ಅದರ ಪ್ರತಿರೂಪವಾಗುತ್ತಿದ್ದರು. ಮಯೂರ, ಬಬ್ರುವಾಹನ, ಕೃಷ್ಣದೇವರಾಯ, ಕನಕದಾಸರು, ರಾಘವೇಂದ್ರಸ್ವಾಮಿ, ರಾಮಚಂದ್ರ, ಕೃಷ್ಣ ಈ ಪಾತ್ರಗಳಲ್ಲಿ ಪ್ರತಿರೂಪವಾಗಿದ್ದರು. ಅವರು ಭಗವಂತನ ದಿವ್ಯ ಸಂಕಲ್ಪದಲ್ಲಿ ಬಂದಿರುವುದು. ರಾಜ್‌ಕುಮಾರ್ ನಮ್ಮ ಜಿಲ್ಲೆಯವರು ಎಂಬುದೇ ನಮ್ಮೆಲ್ಲರ ಪುಣ್ಯ, ಹೆಮ್ಮೆ ಎಂದರು.ಖ್ಯಾತ ಹಿನ್ನಲೆ ಗಾಯಕಿ ಗಾನಕೋಗಿಲೆ ಎಸ್.ಜಾನಕಮ್ಮ ಅವರು ತಮ್ಮ ಗಾಯನದ ಮೂಲಕ ಸ್ವರ್ಗದ ಬಾಗಿಲು ತೆರೆಯುವಂತೆ ಮಾಡುತ್ತಿದ್ದರು. ಅವರ ಜನ್ಮದಿನಾಚರಣೆಯನ್ನು ಚಾಮರಾಜನಗರದಲ್ಲಿ ಡಾ. ಬಾಲಸುಬ್ರಹ್ಮಣ್ಯಂ ಕಲಾವೇದಿಕೆ ಮೊಟ್ಟಮೊದಲು ಆಚರಣೆ ಮಾಡುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾದದ್ದು ಎಂದರು. ಡಾ. ರಾಜ್‌ಕುಮಾರ್ ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆಯುವುದು ಪೂರ್ವಜನ್ಮದ ಪುಣ್ಯವಾಗಿದೆ. ಸಂವೃದ್ಧಿ ಸೇವೆಯನ್ನು ಸಲ್ಲಿಸುವ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಅನೇಕ ರಂಗಭೂಮಿ ಕಲಾವಿದರು, ನಟರು ಗೌರವಯುತ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ರಾಜ್‌ಕುಮಾರ್ ಹೆಸರಿನಲ್ಲಿ ಪ್ರಶಸ್ತಿ ಪಡೆಯುವುದು ಪೂರ್ವಜನ್ಮದ ಪುಣ್ಯವಾಗಿದೆ ಎಂದರು.ಉದ್ಯಮಿ ಎ.ಜಯಸಿಂಹ, ಪರಿಸರ ಪ್ರೇಮಿ ಸಿ.ಎ.ವೆಂಕಟೇಶ್, ಬರಹಗಾರ ಲಕ್ಷ್ಮೀನರಸಿಂಹ, ರೋಟರಿ ಮಾಜಿ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ ಮಾತನಾಡಿದರು. ಆರ್. ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.ಪ್ರಶಸ್ತಿ ಪ್ರದಾನ: ರಂಗಭೂಮಿ ಕಲಾವಿದರಾದ ಹರದನಹಳ್ಳಿ ನಟರಾಜು, ನಂಜೇದೇವನಪುರ ಪುರುಷೋತ್ತಮ, ವಿ.ಮಹದೇವಯ್ಯ,ವೆಂಕಟರಮಣಸ್ವಾಮಿ,ಗೋವಿಂದರಾಜು, ಮಲ್ಲಯ್ಯನಪುರ ಎಂ.ಎನ್.ಮಹದೇವ, ಗೋವಿಂದರಾಜು ಅಮ್ಮನಪುರ, ನಾಗರಾಜು ನಂಜನಗೂಡು ಅವರಿಗೆ ಡಾ. ರಾಜ್‌ಕುಮಾರ್, ಎಸ್.ಜಾನಕಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದ ಘಟಂ ಕೃಷ್ಣ, ದೊರೆಸ್ವಾಮಿ, ವೇದಿಕೆ ಅಧ್ಯಕ್ಷ ಶಿವು ಜೋಸೆಫ್, ಕಾರ್ಯದರ್ಶಿ ರಾಜಣ್ಣ ,ಮಹೇಶ್ ಕುಮಾರ್, ಬಂಗಾರು ಇತರರು ಹಾಜರಿದ್ದರು.