ಕನ್ನಡದ ಅಸ್ಮಿತೆ ಸಾಕಾರಗೊಳಿಸಿದ ಡಾ.ರಾಜ್‍ಕುಮಾರ್

| Published : Apr 28 2025, 12:45 AM IST

ಕನ್ನಡದ ಅಸ್ಮಿತೆ ಸಾಕಾರಗೊಳಿಸಿದ ಡಾ.ರಾಜ್‍ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ನಡೆ, ನುಡಿಯಲ್ಲಿ ವಿನಯತೆ, ವೈಚಾರಿಕತೆ ಮೈದುಂಬಿಕೊಂಡಿದ್ದ ಡಾ.ರಾಜ್‍ಕುಮಾರ್ ಅವರು ಪೌರಾಣಿಕ, ಐತಿಹಾಸಿಕ, ಹಾಗೂ ಸಾಮಾಜಿಕ ಪಾತ್ರಗಳಲ್ಲಿ ಕಲಾಕೌಶಲ್ಯ, ನಟನೆ, ಗಾಯನದ ಮೂಲಕ ಕನ್ನಡದ ಅಸ್ಮಿತೆಯನ್ನು ಸಾಕಾರಗೊಳಿಸಿದ್ದಾರೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ತಿಳಿಸಿದರು.

ಚಾಮರಾಜನಗರ: ನಡೆ, ನುಡಿಯಲ್ಲಿ ವಿನಯತೆ, ವೈಚಾರಿಕತೆ ಮೈದುಂಬಿಕೊಂಡಿದ್ದ ಡಾ.ರಾಜ್‍ಕುಮಾರ್ ಅವರು ಪೌರಾಣಿಕ, ಐತಿಹಾಸಿಕ, ಹಾಗೂ ಸಾಮಾಜಿಕ ಪಾತ್ರಗಳಲ್ಲಿ ಕಲಾಕೌಶಲ್ಯ, ನಟನೆ, ಗಾಯನದ ಮೂಲಕ ಕನ್ನಡದ ಅಸ್ಮಿತೆಯನ್ನು ಸಾಕಾರಗೊಳಿಸಿದ್ದಾರೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿರುವ ವರನಟ ಡಾ.ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಚಾಮರಾಜನಗರದ ರಂಗವಾಹಿನಿ ಸಂಸ್ಥೆ ಹಾಗೂ ಚಕೋರ ಸಾಹಿತ್ಯ ವೇದಿಕೆ ಸಂಯುಕ್ತಾಶ್ರಯದಲ್ಲಿ ಪದ್ಮಭೂಷಣ ಡಾ.ರಾಜ್‍ಕುಮಾರ್ ಕುರಿತು ಆಯೋಜಿಸಲಾಗಿದ್ದ ‘ನಮ್ಮೂರ ವರನಟ’ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತಮ ಕಲಾಕೌಶಲ್ಯವನ್ನೇ ವೃತ್ತಿಯಾಗಿಸಿಕೊಂಡು ವಿಭಿನ್ನ ವ್ಯಕ್ತಿತ್ವ ರೂಪಿಸಿಕೊಂಡ ಡಾ.ರಾಜ್‍ಕುಮಾರ್ ಅವರು ಪ್ರಭಾವಿ ಬದುಕಿನ ಅದರ್ಶ ಮಾದರಿಯನ್ನು ಇಡೀ ಭಾರತೀಯ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಹೊಟ್ಟೆಪಾಡಿಗಾಗಿ ಚಿತ್ರರಂಗಕ್ಕೆ ಬಂದೆ ಎನ್ನುವಷ್ಟು ಸರಳತೆ ರಾಜ್ ಅವರಲ್ಲಿತ್ತು. ನುಡಿದಂತೆ ನಡೆದ ರಾಜ್‍ಕುಮಾರ್ ಅವರು ಪ್ರತಿಯೊಬ್ಬ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಜಾಗ ಪಡೆದಿದ್ದು, ನಮ್ಮೂರಿನ ವರನಟ ವಿಚಾರಸಂಕಿರಣ ಪ್ರಸ್ತುತತೆಯಿಂದ ಕೂಡಿದೆ ಎಂದರು. ಕನ್ನಡ ಭಾಷೆಗೆ ತನ್ನತನದ ಸ್ವರೂಪ ಹಾಗೂ ನಿರ್ದಿಷ್ಟ ದಿಕ್ಕು ತೋರಿದ ಪ್ರಮುಖರಲ್ಲಿ ರಾಜ್‍ಕುಮಾರ್ ಸಹ ಒಬ್ಬರು. ಕನ್ನಡದ ಅಸ್ಮಿತೆಯನ್ನು ಪರಿಭಾವಿಸಲು ಕುವೆಂಪು ಬಿಟ್ಟರೆ ರಾಜ್‍ಕುಮಾರ್ ಅವರನ್ನು ಹೆಸರಿಸಬಹುದು. ಬದುಕಿನ ವಿಶ್ವವಿದ್ಯಾಲಯದಲ್ಲಿ ಅವರದೇ ಅನುಭವಗಳ ಮೂಟೆ ಹೊತ್ತು ಗೌರವ ಡಾಕ್ಟರೇಟ್ ಪಡೆದ ರಾಜ್‍ಕುಮಾರ್ ಅತಿ ವಿನಯತೆ, ಶ್ರದ್ಧೆ, ಭಕ್ತಿಯಿಂದ ತಮ್ಮ ಎಲ್ಲಾ ಚಿತ್ರಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಗೂ ಸತ್ಯವನ್ನು ಸಾಕಾರಗೊಳಿಸಿದರು. ಆಯಾ ಪ್ರಾಂತೀಯ ಭಾಷೆಗಳಿಗೂ ಶಕ್ತಿ ತುಂಬಿದ್ದರು ಎಂದು ನಾಗಾಭರಣ ಅವರು ತಿಳಿಸಿದರು. ಆಶಯ ನುಡಿಗಳನ್ನಾಡಿದ ಹಿರಿಯ ಸಾಹಿತಿ ಕೆ. ವೆಂಕಟರಾಜು ಅವರು ಭಾರತೀಯ ಚಿತ್ರರಂಗದಲ್ಲಿ ಜಾತಿ, ಧರ್ಮ ಎಲ್ಲವನ್ನು ಮೀರಿ ಜನರ ಪ್ರೀತಿ ಗಳಿಸಿದ ಏಕೈಕ ಮೇರುನಟ ಎಂದರೇ ರಾಜ್‍ಕುಮಾರ್ ಅವರು ಮಾತ್ರ. ಬೀದರ್‍ನಿಂದ ಚಾಮರಾಜನಗರದವರೆಗೂ ಜನರು ಅವರನ್ನು ಪ್ರೀತಿಸುತ್ತಾರೆ, ವಿಶ್ವಾಸದಿಂದ ಸ್ಮರಿಸುತ್ತಾರೆ. ಡಾ. ರಾಜ್‍ಕುಮಾರ್ ನಮ್ಮ ಹೆಮ್ಮೆಯಾಗಿದ್ದಾರೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ದೀನಬಂಧು ಸಂಸ್ಥೆಯ ಪ್ರೊ.ಜಿ.ಎಸ್. ಜಯದೇವ ಅವರು ಮಾತನಾಡಿ ರಾಜ್‍ಕುಮಾರ್ ಅವರ ಅದ್ಭುತ ಅಭಿನಯ ಅವರಲ್ಲಿದ್ದ ಸರಳತೆಯಿಂದ ಬರಲು ಸಾಧ್ಯವಾಗಿತ್ತು. ಬಡತನದಲ್ಲಿ ಸಂತೋಷವಿದೆ ಎಂಬ ಆದರ್ಶ ರಾಜ್‍ಕುಮಾರ್ ಚಿತ್ರಗಳಲ್ಲಿದೆ. ಅದನ್ನು ನಾವು ಅಳವಡಿಸಿಕೊಳ್ಳದೇ ಕೈಬಿಟ್ಟಿದ್ದೇವೆ. ಇದು ಶೋಚನೀಯ ಸಂಗತಿ. ಇತ್ತೀಚಿನ ಸಿನಿಮಾಗಳಲ್ಲಿ ಬದುಕಿನ ವೈಚಾರಿಕತೆ, ಸೃಜನಶೀಲತೆ ಇಲ್ಲವಾಗಿದ್ದು, ಕ್ರೂರತ್ವವನ್ನು ವೈಭವೀಕರಿಸಲಾಗುತ್ತಿದೆ. ಜನರ ದೌರ್ಬಲ್ಯವನ್ನು ಬಂಡವಾಳವನ್ನಾಗಿಸುವ ವ್ಯಾಪಾರಿ ಮನೋಭಾವವನ್ನು ಬಿಡಬೇಕು ಎಂದರು. ಮೊದಲನೇ ಗೋಷ್ಠಿ ನಡೆಸಿಕೊಟ್ಟ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಡಾ.ರಾಜ್‍ಕುಮಾರ್ ಮತ್ತು ಕನ್ನಡ ಸಂವೇದನೆ ಕುರಿತು ಉಪನ್ಯಾಸ ನೀಡಿ ಅಪರಿಮಿತ ಪ್ರತಿಭಾ ಕುಟುಂಬದಲ್ಲಿ ಹುಟ್ಟಿದ ರಾಜ್‍ಕುಮಾರ್ ಅವರು ವಿರಾಟ ಪ್ರತಿಭೆಯ ವಿಶಾಲ ದೃಶ್ಯವೆಂದರೇ ತಪ್ಪಾಗಲಾರದು. ಅವರ ಪರಿಪೂರ್ಣ ಜೀವನ ಕನ್ನಡನಾಡಿದ ಸಂವೇದನೆಯ ಪಯಣವಾಗಿದೆ. ಸಾಕಷ್ಟು ವಿಭಿನ್ನ ಅನುಭವಗಳೊಂದಿಗೆ ಸುಶಿಕ್ಷತ ನಟನೆಯ ಮಾನದಂಡಗಳನ್ನು ಮೀರಿ ಬೆಳೆದ ರಾಜ್‍ಕುಮಾರ್ ಅವರು ಸಾಹಿತ್ಯ ಹಾಗೂ ಕಾದಂಬರಿ ಆಧಾರಿತ ಚಿತ್ರಗಳಿಗೆ ಜೀವ ತುಂಬಿ ಎಲ್ಲರೊಳಗೆ ಒಂದಾಗಿದ್ದರು ಎಂದು ಹೇಳಿದರು. ಡಾ. ರಾಜ್‍ಕುಮಾರ್ ಅವರ ಚಿತ್ರಗಳಲ್ಲಿ ನಿಜವಾದ ಜೀವನಾದರ್ಶವಿದೆ. ತಮ್ಮ ಚಲನಚಿತ್ರಗಳಲ್ಲಿ ಧೂಮಪಾನ, ಮಧ್ಯಪಾನದಂತಹ ಕೆಟ್ಟ ಹವ್ಯಾಸ ಬಿಂಬಿಸುವ ದೃಶ್ಯಗಳಲ್ಲಿ ಅಭಿನಯಿಸಲು ಸುತಾರಾಂ ಒಪ್ಪುತ್ತಿರಲಿಲ್ಲ. ಚಿತ್ರ ನೋಡಲು ಬರುವ ಬಡವರು, ಅವಿದ್ಯಾವಂತರು, ದಿನಗೂಲಿ ಕೆಲಸಗಾರರು ಅದನ್ನೇ ಮಾದರಿಯಾಗಿ ತೆಗೆದುಕೊಳ್ಳುತಾರೆಂಬ ಅಳುಕು ರಾಜ್ ಅವರಲ್ಲಿ ಮನೆಮಾಡಿತ್ತು. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮಾದರಿಯಲ್ಲಿ ಜೀವನ ನಡೆಸಿದ ರಾಜ್‍ಕುಮಾರ್ ಕನ್ನಡದ ಸಾಕ್ಷಿಪ್ರಜ್ಞೆಯೂ ಆಗಿದ್ದಾರೆ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟರು. ಖ್ಯಾತ ಚಲನಚಿತ್ರ ಕಥೆಗಾರರಾದ ಬಿ.ಎ. ಮಧು, ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕøತರಾದ ಪಾಪು ವೆಂಕಟರಮಣಸ್ವಾಮಿ, ಚಲನಚಿತ್ರ ನಿರ್ಮಾಪಕರಾದ ಎಸ್.ಎ. ಶ್ರೀನಿವಾಸ್, ಪ್ರೊ. ಎ.ಎಂ. ಶಿವಸ್ವಾಮಿ, ಚಲನಚಿತ್ರ ಸಾಹಿತಿ ಡಾ. ಕೃಷ್ಣಮೂರ್ತಿ ಚಮರಂ, ನಟ ಹಾಗೂ ಮೈಸೂರಿನ ರಂಗ ಸಂಘಟಕರಾದ ಮಂಡ್ಯ ರಮೇಶ್, ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯ ಸಂಚಾಲಕರಾದ ಪ್ರಕಾಶ್ ರಾಜ್ ಮೇಹು, ರಂಗವಾಹಿನಿ ಸಂಸ್ಥೆ ಅಧ್ಯಕ್ಷರಾದ ಸಿ.ಎಂ. ನರಸಿಂಹಮೂರ್ತಿ, ಸಮಾಜ ಸೇವಕರು ಹಾಗೂ ರಾಣಿ ಐಶ್ವರ್ಯ ಗ್ರೂಪ್‍ನ ಎಚ್.ಎಲ್. ಸತೀಶ್ ಮುದ್ದೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ವರನಟ ಡಾ.ರಾಜ್‍ಕುಮಾರ್ ಕುರಿತ ಗೋಷ್ಠಿಗಳು ನಡೆದವು. ನಂತರ ಸಮಾರೋಪ ಸಮಾರಂಭವನ್ನು ಖ್ಯಾತ ಕಾದಂಬರಿಕಾರ ಬಿ.ಎ. ಮಧು ನಡೆಸಿಕೊಟ್ಟರು. ತದಬಳಿಕ ಡಾ. ರಾಜ್‍ಕುಮಾರ್ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.