ಮೌಲ್ಯ ಎತ್ತಿ ಹಿಡಿದ ಮಹೋನ್ನತ ನಟ ಡಾ. ರಾಜಕುಮಾರ್: ಕೆ.ಸಿ. ನಾಗರಜ್ಜಿ

| Published : Apr 24 2025, 11:52 PM IST

ಸಾರಾಂಶ

ಡಾ. ರಾಜಕುಮಾರ್ ಅವರು ಕೇವಲ ನಟರಾಗಿ ಉಳಿಯದೆ ಗಾಯಕರಾಗಿ, ಕನ್ನಡ ನಾಡು- ನುಡಿಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಗೆ ವಿಶಿಷ್ಟವಾದ ಕೊಡುಗೆ ನೀಡಿದ್ದಾರೆ.

ಹಾವೇರಿ: ಚಲನಚಿತ್ರಗಳು, ಚಳವಳಿಗಳ ಮೂಲಕ ಕನ್ನಡದ ಭಾಷೆ, ಕನ್ನಡಿಗರ ಸ್ವಾಭಿಮಾನ, ಸಂಸ್ಕೃತಿ, ಪರಂಪರೆಗಳ ಮೌಲ್ಯಗಳನ್ನು ಎತ್ತಿಹಿಡಿದ ನಾಡು ಕಂಡ ಮೇರು ವ್ಯಕ್ತಿತ್ವದ ಮಹೋನ್ನತ ನಟ ಡಾ. ರಾಜಕುಮಾರ್ ಎಂದು ಜಾನಪದ ವಿದ್ವಾಂಸ ಕೆ.ಸಿ. ನಾಗರಜ್ಜಿ ಬಣ್ಣಿಸಿದರು. ನಗರದ ವಾರ್ತಾ ಭವನದಲ್ಲಿ ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ. ರಾಜಕುಮಾರ್ ಅವರ 97ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ಡಾ. ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಡಾ. ರಾಜಕುಮಾರ್ ಅವರನ್ನು ನಟಸಾರ್ವಭೌಮ, ವರನಟ ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಅವರಿಗೆ ಡಾಕ್ಟರೇಟ್, ಫೆಲೋಶಿಪ್ ಸೇರಿದಂತೆ ಸಾವಿರಾರು ಪ್ರಶಸ್ತಿಗಳು ಬಂದಿವೆ. ಅವರು ಕೇವಲ ನಟರಾಗಿ ಉಳಿಯದೆ ಗಾಯಕರಾಗಿ, ಕನ್ನಡ ನಾಡು- ನುಡಿಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಗೆ ವಿಶಿಷ್ಟವಾದ ಕೊಡುಗೆ ನೀಡಿದ್ದಾರೆ ಎಂದರು.ರಂಗಭೂಮಿ, ಚಲನಚಿತ್ರ, ಗಾಯನದಲ್ಲಿ ಅತ್ಯುತ್ತಮವಾದ ಪ್ರತಿಭೆ ಹೊಂದಿದ ಡಾ. ರಾಜಕುಮಾರ್ ಅವರು ಅಭಿನಯಿಸಿದ ಚಲನಚಿತ್ರಗಳು, ಸಾಮಾಜಿಕವಾಗಿ ಉತ್ತಮ ಸಂದೇಶ ನೀಡುತ್ತಿದ್ದವು. ಅವರು ಅಭಿನಯಿಸಿದ ಹಲವು ಆಧ್ಯಾತ್ಮಿಕ, ಪೌರಾಣಿಕ ಪಾತ್ರಗಳು ಜನರ ಮನಸ್ಸಿನಲ್ಲಿ ಇನ್ನೂ ಆಳವಾಗಿ ಬೇರೂರಿವೆ. ಬೇಡರ ಕಣ್ಣಪ್ಪ ಪಾತ್ರ ಜನರ ಮೇಲೆ ಪ್ರಭಾವ ಬೀರಿದ ಅಪರೂಪದ ನಟನೆ ಡಾ. ರಾಜಕುಮಾರ್ ಅವರದು. ಬಂಗಾರದ ಮನುಷ್ಯನಂತಹ ಸಿನಿಮಾಗಳು ಸಾಮಾಜಿಕ ಮೌಲ್ಯದಿಂದ ಕೂಡಿದ್ದು, ಶ್ರಮದ ಬದುಕು, ಸ್ವಾಭಿಮಾನದ ಬದುಕಿಗೆ ಯುವಜನರಿಗೆ ಇಂದಿಗೂ ಪ್ರೇರಣೆಯಾದ ಪಾತ್ರ ಇದಾಗಿದೆ. ಇಂತಹ ಹಲವು ಚಿತ್ರಗಳ ಅಭಿನಯ, ಅವರ ಚಿತ್ರಗಳ ಸಂದೇಶ ಸಾಮಾಜಿಕವಾಗಿ ಉತ್ತಮ ಅಭಿರುಚಿಯನ್ನು ಬೆಳೆಸಿವೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಮಾತನಾಡಿ, ಅತ್ಯಂತ ಸರಳ- ಸಜ್ಜನಿಕೆ ಹಾಗೂ ಮಾನವೀಯ ನಡೆಯ ಡಾ. ರಾಜಕುಮಾರ್ ಅವರು, ತಮ್ಮ ಅದ್ಭುತ ವ್ಯಕ್ತಿತ್ವ ಮತ್ತು ಅಭಿಯನದ ಮೂಲಕ ಅಸಾಧಾರಣವಾಗಿ ಬೆಳೆದವರು. ಸಹ ಕಲಾವಿದರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅವರು ಕನ್ನಡಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟವರು. ಇಂದಿಗೂ ಅವರ ಹೆಸರು ಅಜರಾಮರವಾಗಿದೆ. ಅನೇಕ ರಸ್ತೆ ಉದ್ಯಾನವನಗಳಿಗೆ ಅವರ ಹೆಸರು ಇಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಕಲಾವಿದ ರಾಜು ಸುರ್ವೇ ಅವರು ಡಾ. ರಾಜಕುಮಾರ್ ಅವರು ಹಾಡಿದ ನಾವಾಡುವ ನುಡಿಯೇ ಕನ್ನಡ ನುಡಿ, ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು ಸೇರಿದಂತೆ ವಿವಿಧ ಗೀತೆಗಳನ್ನು ಹಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಎಚ್. ಹಾಗೂ ಇತರರು ಉಪಸ್ಥಿತರಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರದಸ ರಾಘವೇಂದ್ರ ಕುರಣೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ದೇವಕಿ ಎಸ್. ಉಂದ್ರಿ ವಂದಿಸಿದರು.