ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಡಾ.ರಾಜಕುಮಾರ್ ಅವರು ಕರ್ನಾಟಕ ಅಷ್ಟೇ ಅಲ್ಲದೆ ಭಾರತ ದೇಶ ಕಂಡ ಶ್ರೇಷ್ಠ ನಾಯಕ. ಅಭಿಮಾನಿಗಳನ್ನು ದೇವರು ಎಂದ ವ್ಯಕ್ತಿ. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವ ವ್ಯಕ್ತಿ ಎಂದು ಸಾಹಿತಿ, ಉಪನ್ಯಾಸಕ ಬಸವರಾಜ ಮೇಟಿ ಹೇಳಿದರು.ಸ್ಥಳೀಯ ಮಾಧವಾನಂದ ಗಿರಿಮಲ್ಲೇಶ್ವರ ಆಶ್ರಮದಲ್ಲಿ ವರನಟ ಡಾ.ರಾಜಕುಮಾರ್ ಅವರ 96ನೇ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅವರಿಗೆ ಗೌರವ ಡಾಕ್ಟರೇಟ್, ದಾಸಾಹೇಬ ಫಾಲ್ಕೆ ಶ್ರೇಷ್ಠ ನಟ, ಗಾನಗಂಧರ್ವ, ರಸಿಕರ ರಾಜ ಸೇರಿ ಅನೇಕ ಪ್ರಶಸ್ತಿಗಳು ದೊರೆತಿವೆ. ಒಬ್ಬ ಸಾಮಾನ್ಯ ವ್ಯಕ್ತಿ ಯಾವ ರೀತಿ ಜನರ ಮನಸಲ್ಲಿ ರಾಜನಾಗಿ ಉಳಿದದ್ದು, ನಾವು ಇಂದಿಗೂ ಕಾಣುತ್ತೇವೆ. ಸ್ವತಃ ರಾಜಕುಮಾರ್ ಅವರಿಗೆ ಮಂತ್ರಾಲಯ ಮಹಾತ್ಮೆ ಚಿತ್ರ ಮೆಚ್ಚುಗೆಯಾಗಿತ್ತು ಎಂದು ಹೇಳಿದರು.
ನಂತರ ಜಿ.ಎಸ್. ಗೊಂಬಿ ಮಾತನಾಡಿ, ಡಾ.ರಾಜಕುಮಾರ ಸರಳತೆಯ ಜೀವನ ನಡೆಸಿ, ಅನೇಕ ಜನರಿಗೆ ಸಂದೇಶ ನೀಡಿದ್ದಾರೆ. ಒಂದಿಷ್ಟು ಸಿನಿಮಾಗಳಿಂದ ಜನರ ಬದುಕು ಬದಲಾವಣೆಯಾಗಿದೆ. ಪರಭಾಷೆಗೆ ಹೋಗದೆ ಕನ್ನಡದಲ್ಲಿ ಅನೇಕ ಸಿನಿಮಾ ಮಾಡಿ ಜನರ ಮೆಚ್ಚುಗೆ ಪಡೆದಿದ್ದಾರೆ ಎಂದರು.ನಂತರ ಮನೋಹರ ಶಿರೋಳ ಮಾತನಾಡಿ, ಡಾ.ರಾಜಕುಮಾರ್ ಅವರು ಉತ್ತಮ ವ್ಯಕ್ತಿತ್ವ ಹೊಂದಿದವರು. ಪರಭಾಷೆಗೆ ಅವರನ್ನು ಮಾರಿಕೊಂಡಿಲ್ಲ. ಯಾವುದೇ ದುಶ್ಚಟಗಳ ಮಾರುವೇಷಕ್ಕೆ ಬಲಿಯಾಗದೆ ಜನರ ಮನಸ್ಸಲ್ಲಿ ನೆಲೆಸಿದ್ದಾರೆ ಎಂದರು.
ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಶೇಖರ್ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕರಾದ ಎಂ.ಡಿ ಆನಂದ ಹಾಗೂ ಶಿವಾನಂದ ಬಿದರಿ ಅವರು ಡಾ.ರಾಜಕುಮಾರ್ ಅವರ ಹಾಡು ಹಾಡಿದರು.ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ್, ಬಸನಗೌಡ ಪಾಟೀಲ್, ಮಹಾದೇವ ಮಾರಾಪುರ, ಡಾ.ಎಸ್.ಎನ್. ಹಿಡಕಲ್, ಚನ್ನಬಸು ಯರಗಟ್ಟಿ, ಮಹಾಲಿಂಗಪ್ಪ ಲಾತೂರ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಅರವಿಂದ ಮಾಲಬಸರಿ, ವಿಜಯ್ ಸಬಕಾಳೆ, ವಿನೋದ ಶಿಂಪಿ, ಸುರೇಶ್ ಮಡಿವಾಳ, ಭಾಷಾಸಾಬ ಯಾದವಾಡ, ರಾಜು ತೇರದಾಳ, ಮಹಾಲಿಂಗ ಶಿವಣಗಿ, ತಿಪ್ಪಣ್ಣ ಬಂಡಿವಡ್ಡರ, ಮಲ್ಲು ದಡ್ಡೆನ್ನವರ, ಜೊತೆಗೆ ಪತ್ರಕರ್ತರು ಸೇರಿದಂತೆ ಇತರರಿದ್ದರು. ಪತ್ರಕರ್ತ ಲಕ್ಷ್ಮಣ್ ಕಿಶೋರ್ ನಿರೂಪಿಸಿ, ವಂದಿಸಿದರು.