‎ಡಾ.ರಮಣರಾವ್ ಸಮಾಜ ಸೇವೆ ಹಲವರಿಗೆ ಸ್ಫೂರ್ತಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

| Published : Nov 23 2025, 01:30 AM IST

‎ಡಾ.ರಮಣರಾವ್ ಸಮಾಜ ಸೇವೆ ಹಲವರಿಗೆ ಸ್ಫೂರ್ತಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ವಿಲೇಜ್ ಕ್ಲಿನಿಕ್ ನಿಂದ ಗ್ರಾಮೀಣ ಪ್ರದೇಶದ ಜನರಿಗೆ ಬಹಳಷ್ಟು ಅನುಕೂಲವಾಗುತ್ತಿರುವುದು ಸಂತೋಷದ ಸಂಗತಿಯಾಗಿದ್ದು, ಅವರ ನಿಸ್ವಾರ್ಥ ಸೇವೆಗೆ ಶ್ಲಾಘನೆ ವ್ಯಕ್ತಪಡಿಸುತ್ತೇನೆ. ವಿಲೇಜ್ ಕ್ಲಿನಿಕ್ ವಿಶೇಷತೆ ಬಗ್ಗೆ ಮಾಹಿತಿ ಪಡೆದಿದ್ದು, ಈ ಕ್ಲಿನಿಕ್ ವಿಶೇಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರುತ್ತೇನೆ .

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

‎ವೈದ್ಯಕೀಯ ಸೇವೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಹೃದಯರೋಗ ತಜ್ಞ, ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತ ಶ್ರೀ ಡಾ. ಬಿ.ರಮಣರಾವ್ ಅವರು ಗ್ರಾಮೀಣ ಬಡ ಜನರಿಗೆ ಉಚಿತ ಆರೋಗ್ಯ ಚಿಕಿತ್ಸೆಯನ್ನು ಕಳೆದ 50 ವರ್ಷಗಳಿಂದ ನೀಡುತ್ತ ಬಂದಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದರು.

ಟಿ.ಬೇಗೂರಿನಲ್ಲಿ ಶ್ರೀ ಡಾ.ಬಿ.ರಮಣರಾವ್ ಅವರ ವಿಲೇಜ್ ಕ್ಲಿನಿಕ್ ನ ಸುವರ್ಣ ಮಹೋತ್ಸವ ಮತ್ತು ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‎ಡಾ.ಬಿ.ರಮಣರಾವ್ ಅವರು 1973ರಿಂದ ಸುಮಾರು 2.5 ಮಿಲಿಯನ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ. ಪ್ರತಿ ಭಾನುವಾರ 700ಕ್ಕೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ, 20,000 ಕ್ಕೂ ಹೆಚ್ಚು ಕಣ್ಣಿನ ಶಸ್ತ್ರಚಿಕಿತ್ಸೆಗಳು, ಶಾಲಾ ಮಕ್ಕಳಿಗೆ ಬೆಂಬಲ, ಶೌಚಾಲಯ ನಿರ್ಮಾಣ, ವೃಕ್ಷಾರೋಪಣ ಮತ್ತು ನಿಯಮಿತ ಯೋಗ ಶಿಬಿರಗಳಂತಹ ಸೇವೆಗಳನ್ನು ನೀಡುತ್ತಿದ್ದಾರೆ. ಅವರ ಸೇವೆಗಳು ವೈದ್ಯಕೀಯ ಸೇವಾ ಕ್ಷೇತ್ರಕ್ಕೆ ಪ್ರೇರಣೆ ಮತ್ತು ಸಮಾಜಕ್ಕೆ ಸ್ಫೂರ್ತಿಯಾಗಿವೆ ಎಂದರು.

ಪ್ರಧಾನಿಗಳ ಗಮನಕ್ಕೆ ತರುತ್ತೇನೆ:

ಈ ವಿಲೇಜ್ ಕ್ಲಿನಿಕ್ ನಿಂದ ಗ್ರಾಮೀಣ ಪ್ರದೇಶದ ಜನರಿಗೆ ಬಹಳಷ್ಟು ಅನುಕೂಲವಾಗುತ್ತಿರುವುದು ಸಂತೋಷದ ಸಂಗತಿಯಾಗಿದ್ದು, ಅವರ ನಿಸ್ವಾರ್ಥ ಸೇವೆಗೆ ಶ್ಲಾಘನೆ ವ್ಯಕ್ತಪಡಿಸುತ್ತೇನೆ. ವಿಲೇಜ್ ಕ್ಲಿನಿಕ್ ವಿಶೇಷತೆ ಬಗ್ಗೆ ಮಾಹಿತಿ ಪಡೆದಿದ್ದು, ಈ ಕ್ಲಿನಿಕ್ ವಿಶೇಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರುತ್ತೇನೆ ಎಂದರು.

ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಬ್ಯಾಡರಹಳ್ಳಿ ಎಂಬ ಸಣ್ಣಗ್ರಾಮದಲ್ಲಿ ಉಚಿತ ಚಿಕಿತ್ಸೆ ನೀಡುವ ಮೂಲಕ ರಾಜ್ಯದ ಜನರಿಗೆ ಆರೋಗ್ಯದ ಶಕ್ತಿ ನೀಡುತ್ತಿರುವುದು ಡಾ. ರಮಣರಾವ್ ಅವರ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿದೆ. ನಾವು ಕ್ಲಿನಿಕ್ ಬಗ್ಗೆ ಕೇಳಿದ್ದು ಈಗ ಸ್ವತಃ ನೋಡಿ ನಮಗೆ ಸಂತೋಷವಾಯಿತು. ಈ ಕ್ಲಿನಿಕ್ ನಿರಂತರವಾಗಿ ನಡೆಯಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು

ವಿಲೇಜ್ ಕ್ಲಿನಿಕ್ ಬಗ್ಗೆ ಮಾಹಿತಿ ನೀಡಿ ಎಲ್ಲ ಸೌಲಭ್ಯಗಳನ್ನು ತಿಳಿಸಿದ ನಂತರ ಡಾ. ರಮಣರಾವ್ ಅವರ ತೋಟದ ಮನೆಯಲ್ಲಿ ಕೆಲ ಕಾಲ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.

ಈ ಸಂದರ್ಭದಲ್ಲಿ ಚಿತ್ರದುರ್ಗದ ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ, ಡಾ.ರಮಣರಾವ್, ಸ್ಥಳೀಯ ಮುಖಂಡರಾದ ರಾಜಶೇಖರ್, ಬಿ.ಟಿ ರಾಮಚಂದ್ರಯ್ಯ, ಮುನಿರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.