ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಕುಲಾಧಿಪತಿ, ಪದ್ಮಭೂಷಣ ಪುರಸ್ಕೃತ ಡಾ.ರಾಮದಾಸ್ ಎಂ. ಪೈ ಅವರ 90ನೇ ಹುಟ್ಟುಹಬ್ಬವನ್ನು ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಯಶಸ್ವಿಯಾಗಿ ಆಚರಿಸಲಾಗುತ್ತಿದೆ. ವಿವಿಧೆಡೆ ಸೆ.16ರಿಂದ ಆರಂಭವಾದ ಅದ್ಧೂರಿ ಆಚರಣೆಯು ಶೈಕ್ಷಣಿಕ, ಸಮುದಾಯ ಕಾರ್ಯಕ್ರಮಗಳಲ್ಲಿ ಆರೋಗ್ಯ ವೃತ್ತಿಪರರು ಮತ್ತು ಸಾರ್ವಜನಿಕರ ಭಾಗವಹಿಸುವಿಕೆ ಡಾ.ಪೈ ಅವರ ದೂರದೃಷ್ಟಿ ನಾಯಕತ್ವವನ್ನು ಪ್ರತಿಬಿಂಬಿಸಿತು.ಡಾ.ಪೈ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಮತ್ತು ಅಂಗಾಂಗ ದಾನ ಪ್ರತಿಜ್ಞೆ ನಡೆಸಲಾಯಿತು. ಮಾಹೆಯ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ಸೇರಿ ಸುಮಾರು 200 ಮಂದಿ ರಕ್ತದಾನ ಮಾಡಿದರು. ಸಾಕಷ್ಟು ಮಂದಿ ಅಂಗಾಂಗ ದಾನದ ಪ್ರತಿಜ್ಞೆಯ ಮೂಲಕ ನಿಸ್ವಾರ್ಥ ಸೇವಾ ಮನೋಭಾವ ಪ್ರದರ್ಶಿಸಿದರು.
ಜೊತೆಗೆ ಮಣಿಪಾಲ-ಮಂಗಳೂರು ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ, ಎರಡೂ ಜಿಲ್ಲೆಯಲ್ಲಿನ ಸಮುದಾಯ ಮತ್ತು ಪಶು ಆರೋಗ್ಯ ಕೇಂದ್ರಗಳು, ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರಿನ ಲೇಡಿ ಗೋಷೆನ್ ಆಸ್ಪತ್ರೆ ಸೇರಿದಂತೆ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಡಳಿತದ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 20,000ಕ್ಕೂ ಹೆಚ್ಚು ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.ಸುಮಾರು 1000 ಯಕ್ಷಗಾನ ಕಲಾವಿದರ ಕುಟುಂಬದವರಿಗೆ ಮಣಿಪಾಲ ಆರೋಗ್ಯ ಕಾರ್ಡ್ ನೀಡಿ, ಮಾಹೆ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳ ಮೇಲೆ ವಿಶೇಷ ರಿಯಾಯಿತಿಯ ಸೌಲಭ್ಯ ನೀಡಲಾಯಿತು.
ವಿಎಸ್‌ಒ ಹಮ್ಮಿಕೊಂಡಿದ್ದ ಸುಸ್ಥಿರತೆ ಕುರಿತು ರಾಷ್ಟ್ರೀಯ ಸಮ್ಮೇಳನದಲ್ಲಿ ಸುಮಾರು 700 ಜನರು ಪಾಲ್ಗೊಂಡಿದ್ದರು. 15 ರಾಷ್ಟ್ರೀಕೃತ ಎನ್‌ಜಿಒ ಪ್ರದರ್ಶನ, ವಿಶ್ವಸಂಸ್ಥೆಯ ವಿವಿಧ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು 110 ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.ಡಾ. ಪೈ ಅವರ ಹುಟ್ಟುಹಬ್ಬದ ಸ್ಮರಣಾರ್ಥ ಮಾಹೆಯ ಸಾರ್ವಜನಿಕ ಸಂಪರ್ಕ ವಿಭಾಗವು ರಾಷ್ಟ್ರಮಟ್ಟದ ‘ಮೇಘಮಲ್ಹಾರ್: ಮಳೆ ಮತ್ತು ಲಯಕ್ಕೆ ದೃಶ್ಯ ಗೌರವ’ ಹಾಗೂ ‘ನನ್ನ ಮಾಹೆ, ನನ್ನ ಕ್ಯಾಂಪಸ್’ ಎಂಬ ಛಾಯಾಚಿತ್ರ ಸ್ಪರ್ಧೆ ಆಯೋಜಿಸಿತ್ತು. ಇದರಲ್ಲಿ ಸುಮಾರು 2000 ಮಂದಿ ಭಾಗವಹಿಸಿದ್ದರು. ವಿಜೇತರಾದ ಮತ್ತು ಅಂತಿಮ ಸುತ್ತಿಗೆ ಆಯ್ಕೆಯಾದ ಛಾಯಚಿತ್ರಗಳನ್ನು ಬುಧವಾರ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಪ್ರದರ್ಶಿಸಲಾಯಿತು.
ಮಂಗಳೂರು, ಬೆಂಗಳೂರು, ಜಮ್‌ಶೆಡ್‌ಪುರ ಮತ್ತು ದುಬೈಯ ಮಣಿಪಾಲ್ ಗ್ರೂಪ್ ಕ್ಯಾಂಪಸ್‌ಗಳಲ್ಲಿಯೂ ಜನ್ಮದಿನಾಚರಣೆಗಳು ನಡೆದವು. ಇದು ಡಾ. ಪೈ ಅವರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗೆ ವ್ಯಾಪಕ ಗೌರವ ಮತ್ತು ಮೆಚ್ಚುಗೆ ಪ್ರದರ್ಶಿಸಿತು.ಹುಟ್ಟುಹಬ್ಬ ಆಚರಣೆಯಂದು ಕೈಗೊಂಡ ಈ ಉಪಕ್ರಮಗಳು ಸೆ.20ರಂದು ನಡೆವ ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಎಜಿಇ) ಕಾಲೇಜು ಶಿಕ್ಷಕರ 4ನೇ ಸಮಾವೇಶದವರೆಗೂ ಮುಂದುವರಿಯಲಿದೆ.
ಡಾ. ರಾಮದಾಸ್ ಪೈ ಅವರ ಹುಟ್ಟುಹಬ್ಬದ ಆಚರಣೆಯು ನಮ್ಮ ಸಂಸ್ಥೆಯಲ್ಲಿ ಅವರು ಬೆಳೆಸಿದ ಮಾನವೀಯ ಸೇವೆ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆ ಪ್ರತಿಬಿಂಬಿಸುತ್ತದೆ. ಇದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅವರ ನಾಯಕತ್ವ ಮತ್ತು ನಾವೀನ್ಯತೆಯ ಪರಂಪರೆ ಮುಂದುವರಿಸುವ ಬದ್ಧತೆಯಾಗಿದೆ.- ಡಾ.ಎಚ್.ಎಸ್.ಬಲ್ಲಾಳ್, ಮಾಹೆಯ ಸಹ ಕುಲಪತಿಭವಿಷ್ಯತ್ತು ಎಂದರೆ ಸಂಶೋಧನೆ, ಸಂಶೋಧನೆಯು ಭವಿಷ್ಯದ ಜಗತ್ತನ್ನು ರೂಪಿಸಲಿದೆ, ಆದರೆ ಈ ಸಂಶೋಧನೆಗಳು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು ಎಂದು ಆಸ್ಟ್ರಿಯಾದ ಲಿಯೋಬೆನ್ ತಾಂತ್ರಿಕ ವಿಶ್ವವಿದ್ಯಾನಿಲಯದ ರೆಕ್ಟರ್ ಪ್ರೊ.ಪೀಟರ್ ಮೊಸೆರ್ ಹೇಳಿದ್ದಾರೆ.ಬುಧವಾರ ಮಣಿಪಾಲದಲ್ಲಿ ನಡೆದ ಡಾ.ರಾಮದಾಸ ಎಂ. ಪೈ ಅವರ 90ನೇ ಹುಟ್ಟುಹಬ್ಬದ ಪ್ರಯುಕ್ತ ‘ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಪರಿವರ್ತನೆಯತ್ತ’ ಎಂಬ 6ನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದರು.ಡಾ. ರಾಮದಾಸ್ ಪೈ ಅವರಿಗೆ ಜಾಗತಿಕ ಶೈಕ್ಷಣಿಕ ದೃಷ್ಟಿಕೋನವಿದೆ, ಅವರ ಈ ದೂರದರ್ಶಿತ್ವದ ಪರಿಣಾಮವಾಗಿ ಮಣಿಪಾಲದಲ್ಲಿ ಮೌಲ್ಯಗಳ ಅಡಿಪಾಯದ ಮೇಲೆ ಸಂಶೋಧನೆಗಳು ನಡೆಯುತ್ತಿವೆ. ಇದು ಸಮಾಜದ ಸುಸ್ಥಿರ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆಗಳನ್ನು ನೀಡಬಲ್ಲುದು ಎಂದು ಶ್ಲಾಘಿಸಿದ ಅವರು, ಆಸ್ಟ್ರಿಯಾವು ಮಾಹೆಯ ಜೊತೆಯಾಗಿ ಸಾಗಬಯಸುತ್ತದೆ ಎಂದರು.ಆಸ್ಟ್ರೀಯಾದಲ್ಲಿ ಭಾರತವು ಉದಯಿಸುತ್ತಿರುವ ರಾಷ್ಟ್ರ ಎಂದು ಕರೆಯಲಾಗುತ್ತದೆ. ಆದರೆ ನಾನು ಅದನ್ನು ಸರಿಪಡಿಸುತಿದ್ದೇನೆ. ಭಾರತವು ಈಗಾಗಲೇ ಉದಯವಾಗಿರುವ ರಾಷ್ಟ್ರವಾಗಿದೆ. ಜಗತ್ತು ಇದನ್ನು ಗಮನಿಸಬೇಕು ಎಂದು ಹೇಳಿದರು.ಮುಖ್ಯ ಅತಿಥಿಯಾಗಿದ್ದ ಕೆನಡದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಜಾನ್ ಎಚ್.ವಿ, ಗಿಲ್ಬರ್ಟ್ ಅವರು, ಸುಸ್ಥಿರ ಆಹಾರ ಪದ್ಧತಿ, ಶೂನ್ಯ ತ್ಯಾಜ್ಯ ಉತ್ಪಾದನೆ ಮತ್ತು ಕೊಳ್ಳುಬಾಕತನಗಳ ಬಗ್ಗೆ ತೀವ್ರವಾಗಿ ಆಲೋಚಿಸಬೇಕಾದ ಕಾಲದಲ್ಲಿದ್ದೇವೆ ಎಂದು ಎಚ್ಚರಿಸಿದರು.ಮಾಹೆಯ ಉಪಕುಲಪತಿ ಲೆ.ಜ. ಡಾ. ಎಂ. ಡಿ. ವೆಂಕಟೇಶ್ ಪ್ರಾಸ್ತಾವಿಕ ಮಾತನಾಡಿ, ಡಾ. ರಾಮದಾಸ್ ಪೈ ಅವರ 90 ವರ್ಷಾಚರಣೆ ಎಂದರೆ ಅದು ಭಾರತೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಒಂಬತ್ತು ದಶಕಗಳ ಪರಿವರ್ತನಾ ನಾಯಕತ್ವವನ್ನು ಸಂಭ್ರಮಿಸುವುದಾಗಿದೆ ಎಂದರು.ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ. ಪ್ರವೀಣ್ ಕುಮಾರ್, ಸಂಯೋಜಕ ಡಾ. ಅಭಿಷೇಕ್ ಚತುರ್ವೇದಿ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಅಭಿಜಿತ್ ಶ್ಯಾನುಭಾಗ್ ಮತ್ತು ಅರ್ನಾಲ್ಡ್ ಮೋಕ್ಷಿತ್ ಅಮ್ಮನ್ನ ವೇದಿಕೆಯಲ್ಲಿದ್ದರು.33 ಮೆ.ವ್ಯಾ. ವಿದ್ಯುತ್ ಉತ್ಪಾದನೆಮಾಹೆ ವಿ.ವಿ.ಯು ಸುಸ್ಥಿರತೆಯೇ ಜೀವನ ಮಾರ್ಗ ಎಂಬ ಆದರ್ಶದೊಂದಿಗೆ ಮುನ್ನಡೆಯುತ್ತಿದ್ದು, ರೆಡ್ಯೂಸ್, ರಿಯ್ಯೂಸ್, ರಿಸೈಕಲ್‌ಗೆ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದೆ. ದೇಶದಾದ್ಯಂತ ಇರುವ ಮಾಹೆಯ ಅಂಗಸಂಸ್ಥೆಗಳಲ್ಲಿ 130 ಕೋಟಿ ರು. ವೆಚ್ಚದಲ್ಲಿ 33 ಮೆಗಾವ್ಯಾಟ್ ಪರ್ಯಾಯ ವಿದ್ಯುತ್ ಉದ್ಪಾದನೆ ಯೋಜನೆ ಹಾಕಿಕೊಳ್ಳಲಾಗಿದೆ, 2040ರೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಲೆ.ಜ. ಡಾ. ಎಂ.ಡಿ. ವೆಂಕಟೇಶ್ ಹೇಳಿದರು.