ಸಾರಾಂಶ
- ಖ್ಯಾತ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪ ಅವರ ನಿಧನಕ್ಕೆ ಸಂತಾಪ ಸೂಚಕ ಸಭೆ
ಕನ್ನಡಪ್ರಭ ವಾರ್ತೆ, ತರೀಕೆರೆಖ್ಯಾತ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪ ಕನ್ನಡ ಸಾಹಿತ್ಯದ ಮೇರು ಲೇಖಕರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಹೇಳಿದರು.
ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಖ್ಯಾತ ಕಾದಂಬರಿ ಡಾ.ಎಸ್.ಎಲ್. ಭೈರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು. ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಲೇಖಕರು. ಕನ್ನಡದಲ್ಲಿ ಇವರು ರಚಿಸಿರುವ ಕೃತಿಗಳು ಇಂಗ್ಲೀಷ್ ಹಾಗೂ ಇತರೆ ಭಾರತೀಯ ಬಾಷೆಗಳಿಗೆ ಅನುವಾದಗೊಂಡು ಹೆಸರಾದವರು. ಅದರಲ್ಲೂ ಇವರ ಕೃತಿಗಳು ಅತಿ ಹೆಚ್ಚು ಮಹಿಳೆಯರು ಮತ್ತು ಹೊಸ ಲೇಖಕರನ್ನು ಆಕರ್ಷಿಸಿದೆ ಎಂದು ಅಭಿಪ್ರಾಯ ಪಟ್ಟರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ದಾದಾಪೀರ್ ಅವರು ಮಾತನಾಡಿ ಎಸ್.ಎಲ್.ಭೈರಪ್ಪನವರ ಕಾದಂಬರಿಗಳಲ್ಲಿ ಗ್ರಾಮೀಣ ಬದುಕು ಹಾಗೂ ಪ್ರಾಚೀನ ಭಾರತೀಯ ಪರಂಪರೆ ಅರಳಿದೆ. ಮಹಿಳೆಯರ ಕುರಿತ ಅವರ ಸಾಹಿತ್ಯದ ಪಾತ್ರಗಳು ಗಮನಾರ್ಹ, ನಾಡಿನಲ್ಲಿ ಅನೇಕ ಓದುಗರನ್ನು ಹುಟ್ಟು ಹಾಕಿದ ಕೀರ್ತಿ ಭೈರಪ್ಪ ಅವರಿಗೆ ಸಲ್ಲಬೇಕು ಎಂದು ಹೇಳಿದರು.
ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ಡಾ.ಎಸ್.ಎಲ್.ಭೈರಪ್ಪ ತಮ್ಮ ಕೃತಿಗಳ ಮೂಲಕ ಇಡೀ ವಿಶ್ವಕ್ಕೆ ಸಾಹಿತ್ಯ ಭಂಡಾರ ನೀಡಿದ್ದಾರೆ. ಬೆಳಕಿನಷ್ಟೇ ಸತ್ಯವಾದ ಸಾಹಿತ್ಯವನ್ನು ಅವರು ರಚಿಸಿದ್ದಾರೆ. ಶ್ರೇಷ್ಠವಾದ ವ್ಯಕ್ತಿಗಳಾಗಿ ಎಲ್ಲರ ನೆನಪಿನಲ್ಲಿ ಉಳಿಯುತ್ತಾರೆ ಎಂದು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಧಾನ ಸಂಚಾಲಕ ಇಮ್ರಾನ್ ಅಹಮದ್ ಬೇಗ್ ಮಾತನಾಡಿ ಖ್ಯಾತ ಕಾದಂಬರಿ ಕಾರ ಡಾ.ಎಸ್.ಎಲ್.ಭೈರಪ್ಪ ತಮ್ಮ ಕೃತಿಗಳಲ್ಲಿ ಯಾವುದೇ ಕಾಲ್ಪನಿಕ ವಿಚಾರಗಳನ್ನು ಬರೆಯದೆ ತಮ್ಮ ಜೀವನದ ಕ್ಷಣ ಕ್ಷಣದ ಅನುಭವಗಳನ್ನು ಕಾದಂಬರಿಗಳ ರೂಪದಲ್ಲಿ ರಚಿಸಿರುವ ಒಬ್ಬ ವಾಸ್ತವ ಸಾಹಿತಿ. ಅವರು ಬರೆದಿರುವ ಅತ್ಮ ಚರಿತೆ ಭಿತ್ತಿ ಯನ್ನು ಓದಿದರೆ ಅವರ ಸಮಗ್ರ ಕಾದಂಬರಿ ಓದಿದಂತಾಗುವುದು ಎಂದು ಹೇಳಿದರು. ಲೇಖಕ ಮನಸುಳಿ ಮೋಹನ್ ಮಾತನಾಡಿ ಡಾ.ಎಸ್.ಎಲ್.ಭೈರಪ್ಪ ಅವರ ಆತ್ಮ ಸದಾ ಶಾಂತವಾಗಿದೆ. ಬದುಕಿರುವವರ ಆತ್ಮಕ್ಕೆ ಶಾಂತಿ ಇರುವುದಿಲ್ಲ. ಜಗತ್ತಿಗೆ ಮೌನಾಚರಣೆ ಅಗತ್ಯವಿ. ಮಾತಿನಿಂದಲೇ ಎಲ್ಲ ಸಮಸ್ಯೆಗಳು ಉದ್ಬವಿಸುತ್ತದೆ. ಸಾವಿನ ಸಂದರ್ಭದಲ್ಲಿ ಮಾತ್ರ ಮೌನಾಚರಣೆ ಸಲ್ಲದು ನಿತ್ಯ ಜೀವನದಲ್ಲಿ ಮೌನಾಚರಣೆ ಎಲ್ಲರಲ್ಲೂ ಹೆಚ್ಚಾಗಬೇಕು ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ಕಸಬ ಹೋಬಳಿ ಅಧ್ಯ.ಕ್ಷ ಟಿ.ಎನ್.ಜಗದೀಶ್ ಮಾತನಾಡಿ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ನಾಡಿಗೆ ನೀಡಿದಂತಹ ಮಹಾನ್ ವ್ಯಕ್ತಿ ಎಂದು ಹೇಳಿದರು.ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಮಾತನಾಡಿ ಹಿರಿಯ ಚೇತನ ಡಾ.ಎಸ್.ಎಲ್. ಭೈರಪ್ಪ ಅವರು ನನ್ನ ಓದುವ ಆಸಕ್ತಿಗೆ ಹಂಬಲವನ್ನು ತಂದವರು. ಅವರ ಕಾದಂಬರಿಗಳಾದ ಪರ್ವ, ಗೃಹಭಂಗ, ತಬ್ಬಲಿಯು ನೀನಾದೆ ಮಗನೆ, ಕವಲು, ದಾಟು, ಸಂಗೀತ ಪ್ರಧಾನವಾದ ಮಂದ್ರ ಸಾಕ್ಷಿ, ಭೀತ್ತಿ ಮುಂತಾದವು ಎಲ್ಲಾ ವರ್ಗದ ಓದುಗರನ್ನು ತಲುಪಿದೆ. ಅಂತಹ ಮಹಾನ್ ಚೇತನಕ್ಕೆ ಹೃದಯಪೂರ್ವಕ ನಮನ ಎಂದು ತಿಳಿಸಿದರು.ಸದ್ವಿದ್ಯಾ ಪಬ್ಲಿಕ್ ಶಾಲೆ ಪ್ರಾಂಶುಪಾಲರಾದ ಡಿ.ಹರ್ಷಿಣಿ ಮಾತನಾಡಿ ಬರೆದಂತೆ ಬದುಕಿದ, ಬದುಕಿದ್ದನ್ನೇ ಬರೆದಿಟ್ಟ ಡಾ.ಎಸ್.ಎಲ್.ಭೈರಪ್ಪ ಪ್ರತಿ ಕಾದಂಬರಿಯಲ್ಲೂ ಹಳ್ಳಿ ಸೊಗಡಿನ ಮೂಲಕ ಜೀವನವನ್ನು ಮುಟ್ಟುವ ಗಟ್ಟಿತನಕ್ಕೆ ಅವರೇ ಸಾಟಿ, ನಿರಾಕರಿಸಿದತ ಬದುಕನ್ನು ಬಂದಂತೆ ಸ್ವೀಕರಿಸುವುದನ್ನು ತಮ್ಮ ಕಾದಂಬರಿಗಳ ಪಾತ್ರದ ಮೂಲಕ ಹೆಣ್ಣುಮಕ್ಕಳ ಮನೋಸ್ಥಿತಿ ಬಿಂಬಿಸುವ ನೈಪುಣ್ಯ ಭೈರಪ್ಪನವರ ಬರಹಕ್ಕೆ ಇದೆ ಎಂದು ಹೇಳಿದರು.ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್ ಮಾತನಾಡಿ ಡಾ.ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಗಳು ಚಲನಚಿತ್ರವಾಯಿತು. ಅವರ ಕಾದಂಬರಿ ಗುಜರಾತಿ ಮತ್ತು ಮರಾಠಿ ಭಾಷೆಗೆ ಅನುವಾದಗೊಂಡಿದೆ ಎಂದು ಅವರು ಹೇಳಿದರು.ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಬಿ.ಎಸ್.ಮಂಜಯ್ಯ, ಸೈಯದ್ ಮುಹೀಬ್ ಸಭೆಯಲ್ಲಿ ಭಾಗವಹಿಸಿದ್ದರು.-
25ಕೆಟಿಆರ್.ಕೆ.4ಃ ತರೀಕೆರೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಂದ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರ ನಿಧನದ ಹಿನ್ನೆಲಯಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಕಸಾಪ ಅದ್ಯ.ಕ್ಷ ರವಿ ದಳವಾಯಿ, ಲೇಖಕ ಮನಸುಳಿ ಮೋಹನ್, ಕಸಾಪ ಮಾಜಿ ಅಧ್ಯಕ್ಷ ಟಿ.ದಾದಾಪೀರ್, ಕನ್ನಡಶ್ರೀ ಬಿ.ಎಸ್.ಭಗವಾನ್, ಜಿಲ್ಲಾ ಕಸಾಪ ಪ್ರಧಾನ ಸಂಚಾಲಕರಾದ ಇಮ್ರಾನ್ ಅಹಮದ್ ಬೇಗ್ ಮತ್ತಿತರರು ಭಾಗವಹಿಸಿದ್ದರು.