ಸಾರಾಂಶ
ತಮ್ಮ ವೈದ್ಯಕೀಯ ಸೇವೆಯಲ್ಲದೆ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಭಾಗವಹಿಸಿದ್ದ ಅಪ್ರತಿಮ ದೇಶಪ್ರೇಮಿ ಡಾ.ಬಿ.ಸಿ. ರಾಯ್
ಕನ್ನಡಪ್ರಭ ವಾರ್ತೆ ಮೈಸೂರು
ಇಂದಿನ ವೈದ್ಯರು ಡಾ.ಬಿ.ಸಿ. ರಾಯ್ ವ್ಯಕ್ತಿತ್ವವನ್ನು ಅನುಸರಿಸಬೇಕು ಎಂದು ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಕರೆ ನೀಡಿದರು.ಸುಯೋಗ್ ಆಸ್ಪತ್ರೆಯು ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಸಿ. ರಾಯ್ ಅವರು ಬಿಹಾರದಲ್ಲಿ ಜನಿಸಿ ಎಂಬಿಬಿಎಸ್ ಪದವಿಯನ್ನು ಪಡೆದು ಇಂಗ್ಲೆಂಡ್ ನಲ್ಲಿ ಉನ್ನತ ಶಿಕ್ಷಣವನ್ನು ಗಳಿಸಿ, ಭಾರತಕ್ಕೆ ಮರಳಿ ತಮ್ಮ ವೈದ್ಯಕೀಯ ಸೇವೆಯಲ್ಲದೆ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಭಾಗವಹಿಸಿದ್ದ ಅಪ್ರತಿಮ ದೇಶಪ್ರೇಮಿ ವೈದ್ಯರು ಎಂದರು.
ವೈದ್ಯಕೀಯ ಕಾಲೇಜಿನ ಬೋಧಕರಾಗಿ, ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿ ಶಿಕ್ಷಣ ಕ್ಷೇತ್ರಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ ಡಾ.ಬಿ.ಸಿ. ರಾಯ್, ತಮ್ಮ ಸಾಮಾಜಿಕ ಕಾಳಜಿಯಿಂದಾಗಿ ರಾಜಕೀಯಕ್ಕೆ ಬಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಹಲವಾರು ಸಾಮಾಜಿಕ ವ್ಯಾಧಿಗಳಿಗೆ ಚಿಕಿತ್ಸೆ ನೀಡಿದ ಸಾಮಾಜಿಕ ಕಳಕಳಿಯ ವೈದ್ಯರಿವರು ಎಂದು ಅವರು ಹೇಳಿದರು.ಇದೇ ವೇಳೆ ಸುಯೋಗ್ ಆಸ್ಪತ್ರೆಯ ಅಧೀಕ್ಷಕ ಡಾ. ಪೊನ್ನಪ್ಪ, ಜೀರ್ಣಾಂಗ ಶಸ್ತ್ರಕ್ರಿಯಾ ತಜ್ಞ ಡಾ. ಶರತ್ ಕುಮಾರ್, ನರರೋಗ ತಜ್ಞ ಡಾ. ಶಶ್ತಾರ ಪನೆಯಾಲ ಅವರನ್ನು ಸನ್ಮಾನಿಸಲಾಯಿತು.
ಸುಯೋಗ್ ಆಸ್ಪತ್ರೆಯ ಜಿಎಂ ಪಿ.ಜೆ. ಅರುಣ್ ಕುಮಾರ್, ಟ್ರಸ್ಟಿ ಡಾ. ಸುಧಾ ಯೋಗಣ್ಣ, ವ್ಯವಸ್ಥಾಪಕ ನಿರ್ದೇಶಕ ಡಾ. ಸುಯೋಗ್ ಯೋಗಣ್ಣ, ನಿರ್ದೇಶಕರಾದ ಡಾ. ಯಶಿತಾ ರಾಜ್ ಮೊದಲಾದವರು ಇದ್ದರು.