ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು: ಡಾ. ಸರಳಾ ಚಂದ್ರಶೇಖರ್‌

| Published : Mar 30 2024, 12:52 AM IST

ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು: ಡಾ. ಸರಳಾ ಚಂದ್ರಶೇಖರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಲ ಮುಂದುವರಿದ್ದರೂ ಇಂದಿಗೂ ಮಹಿಳೆ ಶೋಷಣೆಗೆ ಒಳಗಾಗುತ್ತಿರುವುದು ಬೇಸರದ ಸಂಗತಿ. ಶಿಕ್ಷಣದ ಕೊರತೆಯಿಂದಾಗ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಹಿಳೆ ಸೂಕ್ತ ಶಿಕ್ಷಣ ಪಡೆಯಬೇಕು. ಅಲ್ಲದೆ, ಸರ್ಕಾರಗಳು ಸ್ತ್ರೀಯರ ಏಳಿಗೆಗೆ ಶ್ರಮಿಸುತ್ತಿದ್ದು, ಅಂತಹ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು. ಕಷ್ಟ ಕಾಲದ ಆಪತ್ತಿಗಾಗಿ ಹೂಡಿಕೆಯಂತಹ ಪ್ರಕ್ರಿಯೆಯಲ್ಲೂ ತೊಡಗಬೇಕು ಎಂದು ಕಾವೇರಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸರಳಾ ಚಂದ್ರಶೇಖರ್ ಕರೆ ನೀಡಿದರು.

ಮೈಸೂರಿನ ಜಯನಗರದಲ್ಲಿರುವ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘವು ಶುಕ್ರವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಆಸ್ತಿ ಮಾಡುವುದರ ಬದಲಿಗೆ ಅವರಿಗೆ ಶಿಕ್ಷಣ ನೀಡಿದರೆ ಅದೇ ಒಂದು ದೊಡ್ಡ ಹೂಡಿಕೆ ಆಗುತ್ತದೆ ಎಂದರು.

ಮಹಿಳೆ ತನ್ನ ಆರೋಗ್ಯದ ಕಡೆ ಗಮನ ಕೊಡಬೇಕು. ಮಹಿಳೆಯ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಕುಟುಂಬದ ಆರೋಗ್ಯ ಚೆನ್ನಾಗಿರುತ್ತದೆ. ಮಹಿಳೆಯ ಜವಾಬ್ದಾರಿಯ ಸಂದರ್ಭದಲ್ಲಿ ಆರೋಗ್ಯವನ್ನು ಮರೆಯಬಾರದು. ಉತ್ತಮ ಆರೋಗ್ಯ ಕಾಪಾಡಿಕೊಂಡರೆ ಕುಟುಂಬ ಆರೋಗ್ಯದಿಂದ ಇರುತ್ತೆ. ಸಮಾಜ, ದೇಶ ಆರೋಗ್ಯದಿಂದ ಇರುತ್ತದೆ. ಆಗ ತೊಟ್ಟಿಲು ತೂಗಬಲ್ಲ ಕೈಗಳು ಜಗತ್ತನ್ನೇ ತೂಗಬಲ್ಲವಾಗುತ್ತವೆ ಎಂದು ಅವರು ಹೇಳಿದರು.

ಕಾಲ ಮುಂದುವರಿದ್ದರೂ ಇಂದಿಗೂ ಮಹಿಳೆ ಶೋಷಣೆಗೆ ಒಳಗಾಗುತ್ತಿರುವುದು ಬೇಸರದ ಸಂಗತಿ. ಶಿಕ್ಷಣದ ಕೊರತೆಯಿಂದಾಗ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಹಿಳೆ ಸೂಕ್ತ ಶಿಕ್ಷಣ ಪಡೆಯಬೇಕು. ಅಲ್ಲದೆ, ಸರ್ಕಾರಗಳು ಸ್ತ್ರೀಯರ ಏಳಿಗೆಗೆ ಶ್ರಮಿಸುತ್ತಿದ್ದು, ಅಂತಹ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ರಾಜ್ಯ ಮುಕ್ತ ವಿವಿ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಜಾಹ್ನವಿ ಮಾತನಾಡಿ, ಭಾರತದಲ್ಲಿ ವಿವಾಹ ವಿಚ್ಛೇದನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪತಿ ಪತ್ನಿಯರ ನಡುವೆ ತನ್ನದೇ ಸರಿ ಎನ್ನುವ ಮನೋಭಾವ ಇದಕ್ಕೆ ಕಾರಣವಾಗಿದೆ. ಕುಟುಂಬದಲ್ಲಿ ಯಾರಾದರು ಒಬ್ಬರೂ ಸೋಲುವುದನ್ನು ಕಲಿಯಬೇಕು. ಸೋತರೆ ಮಾತ್ರ ಸಂಬಂಧ ಉಳಿಯುತ್ತದೆ‌. ಒಮ್ಮೆ ಸೋತು ಜೀವನವನ್ನು ಗೆಲುವು ಎನ್ನಬಹುದು ಎಂದರು.

ಸಾಧಕಿಯರಿಗೆ ಸನ್ಮಾನ

ಇದೇ ವೇಳೆ ಮೈಸೂರು ವಿವಿ ಸ್ಕೂಲ್ ಆಫ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್ ಸಹಾಯಕ ಪ್ರಾಧ್ಯಾಪಕಿ ಡಾ.ಎಸ್. ಯಶಸ್ವಿನಿ, ಬಿಕೆಜಿ ಆಸ್ಪತ್ರೆ ಗೈನಕಾಲೋಜಿಕಲ್ ಆನ್ಕಾಲಜಿಸ್ಟ್ ಡಾ.ಡಿ.ಆರ್. ರಮ್ಯಾ, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿ. ಸುಚೇತನಾ, ಪತ್ರಕರ್ತೆ ಪಿ. ಶಿಲ್ಪಾ, ವೈದ್ಯೆ ಡಾ.ಎಚ್.ಸಿ. ಶೈಲಜಾ ರಾಣಿ ಮತ್ತು ಕರ್ನಾಟಕ ಕ್ರಿಕೆಟ್ ಮಹಿಳಾ ತಂಡದ ಮಾಜಿ ನಾಯಕಿ ರಕ್ಷಿತಾ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಬಳಿಕ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ರವಿಕುಮಾರ್, ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಜೆ. ಶೋಭಾ ರಮೇಶ್, ಕಾರ್ಯದರ್ಶಿ ಬಿ.ಪಿ. ಉಷಾರಾಣಿ, ಖಜಾಂಚಿ ಅನಿತಾ ಹೇಮಂತ್, ನಿರ್ದೇಶಕರಾದ ಅನಿತಾ ಮನೋಹರ್, ಬಿ.ಎಚ್.ಲತಾ, ಮಂಜುಳಾ ಭದ್ರೇಗೌಡ, ಲಲಿತಾ ರಂಗನಾಥ್, ಸುವರ್ಣಾ ರಾಜ್, ಎಂ. ಪ್ರತಿಮಾ, ಗೌರಮ್ಮ, ಟಿ.ಎಂ. ಸವಿತಾ ಮೊದಲಾದವರು ಇದ್ದರು.