ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಯಥಾವತ್ ಜಾರಿಗೆ ಆಗ್ರಹ

| Published : Feb 13 2024, 12:45 AM IST

ಸಾರಾಂಶ

ರಾಜ್ಯದ ಮೇಲೆ ಹಿಂದಿ ಹೇರಿಕೆ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವಿಗೆ ಮುಂದಾಗಬೇಕು. ಇದರಿಂದ ಕನ್ನಡ ಭಾಷೆಗೆ ಮಾರಕವಾಗಿದೆ. ಹಿಂದಿ ಭಾಷಿಕರಿಂದ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುಜನರು ಹಿಂದಿ ಮಾತನಾಡುತ್ತಾರೆ ಎಂದು ಹಿಂದಿ ಹೇರಿಕೆ ಮಾಡಬಾರದು. ಒಕ್ಕೂಟ ರಾಷ್ಟ್ರದಲ್ಲಿ ಉತ್ತರ ಭಾರತ ರಾಜ್ಯಗಳಲ್ಲಿ ದ್ವಿಭಾಷಾ ಸೂತ್ರ ಇದೆ. ಕನ್ನಡ ನಾಡಿಗೆ ಏಕೆ ಮಲತಾಯಿ ಧೋರಣೆ, ತ್ರಿಭಾಷಾ ಸೂತ್ರ ಬೇಡವೇ ಬೇಡ.

ಕನ್ನಡಪ್ರಭ ವಾರ್ತೆ ಮಂಡ್ಯಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಯಥಾವತ್ ಕಾಯ್ದೆಯಾಗಿ ರೂಪಿಸಿ ವಿಧಾನ ಮಂಡಲದ ಅಧಿವೇಶನದಲ್ಲಿ ಅಂಗೀಕರಿಸಿ ಜಾರಿಗೊಳಿಸುವಂತೆ ಒತ್ತಾಯಿಸಿ ಕದಂಬ ಸೈನ್ಯ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಬೆಂಗಳೂರು- ಮೈಸೂರು ಹೆದ್ದಾರಿ ಎಸ್.ಡಿ. ಜಯರಾಮ್ ವೃತ್ತದಲ್ಲಿ ಸೈನ್ಯದ ಕಾರ್ಯಕರ್ತರು ದೇಶ ಕಂಡ ಅಪ್ರತಿಮ ಚಕ್ರವರ್ತಿ, ಕನ್ನಡಿಗ ಇಮ್ಮಡಿ ಪುಲಕೇಶಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪ್ರತಿಭಟಿಸಿದರು.

ಕನ್ನಡಿಗರ ಉದ್ಯೋಗದಾತೆ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು2017ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಂದಿನ ಮುಖ್ಯಮಂತ್ರಿಗಳಿಗೆ ಸಲ್ಲಿಸಿದೆ. ಆದರೆ, ಇದುವರೆಗೂ ವರದಿಯನ್ನು ಕಾಯ್ದೆಯಾಗಿ ಜಾರಿಗೆ ತರಲಿಲ್ಲ. ಇದರಿಂದ ಕನ್ನಡಿಗರು ಉದ್ಯೋಗದಲ್ಲಿ ಸಾಕಷ್ಟು ವಂಚಿತರಾಗಿ ಸಂಕಷ್ಟದಲ್ಲಿದ್ದಾರೆ. ಮಹಿಷಿ ವರದಿ ಕಾಯ್ದೆಯಾಗಿ ಜಾರಿಗೆ ತಂದರೆ ಮಾತ್ರ ಕನ್ನಡಿಗರ ಉದ್ಯೋಗ ಲಭಿಸುತ್ತದೆ ಎಂದರು.

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ ಸುಗ್ರೀವಾಜ್ಞೆ ಜಾರಿ ಮಾಡಿರುವುದನ್ನು ಕಾಯ್ದೆಯಾಗಿ ರೂಪಿಸಬೇಕು. ಕನ್ನಡ ನಾಡಿನಲ್ಲಿ ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಇರಬೇಕು. ಇದಕ್ಕಾಗಿ ಕಾಯ್ದೆ ಅಗತ್ಯವಾಗಿದೆ ಎಂದು ಆಗ್ರಹಿಸಿದರು.

ರಾಜ್ಯದ ಮೇಲೆ ಹಿಂದಿ ಹೇರಿಕೆ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವಿಗೆ ಮುಂದಾಗಬೇಕು. ಇದರಿಂದ ಕನ್ನಡ ಭಾಷೆಗೆ ಮಾರಕವಾಗಿದೆ. ಹಿಂದಿ ಭಾಷಿಕರಿಂದ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುಜನರು ಹಿಂದಿ ಮಾತನಾಡುತ್ತಾರೆ ಎಂದು ಹಿಂದಿ ಹೇರಿಕೆ ಮಾಡಬಾರದು. ಒಕ್ಕೂಟ ರಾಷ್ಟ್ರದಲ್ಲಿ ಉತ್ತರ ಭಾರತ ರಾಜ್ಯಗಳಲ್ಲಿ ದ್ವಿಭಾಷಾ ಸೂತ್ರ ಇದೆ. ಕನ್ನಡ ನಾಡಿಗೆ ಏಕೆ ಮಲತಾಯಿ ಧೋರಣೆ, ತ್ರಿಭಾಷಾ ಸೂತ್ರ ಬೇಡವೇ ಬೇಡ ಎಂದು ಆಗ್ರಹಿಸಿದರು.

ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಕೇಶಿ ಪುತ್ಥಳಿ ಕರ್ನಾಟಕದಲ್ಲಿ ಇಲ್ಲದಿರುವುದು ಕನ್ನಡಿಗರಿಗೆ ಮಾಡಿದ ಅವಮಾನ. ಕೂಡಲೇ ವಿಧಾನಸೌಧದ ಎದುರು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಬಾದಾಮಿ ರಾಯದುರ್ಗ ರಸ್ತೆಯಲ್ಲಿ ಅವಕಾಶ ನೀಡದೇ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಮತ್ತು ಜಗಜ್ಯೋತಿ ಬಸವಣ್ಣರ ಪುತ್ಥಳಿ ಅನಾವರಣ ಗೊಳ್ಳದೆ ಅನಾಥವಾಗಿ ಬಿದ್ದಿವೆ. ಬಾದಾಮಿ ನಗರದಲ್ಲಿ ಸ್ಥಳವಾಕಾಶ ನೀಡಿ ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿದರು.

ಕನ್ನಡಿಗರ ಪ್ರಥಮ ಚಕ್ರವರ್ತಿ ಕದಂಬ ಮಯೂರವರ್ಮ ಪುತ್ಥಳಿಯನ್ನು ಬನವಾಸಿ ಶ್ರೀಮಧುಕೇಶ್ವರ ದೇವಸ್ಥಾನದ ಎದುರು ಹಾಗೂ ಶಿರಸಿ ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ದಸಂಸ ಅಂದಾನಿ ಸೋಮನಹಳ್ಳಿ, ಪುಟ್ಟಂಕಯ್ಯ, ಡಾ.ದೇವನಹಳ್ಳಿ ದೇವರಾಜ್, ಎಸ್.ಶಿವಕುಮಾರ್, ಉಮ್ಮಡಹಳ್ಳಿ ನಾಗೇಶ್, ಚಿಕ್ಕವೆಂಕಟಪ್ಪ ರಾಮು, ಜೋಸೆಫ್, ರಾಮಕೃಷ್ಣ, ಆರಾಧ್ಯ ಗುಡಿಗೇನಹಳ್ಳಿ, ಥಾಮಸ್ ಬೆಂಜಮಿನ್ ಇತರರು ಭಾಗವಹಿಸಿದ್ದರು.