ಕಾರು, ಹೆಲಿಕಾಪ್ಟರ್‌ ಬಿಟ್ಟು ವಂದೇಭಾರತ್‌ ಎಂದ ಡಾ.ಶಾಮನೂರು

| Published : Jul 15 2024, 01:51 AM IST

ಸಾರಾಂಶ

ಮನೆಯಿಂದ ಹೊರಗೆ ಕಾಲಿಟ್ಟರೆ ಐಷಾರಾಮಿ ಕಾರುಗಳೇ ಮುಂದೆ ನಿಲ್ಲುವ, ತುರ್ತು ಕೆಲಸವೆಂದರೆ ಹೆಲಿಪ್ಯಾಡ್‌ನಲ್ಲಿ ಹೆಲಿಕಾಫ್ಟರ್‌ ಸಿದ್ಧವಾಗಿ ನಿಂತಿರುವಂಥ ಪ್ರಭಾವಿ ರಾಜಕಾರಣಿ, ಆಗರ್ಭ ಶ್ರೀಮಂತ, ಕಾಂಗ್ರೆಸ್‌ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸಿ, ಎಲ್ಲರ ಗಮನ ತನ್ನೆಡೆಗೆ ಸೆಳೆದಿದ್ದಾರೆ.

- ಧಾರವಾಡದಿಂದ ದಾವಣಗೆರೆಗೆ ಆಗಮಿಸಿದ್ದ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ

- - -- ಕೆಲ ದಶಕಗಳ ಬಳಿಕ ಶಾಮನೂರು ಶಿವಶಂಕರಪ್ಪ ರೈಲಿನಲ್ಲಿ ಪ್ರಯಾಣಿಸಿದ್ದು ಎಲ್ಲರಲ್ಲಿ ಅಚ್ಚರಿ

- ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ, ಬೆಂಗಾವಲು ಪೊಲೀಸರ ಜೊತೆಗೆ ಪ್ರಯಾಣ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಮನೆಯಿಂದ ಹೊರಗೆ ಕಾಲಿಟ್ಟರೆ ಐಷಾರಾಮಿ ಕಾರುಗಳೇ ಮುಂದೆ ನಿಲ್ಲುವ, ತುರ್ತು ಕೆಲಸವೆಂದರೆ ಹೆಲಿಪ್ಯಾಡ್‌ನಲ್ಲಿ ಹೆಲಿಕಾಫ್ಟರ್‌ ಸಿದ್ಧವಾಗಿ ನಿಂತಿರುವಂಥ ಪ್ರಭಾವಿ ರಾಜಕಾರಣಿ, ಆಗರ್ಭ ಶ್ರೀಮಂತ, ಕಾಂಗ್ರೆಸ್‌ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸಿ, ಎಲ್ಲರ ಗಮನ ತನ್ನೆಡೆಗೆ ಸೆಳೆದಿದ್ದಾರೆ.

ಕೆಲ ದಶಕಗಳಿಂದ ಈಚೆಗೆ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಶಿವಶಂಕರಪ್ಪ ಸರಳತೆ ಮೆರೆದರು. ಧಾರವಾಡದಿಂದ ಮಧ್ಯಾಹ್ನ 3.35ಕ್ಕೆ ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಬೆಂಗಳೂರಿಗೆ ತೆರಳಿದರು. ತಮ್ಮೊಂದಿಗೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ, ಬೆಂಗಾವಲು ಪೊಲೀಸರ ಜೊತೆಗೆ ಜನಸಾಮಾನ್ಯರಂತೆ ಪ್ರಯಾಣಿಸಿದ್ದು ಎಲ್ಲರ ಕುತೂಹಲಕ್ಕೂ ಕಾರಣವಾಗಿತ್ತು.

ಯಾವುದೇ ಕಾರ್ಯಕ್ರಮ ಇಲ್ಲ, ರೈಲ್ವೆ ಇಲಾಖೆ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭವೂ ಅಲ್ಲ. ಆದರೂ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದನ್ನು ಕಂಡು ಸ್ಥಳೀಯರು, ಪ್ರಯಾಣಿಕರು ಕುತೂಹಲದಿಂದ ವೀಕ್ಷಿಸಿದರು. ಅನಂತರ ಸ್ಥಳದಲ್ಲಿದ್ದ ಯುವಜನರು, ಹಿರಿಯರು, ಮಹಿಳೆಯರು, ವೃದ್ಧರು ಶಾಸಕ ಶಾಮನೂರು ಅವರಿಗೆ ಗೌರವದಿಂದ ನಮಸ್ಕರಿಸಿದರೆ, ಶಾಮನೂರು ಸಹ ಅದೇ ರೀತಿ ಪ್ರತಿಕ್ರಿಯಿಸುವ ಮೂಲಕ ಜನಮನ ಗೆದ್ದರು.

ಕೆಲ ದಶಕಗಳ ಬಳಿಕ ಶಾಮನೂರು ಶಿವಶಂಕರಪ್ಪ ಅವರು ರೈಲಿನಲ್ಲಿ ಪ್ರಯಾಣಿಸಿದ್ದು ಎಲ್ಲರಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಅದರಲ್ಲೂ ಹೊಸ ರೂಪದ, ಶರವೇಗದ ವಂದೇಭಾರತ್ ಎಕ್ಸಪ್ರೆಸ್ ರೈಲಿನಲ್ಲಿ ಪಯಣಿಸುವ ಮೂಲಕ ವಿಶೇಷತೆ ಮೆರೆದರು. ಕೆಲ ಹೊತ್ತು ತಾವು ವ್ಯಾಪಾರಕ್ಕೆ ಹೋಗುವಾಗ, ರಾಜಕೀಯಕ್ಕೆ ಕಾಲಿಡುವ ಮುಂಚೆ ರೈಲ್ವೆ ಪ್ರಯಾಣ ಮಾಡುತ್ತಿದ್ದ ಕ್ಷಣಗಳನ್ನು ನೆನೆದರು. ಹಳೆಯ ನೆನಪುಗಳ ಪುಟವನ್ನು ಮೆಲಕು ಹಾಕುತ್ತಾ ಸಂಜೆ ಹೊತ್ತಿಗೆ ಬೆಂಗಳೂರು ತಲುಪಿದರು.

ಯಾವುದೇ ಸದ್ದುಗದ್ದಲವಿಲ್ಲದೇ, ಆರಾಮವಾಗಿ ಬೆಂಗಳೂರಿಗೆ ಹೋಗುವ ನಿಟ್ಟಿನಲ್ಲಿ ವಂದೇಭಾರತ್ ರೈಲಿನಲ್ಲಿ ಪ್ರಯಾಣಿಸುವ ಆಸೆಯಿಂದ ಸಾಹೇಬರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

- - - -14ಕೆಡಿವಿಜಿ8, 9:

ಧಾರವಾಡದಿಂದ ಬಂದ ವಂದೇ ಭಾರತ್ ಎಕ್ಸಪ್ರೆಸ್ ರೈಲನ್ನು ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಹತ್ತಿ, ಬೆಂಗಳೂರಿಗೆ ಪ್ರಯಾಣಿಸಿದ ಅಗರ್ಭ ಶ್ರೀಮಂತ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಆರಾಮದಾಯಕ ರೈಲ್ವೇ ಪ್ರಯಾಣದ ಖುಷಿ ಅನುಭವಿಸಿದರು.