ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ ಬೀಳುತ್ತಿರುವ ಮಳೆಯಿಂದ ಕೈಗೆ ಬಂದ ಫಸಲು ಬಾಯಿಗೆ ಬರದಂತಾಗಿ ರಾಜ್ಯದ ರೈತರು ಕಷ್ಟದಲ್ಲಿದ್ದಾರೆ. ಕೃಷಿ ಸಚಿವರು ಸಮ್ಮೇಳನದ ಹೆಸರಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್‍ಯಕಾರಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಬೆಳೆ ನಷ್ಟದ ಆತಂಕಕ್ಕೆ ಒಳಗಾಗಿದ್ದಾರೆ. ಬೆಳೆದು ನಿಂತ ಹಾಗೂ ಕೊಯ್ಲಿಗೆ ಬಂದ ಭತ್ತ, ರಾಗಿ ಹಾಳಾಗಿದೆ. ರೈತರ ಕಷ್ಟಕ್ಕೆ ಸ್ಪಂದಿಸಬೇಕಿದ್ದ ಕೃಷಿ ಸಚಿವರು ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ತಕ್ಷಣ ತುರ್ತು ಪರಿಹಾರ ಘೋಷಣೆ ಮಾಡದೆ ನಾಪತ್ತೆಯಾಗಿದ್ದಾರೆ ಎಂದು ದೂರಿದ್ದಾರೆ.
ಕಟಾವು ಯಂತ್ರದ ಬಾಡಿಗೆ ಹೆಸರಿನಲ್ಲಿ ರೈತರ ಸುಲಿಗೆ ನಡೆಯುತ್ತಿದೆ. ಕಟಾವು ಯಂತ್ರಗಳಿಗೆ ಜಿಲ್ಲಾಡಳಿತ ನಿಗದಿ ಮಾಡಿರುವ ದರಕ್ಕಿಂತ ದುಪ್ಪಟ್ಟು ವಸೂಲಿ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ 6 ಸಾವಿರ ಮತ್ತು ರಾಜ್ಯದ ಬಿ.ಎಸ್.ಯಡಿಯೂರಪ್ಪ ಸರ್ಕಾರ 4 ಸಾವಿರ ನೀಡುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜ್ಯದ ಪಾಲಿನ 4 ಸಾವಿರ ಸ್ಥಗಿತಗೊಂಡಿದೆ. ಇದು ರೈತರ ಪರವಾಗಿರುವ ಸರ್ಕಾರವೇ ಎಂದು ಜರಿದಿದ್ದಾರೆ.ರೈತರ ಮಕ್ಕಳ ಒಳಿತಿಗಾಗಿ ಬೊಮ್ಮಾಯಿ ಸರ್ಕಾರ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡುತ್ತಿದ್ದರು. 8ನೇ ತರಗತಿಯಿಂದ ಪಿಎಚ್.ಡಿವರೆಗೆ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿತ್ತು. ಆದರೆ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವನ್ನೂ ನಿಲ್ಲಿಸಿ ರೈತರ ಮಕ್ಕಳ ಭವಿಷ್ಯಕ್ಕೆ ತಣ್ಣೀರು ಎರಚಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ 1,219 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗಾಗಿ ಯಾವ ಯೋಜನೆ ನೀಡಿಲ್ಲ. ಗ್ಯಾರಂಟಿ ಗುಂಗಿನಲ್ಲಿರುವ ಸರ್ಕಾರ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ ಕೊಟ್ಟಿದೆ. ಇಷ್ಟೆಲ್ಲಾ ಅವಾಂತರಗಳ ನಡುವೆ ಕಾಂಗ್ರೆಸ್ ಅಲ್ಪಸಂಖ್ಯಾತ ಸಚಿವರ ಮೂಲಕ ವಕ್ಫ್ ಅದಾಲತ್ ಸೂಚಿಸಿ ಸಿಕ್ಕ ರೈತರ ಜಮೀನುಗಳನ್ನು ಕಸಿದುಕೊಳ್ಳುತ್ತಿದೆ. ರೈತರ ಗಾಯದ ಮೇಲೆ ಮತ್ತೆ ಬರೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಹ ರೈತರ ಬಗ್ಗೆ ಕಾಳಜಿ ವಹಿಸದ ಕೃಷಿ ಸಚಿವರು ಜನಕಲ್ಯಾಣ ಸಮಾವೇಶದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಕೃಷಿ ಸಚಿವರಿಗೆ ನಿಜವಾದಲೂ ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ತಕ್ಷಣವೇ ಸಮಸ್ಯೆ ಬಗೆಹರಿಸಲಿ ಎಂದು ಆಗ್ರಹಿಸಿದ್ದಾರೆ.