ಸಾರಾಂಶ
ಸಾಗರ: ಡಾ.ಮನಮೋಹನ್ ಸಿಂಗ್ ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದು, ಭಾರತ ಸದೃಢ ಆರ್ಥಿಕತೆಯನ್ನು ಸಾಧಿಸಲು ಡಾ.ಮನಮೋಹನ್ ಸಿಂಗ್ ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನೀಡಿದ ಕೊಡುಗೆ ಸ್ಮರಣಾರ್ಹವಾದದ್ದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಪಟ್ಟಣದ ಗಾಂಧಿಮಂದಿರದಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.ದೇಶದ ಆರ್ಥಿಕ ಸಲಹೆಗಾರರಾಗಿ, ರಿಸರ್ವ್ ಬ್ಯಾಂಕ್ ಗರ್ವನರ್ ಆಗಿ, ಯೋಜನಾ ಪ್ರಾಧಿಕಾರದ ಮುಖ್ಯಸ್ಥರಾಗಿ, ಹಣಕಾಸು ಸಚಿವರಾಗಿ, ಪ್ರಧಾನಮಂತ್ರಿಗಳಾಗಿ ಡಾ.ಮನಮೋಹನ್ ಸಿಂಗ್ ಅವರು ದೇಶಕ್ಕೆ ನೀಡಿದ ಕೊಡುಗೆ ಗಮನಾರ್ಹವಾದದ್ದು ಎಂದರು.ಹಿರಿಯ ಪತ್ರಕರ್ತ ಕೆ.ಎನ್.ವೆಂಕಟಗಿರಿ ಮಾತನಾಡಿ, ಡಾ.ಮನಮೋಹನ್ ಸಿಂಗ್ ಸದಾಕಾಲ ನೆನಪಿನಲ್ಲಿ ಉಳಿಯುವ ರಾಜಕಾರಣಿ. ಅವರ ಕೊಡುಗೆಯನ್ನು ಪ್ರತಿ ಭಾರತೀಯನೂ ಸ್ಮರಿಸಬೇಕು. ೧೯೯೦ರಲ್ಲಿ ವಿದೇಶಿ ವಿನಿಮಯ ದರ ಪಾತಾಳಕ್ಕೆ ಕುಸಿದಿದ್ದಾಗ ದೇಶವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ಸಂದರ್ಭದಲ್ಲಿ ಉದಾರೀಕರಣದ ನಿರ್ಧಾರವನ್ನು ಪ್ರಬಲ ವಿರೋಧದ ನಡುವೆಯೂ ತೆಗೆದುಕೊಂಡು ಮುಕ್ತ ಮಾರುಕಟ್ಟೆ ಆಯ್ಕೆ ಸ್ವಾತಂತ್ರ್ಯ, ಐಟಿಬಿಟಿ, ಶಿಕ್ಷಣ ಕ್ಷೇತ್ರಕ್ಕೆ ಅಗಾಧ ಕೊಡುಗೆ ನೀಡಿದ್ದಾರೆ. ಇದರ ಜೊತೆಗೆ ಆಹಾರ ಸುರಕ್ಷತಾ ಕಾಯ್ದೆ, ಉದ್ಯೋಗಖಾತ್ರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ, ಅರಣ್ಯಹಕ್ಕು ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಸುರೇಶಬಾಬು, ಎಲ್.ಚಂದ್ರಪ್ಪ, ಮಹಾಬಲ ಕೌತಿ, ಉಷಾ, ಲಲಿತಮ್ಮ, ಜ್ಯೋತಿ ಕೋವಿ, ಗಣಪತಿ ಮಂಡಗಳಲೆ, ಜಾಕೀರ್, ರವಿ ಜಂಬೂರುಮನೆ ಇನ್ನಿತರರು ಹಾಜರಿದ್ದರು.