ಡಾ.ಸರ್ಜಿ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಿ: ಎಸ್.ಕುಮಾರ್ ಬಂಗಾರಪ್ಪ

| Published : May 15 2024, 01:35 AM IST

ಡಾ.ಸರ್ಜಿ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಿ: ಎಸ್.ಕುಮಾರ್ ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷದ ವತಿಯಿಂದ ಪದವೀಧರರ ಗುರುತಿಸಿ ಪ್ರತಿ ಬೂತ್‌ನಲ್ಲಿಯೂ ಮತದಾರರ ಪಟ್ಟಿಗೆ ನೋಂದಣಿ ಮಾಡಿಸಲಾಗಿದೆ. ಕ್ಷೇತ್ರದಲ್ಲಿ ಸುಮಾರು ೨,೫೦೦ ಮತದಾರರಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರವು ಸುಮಾರು ೪೩ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದ್ದು, ಪದವೀಧರರ ಕ್ಷೇತ್ರದ ಚುನಾವಣೆಯು ಸಾರ್ವತ್ರಿಕ ಚುನಾವಣೆಗಿಂತ ಭಿನ್ನ.

ಕನ್ನಡಪ್ರಭ ವಾರ್ತೆ ಸೊರಬ

ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಿವಮೊಗ್ಗದ ಹೆಸರಾಂತ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿಯವರ ಘೋಷಿಸಿದ್ದು, ಚುನಾವಣೆಯ ಯಶಸ್ವಿಗೆ ಒಗ್ಗಟ್ಟಿನಿಂದ ಶ್ರಮಿಸಲಾಗುವುದು ಎಂದು ಮಾಜಿ ಶಾಸಕ ಎಸ್.ಕುಮಾರ್ ಬಂಗಾರಪ್ಪ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿ, ಪಕ್ಷದ ವತಿಯಿಂದ ಪದವೀಧರರ ಗುರುತಿಸಿ ಪ್ರತಿ ಬೂತ್‌ನಲ್ಲಿಯೂ ಮತದಾರರ ಪಟ್ಟಿಗೆ ನೋಂದಣಿ ಮಾಡಿಸಲಾಗಿದೆ. ಕ್ಷೇತ್ರದಲ್ಲಿ ಸುಮಾರು ೨,೫೦೦ ಮತದಾರರಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರವು ಸುಮಾರು ೪೩ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದ್ದು, ಪದವೀಧರರ ಕ್ಷೇತ್ರದ ಚುನಾವಣೆಯು ಸಾರ್ವತ್ರಿಕ ಚುನಾವಣೆಗಿಂತ ಭಿನ್ನ ಎಂದರು.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯು ಜಿಲ್ಲೆಯಲ್ಲಿ ನಡೆದ ಅಭಿವೃದ್ಧಿ ಪರವಾದ ಚುನಾವಣೆಯಾಗಿದೆ. ಕೆಲವರು ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಪಕ್ಷದ ಜೊತೆಗೆ ಇದ್ದಂತೆ ವರ್ತಿಸಿ, ಒಳಹೊಡೆತ ನೀಡಲು ಯತ್ನಿಸಿದರು. ಆದರೆ, ಇದ್ಯಾವುದನ್ನೂ ಲೆಕ್ಕಿಸದೇ ಮತದಾರರು ಬಿಜೆಪಿಯ ಕೈ ಹಿಡಿದಿದ್ದಾರೆ. ಬಿ.ವೈ. ರಾಘವೇಂದ್ರ ಅವರು ಗೆಲುವು ಸಾಧಿಸುವುದು ನಿಶ್ಚಿತ. ರಾಜ್ಯದಲ್ಲಿ ಸುಮಾರು ೨೫ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಲವು ಸಮುದಾಯಗಳಿಗೆ ದ್ರೋಹ:

ಕ್ಷೇತ್ರದಲ್ಲಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ತರಲಾಗಿತ್ತು. ಪಟ್ಟಣದಲ್ಲಿ ವಿಸ್ತಾರ ಸೌಧ ನಿರ್ಮಿಸುವ ಉದ್ದೇಶ ಹೊಂದಲಾಗಿತ್ತು. ಹಾಲಿ ಜನಪ್ರತಿನಿಧಿಗಳು ಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇವುಗಳ ಮುಂದುವರಿಸುವ ಜವಾಬ್ದಾರಿ ಇದೆ. ಕ್ಷೇತ್ರದ ಶಾಸಕರು ಎಲ್ಲಾ ಸಮುದಾಯವರಿಗೂ ಅನ್ಯಾಯ ಎಸಗುತ್ತಿದ್ದಾರೆ. ಈ ಹಿಂದೆ ಎಲ್ಲಾ ಸಮುದಾಯವರು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಸಲು ಸಮುದಾಯ ಭವನಗಳ ನಿರ್ಮಿಸುವ ಗುರಿ ಹೊಂದಲಾಗಿತ್ತು. ಜೊತೆಗೆ ನಾರಾಯಣಗುರು ವಸತಿ ಶಾಲೆಗೆ ೨೦ ಎಕರೆ ಜಾಗ ಮೀಸಲಿಡಲಾಗಿತ್ತು. ಆದರೆ, ಅದನ್ನು ಕೇವಲ ೫ ಎಕರೆಗೆ ಇಳಿಸಲಾಗಿದೆ. ಇದು ಆ ಸಮುದಾಯಗಳಿಗೆ ಮಾಡಿದ ದ್ರೋಹ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಉಪಾಧ್ಯಕ್ಷ ದೇವೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಪುರಸಭೆ ಸದಸ್ಯ ಎಂ.ಡಿ. ಉಮೇಶ್, ಪ್ರಮುಖರಾದ ಗುರುಕುಮಾರ ಪಾಟೀಲ್, ಬಸವರಾಜ ಓಟೂರು, ಜಾನಕಪ್ಪ ಒಡೆಯರ್ ಯಲಸಿ, ಕೃಷ್ಣಮೂರ್ತಿ ಕೊಡಕಣಿ ಸೇರಿ ಇತರರಿದ್ದರು. ಸರ್ಕಾರ ರೈತರ ನೆರವಿಗೆ ನಿಲ್ಲಲಿ

ರಾಜ್ಯ ಕಾಂಗ್ರೆಸ್ ಸರ್ಕಾರ ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕ್ಷೇತ್ರವೂ ಸೇರಿದಂತೆ ರಾಜ್ಯದಲ್ಲಿ ಬರದಿಂದ ರೈತ ಸಮೂಹ ಕಂಗಾಲಾಗಿದೆ. ಪರಿಸ್ಥಿತಿಯೂ ಕೈ ಮೀರಿದೆ. ಕೊಳವೆಬಾವಿಗಳಲ್ಲೂ ನೀರಿಲ್ಲ. ರೈತರು ಬೆಳೆದ ಬೆಳೆಗಳ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ತಲುಪಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ನೆರವಿಗೆ ನಿಲ್ಲಬೇಕು. ಬರ ನಿರ್ವಹಣೆಯ ಸಮರ್ಥವಾಗಿ ಎದುರಿಸಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್‌ನ ಆಡಳಿತ ಲೋಪದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು.

ಎಸ್.ಕುಮಾರ್ ಬಂಗಾರಪ್ಪ, ಮಾಜಿ ಶಾಸಕ