ನಿಮ್ಮ ಮಕ್ಕಳನ್ನು ಸಂಪೂರ್ಣವಾಗಿ ನಂಬಿ, ಅವರ ವಯಸ್ಸನಲ್ಲ

| Published : Jul 28 2024, 02:00 AM IST

ಸಾರಾಂಶ

ಇಂದಿನ ಕಲುಷಿತ ಸಮಾಜ ಮತ್ತು ಸಾಮಾಜಿಕ ಜಾಲತಾಣಗಳು ಮಕ್ಕಳನ್ನು ಮಾನಸಿಕವಾಗಿ ತಪ್ಪು ದಾರಿಗೆ ಸೆಳೆಯುತ್ತವೆ.

ಕನ್ನಡಪ್ರಭ ವಾರ್ತೆ ಮೈಸೂರು

ಎಲ್.ಕೆ.ಜಿ ಯಿಂದ ಪಿಯುಸಿವರೆಗೆ ಪ್ರತಿ ಹಂತದಲ್ಲೂ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುವ ಪೋಷಕರು ಪದವಿಗೆ ಬಂದೊಡನೆ ತಮ್ಮ ಮಕ್ಕಳನ್ನು ಸ್ವತಂತ್ರ್ಯವಾಗಿ ಬಿಡಬಾರದು. ನೀವು ನಿಮ್ಮ ಮಕ್ಕಳನ್ನು ಸಂಪೂರ್ಣವಾಗಿ ನಂಬಿ, ಆದರೆ, ಅವರ ವಯಸ್ಸನಲ್ಲ ಎಂದು ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಆಡಳಿತಾಧಿಕಾರಿ ಹಾಗೂ ಸಾಹಿತಿ ಡಾ.ಟಿ.ಸಿ. ಪೂರ್ಣಿಮಾ ತಿಳಿಸಿದರು.

ನಗರದ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಪ್ರಥಮ ದರ್ಜೆ ಕಾಲೇಜು ವತಿಯಿಂದ ವಿವೇಕಾನಂದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 2024-25ನೇ ಸಾಲಿನ ಪೋಷಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂದೆ- ತಾಯಿ ಮಕ್ಕಳನ್ನು ಕಾಲೇಜಿಗೆ ಸೇರಿಸಿದರೆ, ತಮ್ಮ ಜವಾಬ್ದಾರಿ ಕಡಿಮೆಯಾಯಿತು ಎಂದು ಭಾವಿಸುವಂತಿಲ್ಲ. ಇಂದಿನ ಕಲುಷಿತ ಸಮಾಜ ಮತ್ತು ಸಾಮಾಜಿಕ ಜಾಲತಾಣಗಳು ಮಕ್ಕಳನ್ನು ಮಾನಸಿಕವಾಗಿ ತಪ್ಪು ದಾರಿಗೆ ಸೆಳೆಯುತ್ತವೆ. ತಂದೆ- ತಾಯಿಗಳಾದ ನಾವು ಮಕ್ಕಳು ಎಷ್ಟೇ ದೊಡ್ಡವರಾದರೂ ಸದಾ ಅವರ ಕಣ್ಣಾಗಿರಬೇಕು ಎಂದರು.

ಪೋಷಕರಿಗೆ ಯಾವ ವೈಭವವಿದ್ದರೇನು? ಮಕ್ಕಳ ಬುದ್ಧಿ ಅವರಿಗೆ ವೈಭವವಾಗಿರಬೇಕು. ಇಲ್ಲಿ ನೆರೆದಿರುವ ನೀವೆಲ್ಲಾ ವಿದ್ಯಾರ್ಥಿಗಳ ಪೋಷಕರಾದರೆ, ಪ್ರತಿ ಕಾಲೇಜಿನ ಅಧ್ಯಾಪಕರು ಮಹಾಪೋಷಕರಾಗಿರುತ್ತಾರೆ. ಶಿಕ್ಷಕರು ಕಾಲೇಜಿನ ಒಳಗೆ ಮಾತ್ರ ಮಕ್ಕಳನ್ನು ಗಮನಿಸಿಕೊಳ್ಳಲು ಸಾಧ್ಯ. ಆದರೆ, ತಂದೆ- ತಾಯಿಗಳು ತಮ್ಮ ಮಕ್ಕಳ ಪ್ರತಿ ಚಲನ ವಲನಗಳನ್ನು ಅರಿತಿರುತ್ತಾರೆ. ಹೀಗಾಗಿ, ತಮ್ಮ ಮಕ್ಕಳನ್ನು ಈ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಸಂಪೂರ್ಣ ಜವಾಬ್ದಾರಿ ಪೋಷಕರದೇ ಆಗಿದೆ. ಪೋಷಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಬದ್ಧತೆಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಅವರು ಹೇಳಿದರು.

ಪ್ರತಿಯೊಬ್ಬ ತಂದೆ ತಾಯಿಗೂ ತಮ್ಮ ಮಕ್ಕಳು ತಮ್ಮ ಹಾಗೇ ಜೀವನದಲ್ಲಿ ಕಷ್ಟಪಡದೇ ಸುಖವಾಗಿರಬೇಕು ಎಂಬ ಆಶಯವಿರುತ್ತದೆ. ಆದರೆ ವಿದ್ಯಾರ್ಥಿ ಜೀವನವೇ ಒಂದು ತಪಸ್ಸಿನಂತೆ, ಕಷ್ಟಪಟ್ಟು ಓದಿದಾಗ ಮಾತ್ರ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಯ ಬೆಳವಣಿಗೆಯೊಟ್ಟಿಗೆ ಕಾಲೇಜು, ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಪೋಷಕರಾದ ನಾವು ಸದಾ ಜೊತೆಗಿರುವ ಕೆಲಸ ಮಾಡಬೇಕಾಗುತ್ತದೆ. ಮಕ್ಕಳನ್ನು ಮುದ್ದಾಗಿ ಸಾಕುವುದಷ್ಟೇ ಅಲ್ಲದೆ ತಪ್ಪು ಮಾಡಿದಾಗ ದಂಡಿಸಿ ಸರಿ ದಾರಿಗೆ ತರುವ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದು ಅವರು ತಿಳಿಸಿದರು.

ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಟಿ. ವಿಜಯಲಕ್ಷ್ಮಿ ಮುರಳೀಧರ್ ಮಾತನಾಡಿ, ನಮ್ಮ ಸಂಸ್ಥೆ ಸ್ವಾಯತ್ತತೆ ಪಡೆದು ನ್ಯಾಕ್ ನಿಂದ ಎ ಮಾನ್ಯತೆ ಪಡೆದಿದೆ. ಕಾಲೇಜು ಶಿಕ್ಷಣದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಮೌಲ್ಯಾಧಾರಿತ ಹಾಗೂ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಿದೆ. ಪೋಷಕರು ಮಕ್ಕಳ ಮನಸ್ಸನ್ನು ಅರಿತು ಸ್ನೇಹಿತರಂತೆ ವರ್ತಿಸಿ, ಮಕ್ಕಳು ಕ್ರಿಯಾಶೀಲರಾಗುವತ್ತ ಪ್ರೋತ್ಸಾಹ ನೀಡಬೇಕು ಎಂದರು.

ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಯತ್ತ ಕಾಲೇಜು ಶೈಕ್ಷಣಿಕ ಸ್ವಾತಂತ್ರ್ಯವನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಬೇಕಾಗುವ ಕೌಶಲ್ಯಾಧಾರಿತ ಮತ್ತು ಔದ್ಯೋಗಿಕ ಕ್ಷೇತ್ರ ನಿರೀಕ್ಷಿಸುವಂತಹ ಪಠ್ಯಕ್ರಮ ಹೊಂದಿರುತ್ತದೆ. ಪೋಷಕರ ಪಾತ್ರ ತಮ್ಮ ಮಕ್ಕಳಿಗೆ ವಿದ್ಯಾಸಂಸ್ಥೆಯೊಂದರಲ್ಲಿ ಪ್ರವೇಶಾತಿ ಮಾಡುವುದರೊಂದಿಗೆ ಮುಗಿಯುವುದಿಲ್ಲ. ಅವರು ಕಾಲೇಜಿನೊಂದಿಗೆ ನಿರಂತರ ಸಂಪರ್ಕ ಹೊಂದುವುದು ಅವಶ್ಯಕ ಎಂದು ಹೇಳಿದರು.

ಪೋಷಕರ ಕಾರ್ಯಕಾರಿ ಮಂಡಳಿಯ 2024- 25ನೇ ಸಾಲಿಗೆ ಅಧ್ಯಕ್ಷರಾಗಿ ಕೆ.ವಿ. ಸೌಮ್ಯ. ಕಾರ್ಯದರ್ಶಿಯಾಗಿ ಮರಿಗೌಡ, ಸದಸ್ಯರಾಗಿ ಎಂ. ಪುಟ್ಟಸ್ವಾಮಿ, ಡಿ.ಬಿ. ವೀಣಾ, ನಿರೂಪಮ, ಗುರುಸ್ವಾಮಿ, ಚನ್ನಮಲ್ಲ ಬೂವಿ, ಜೆ. ಸವಿತಾ, ಸಿ.ಎನ್. ಹೇಮಲತಾ, ಸುಮಾ ದಯಾಕರ್ ಆಯ್ಕೆಗೊಂಡರು.

ಪೋಷಕರ ಸಂಘದ ಅಧ್ಯಕ್ಷ ಸಿ.ಕೆ. ರಂಗರಾಮು ಅಧ್ಯಕ್ಷತೆ ವಹಿಸಿದ್ದರು. ಪೋಷಕರ ಸಂಘದ ಸಂಚಾಲಕಿ ಡಾ. ವಿನೋದಮ್ಮ ಸ್ವಾಗತಿಸಿದರು. ಡಾ. ಪೂರ್ಣಿಮಾ ವಂದಿಸಿದರು. ಡಾ.ಎಚ್.ಆರ್. ತಿಮ್ಮೇಗೌಡ ನಿರೂಪಿಸಿದರು.