ಶಿವಮೊಗ್ಗ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅವರ ಹೆಸರಿನಲ್ಲಿ ಆರಂಭವಾಗುವ ಅಧ್ಯಯನ ಪೀಠವನ್ನು ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲೇ ಸ್ಥಾಪಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2026-27ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಘೋಷಣೆ ಮಾಡಿದ್ದಾರೆ. ಅಲ್ಲದೆ ಈ ಪೀಠವನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸುವುದಾಗಿ ಹೇಳಿದ್ದಾರೆ. ಅದು ಸ್ವಾಗತಾರ್ಹ. ಆದರೆ ಈ ಅಧ್ಯಯನ ಪೀಠವನ್ನು ಅವರ ಜನ್ಮಭೂಮಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಂಗಾ ಮಹಾವಿದ್ಯಾಲಯದಲ್ಲಿಯೇ ಸ್ಥಾಪಿಸಬೇಕೆಂದು ನಮ್ಮ ಟ್ರಸ್ಟ್ ತಮ್ಮನ್ನು ಒತ್ತಾಯಿಸುತ್ತದೆ ಎಂದು ಪುನರುಚ್ಛರಿಸಿದರು.

ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಸಾಹಿತಿ ಹಾಗೂ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಪುತ್ರ ಡಾ. ಯು. ಆರ್. ಅನಂತಮೂರ್ತಿಯವರ ಅಧ್ಯಯನ ಪೀಠವನ್ನು ಸ್ಥಾಪಿಸುವ ಮಂಜೂರಾತಿ ಪ್ರಕಟಿಸಿದ್ದರು. ಶಾಸಕ ಅರಗ ಜ್ಞಾನೇಂದ್ರ ನಿಯೋಗ ಡಾ. ಯು. ಆರ್. ಅನಂತಮೂರ್ತಿಯವರ ಅಧ್ಯಯನ ಪೀಠವನ್ನ ತೀರ್ಥಹಳ್ಳಿಯ ಪ್ರತಿಷ್ಠಿತ ತುಂಗಾ ಕಾಲೇಜಿನಲ್ಲಿಯೇ ಸ್ಥಾಪಿಸಬೇಕೆಂದು ಸಹ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿತ್ತು ಎಂದರು.

ಆದ್ದರಿಂದ ಅಧ್ಯಯನ ಪೀಠವನ್ನು ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲೇ ಸ್ಥಾಪಿಸಬೇಕು. ಒಂದು ಪಕ್ಷ ಕುವೆಂಪು ವಿವಿಯಲ್ಲಿ ಸ್ಥಾಪಿಸಲು ಹೊರಟರೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ಎಚ್.ಎಂ. ಸಂಗಯ್ಯ, ಆದಿಲ್ ಖಾನ್, ಶಂಕ್ರಾನಾಯ್ಕ್, ಶಿವಣ್ಣ, ಜಗದೀಶ್ ಇತರರು ಇದ್ದರು.