ಡಾ. ಉಮೇಶ್ ಜಾಧವ್ ತುಳಜಾ ಭವಾನಿ ದರ್ಶನ

| Published : Jun 04 2024, 12:32 AM IST

ಸಾರಾಂಶ

ತುಳಜಾಪುರ ದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜಾಧವ್ ಅವರು ಜನರ ತೀರ್ಪು ಬಿಜೆಪಿ ಪರವಾಗಿ ಬರಲಿ ಎಂದು ಬೇಡಿಕೊಂಡರು

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಮಂಗಳವಾರ ಘೋಷಣೆಯಾಗಲಿ ರುವುದರಿಂದ ಅದರ ಪೂರ್ವಭಾವಿಯಾಗಿ ಸಂಸದ ಉಮೇಶ್ ಜಾಧವ್ ಸೋಮವಾರ ತುಳಜಾಪುರ ಭವಾನಿ ದೇವಿಯ ದರ್ಶನ ಪಡೆದರು.

ತುಳಜಾಪುರ ದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜಾಧವ್ ಅವರು ಜನರ ತೀರ್ಪು ಬಿಜೆಪಿ ಪರವಾಗಿ ಬರಲಿ ಎಂದು ಬೇಡಿಕೊಂಡರು.ಹಾಗೂ ಕನ್ನಡ ನಾಡಿನ ಜನತೆಯ ಶ್ರೇಯಸ್ಸಿಗಾಗಿ ದೇವಿ ಭವಾನಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ಮುಖ್ಯ ಅರ್ಚಕರು ಸಂಸದ ಜಾಧವ್ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ಅವರಿಗಾಗಿ ಪೂಜೆ ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿ ಹರಸಿದರು.

ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಅಧಿಕಾರ ಪಡೆಯುವುದು ಚುನಾವಣಾ ನಂತರದ ಸಮೀಕ್ಷೆಯಿಂದ ಬಹಿರಂಗಗೊಂಡಿದ್ದು ಹ್ಯಾಟ್ರಿಕ್ ಗೆಲುವಿನೊಂದಿಗೆ ವಿಕಸಿತ ಭಾರತ ನಿರ್ಮಾಣ ಮಾಡುವ ಮೋದಿಯವರ ಸಂಕಲ್ಪ ಈಡೇರಲಿ. ಭಾರತವು ವಿಶ್ವದಲ್ಲಿ ಉಜ್ವಲ ಭವಿಷ್ಯವನ್ನು ಹೊಂದಿ ವಿಶ್ವನಾಯಕ ಪಟ್ಟಕ್ಕೆ ಏರಲಿ ಎಂದು ಪ್ರಾರ್ಥಿಸಿರುವುದಾಗಿ ಜಾಧವ್ ಸುದ್ದಿಗಾರರಿಗೆ ಹೇಳಿದರು.

ಚುನಾವಣಾ ನಂತರದ ಸಮೀಕ್ಷೆ ಪ್ರತಿಪಕ್ಷಗಳು ಕಕ್ಕಾಬಿಕ್ಕಿ:

ಇಂಡಿ ಒಕ್ಕೂಟ ಸೇರಿದಂತೆ ಪ್ರತಿಪಕ್ಷಗಳು ಚುನಾವಣಾ ನಂತರದ ಸಮೀಕ್ಷೆಯಿಂದ ಕಕ್ಕಾಬಿಕ್ಕಿಯಾಗಿದೆ ಮೋದಿಯವರ ಜನಪ್ರಿಯತೆಯನ್ನು ಎದುರಿಸಲಾಗದೆ ಚುನಾವಣಾ ಆಯೋಗ ಸೇರಿದಂತೆ ಪಾರದರ್ಶಕವಾಗಿ ಸುಮಾರು 67 ಕೋಟಿ ಜನರು ಮತ ಚಲಾಯಿಸಿದ ಚುನಾವಣಾ ಪ್ರಕ್ರಿಯೆಯನ್ನು ಅಣಕವಾಡುತ್ತಿದ್ದಾರೆ ಎಂದು ಟೀಕಿಸಿದರು. ಪ್ರತಿಪಕ್ಷದವರ ಈ ನಡೆ ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನ ವಿರೋಧಿಯಾಗಿದೆ. ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆಯವರು ಚುನಾವಣೋತ್ತರ ಸಮೀಕ್ಷೆಯನ್ನು ಇದು ಬಿಜೆಪಿ ಮತ್ತು ಆರ್ ಎಸ್ ಎಸ್ ಪ್ರೇರಿತ ಎಂದು ಹೇಳಿ ತನ್ನ ರಾಜಕೀಯ ಬಾಲಿಶತನವನ್ನು ಪ್ರದರ್ಶಿಸಿದ್ದಾರೆ. ಚುನಾವಣೆಯಲ್ಲಿ ಸೋಲು ಖಚಿತವಾದ ಹಿನ್ನಲೆಯಲ್ಲಿ ಈ ರೀತಿಯ ಅಪಪ್ರಚಾರ ಹಾಗೂ ಇವಿಎಂ ಹಾಗು ಚುನಾವಣಾ ಆಯೋಗದ ಮೇಲೆ ಆರೋಪಹೊರಿಸುವುದು ಕಾಂಗ್ರೆಸ್ಸಿನ ಚಾಳಿಯಾಗಿದೆ. ದೇಶದ ಜನತೆ ಮೋದಿಯವರ ಕೈಹಿಡಿದಿದ್ದು ಅದ್ಭುತ ಜಯಭೇರಿ ಯೊಂದಿಗೆ ಮತ್ತೊಮ್ಮೆ ಕೇಂದ್ರದಲ್ಲಿ ಎನ್‌ಡಿಎ ಸರಕಾರ ಆಡಳಿತ ನಡೆಸಲಿದೆ. ಭಾರತದ ಭವಿಷ್ಯ ಉಜ್ವಲವಾಗಲಿದ್ದು ವಿಶ್ವ ಮಟ್ಟದಲ್ಲಿ ಭಾರತದ ಆರ್ಥಿಕತೆಯು ಮೂರನೇ ಸ್ಥಾನಕ್ಕೆ ಏರುವ ದಿನಗಳು ದೂರವಿಲ್ಲ. ಈಗಾಗಲೇ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಮುಂದಿನ ನೂರು ದಿನಗಳ ಅಭಿವೃದ್ಧಿಯ ರೋಡ್ ಮ್ಯಾಪ್ ಸಿದ್ಧಪಡಿಸಿದ್ದು ಕಾರ್ಯ ಅನುಷ್ಠಾನಗೊಳಿಸಲು ಮುಂದಾಲೋಚನೆಗೆ ಸಿದ್ಧರಾಗಿದ್ದಾರೆ ಎಂದು ಜಾಧವ್ ಹೇಳಿದರು.

ಕಲ್ಬುರ್ಗಿಯ ಲೋಕಸಭಾ ಕ್ಷೇತ್ರದ ಮಹಾಜನತೆ ಈ ಚುನಾವಣೆಯಲ್ಲಿ ಅಭಿವೃದ್ಧಿ ಪರವಾಗಿ ಮತ ಚಲಾಯಿಸಿ ಮೋದಿಯವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತ ಪಡಿಸಿದ ಸೂಚನೆಯನ್ನು ಎಲ್ಲ ಮಾಧ್ಯಮಗಳು ವ್ಯಕ್ತಪಡಿಸಿವೆ.ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಮೇಲೆ ನನಗೆ ಅತೀವ ನಂಬಿಕೆ ಇದ್ದು ಮಾಧ್ಯಮಗಳ ವರದಿಯನ್ನು ಟೀಕಿಸಿ ಪ್ರಿಯಾಂಕ ಖರ್ಗೆಯವರು ನೀಡಿದ ಹೇಳಿಕೆ ಹಾಸ್ಯಾಸ್ಪದ. ಕಾಂಗ್ರೆಸ್ ಪಕ್ಷದ ಜೈರಾಮ್ ರಮೇಶ್ ಚುನಾವಣಾ ಆಯೋಗದ ಮೇಲೆ ಹೊರಿಸಿದ ಆರೋಪಕ್ಕೆ ಮುಖ್ಯ ಚುನಾವಣಾ ಆಯುಕ್ತರು ಪತ್ರಿಕಾಗೋಷ್ಠಿ ನಡೆಸಿ ತಕ್ಕ ಉತ್ತರ ನೀಡಿದ್ದಾರೆ. ಸಾಂವಿಧಾನಿಕ ಸಂಸ್ಥೆಯನ್ನು ಬೇಕಾಬಿಟ್ಟಿ ಪ್ರಶ್ನಿಸುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕವಾಡಿದ್ದಾರೆ ಎಂದು ಜಾಧವ್ ಖಾರವಾಗಿ ಟೀಕಿಸಿದ್ದಾರೆ. ಕಲ್ಬುರ್ಗಿಯ ಜನತೆ ಫಲಿತಾಂಶವನ್ನು ಎದುರು ನೋಡುತ್ತಿದ್ದು ಶಾಂತಿ ಮತ್ತು ಸೌಹಾರ್ದದಿಂದ ಇರಬೇಕು ಎಂದು ಜಾಧವ್ ಕರೆ ನೀಡಿದರು.

ತುಳಜಾಪುರ ಕ್ಷೇತ್ರ ದರ್ಶನ ಸಂದರ್ಭದಲ್ಲಿ ವಿನೋದ್ ಚೌಹಾನ್, ರೋಷನ್ ಚೌಹಾಣ್, ಮಂಜುನಾಥ್, ಹನುಮಂತ ಪೂಜಾರಿ, ದೇವರಾಜ್ ಮತ್ತಿತರರು ಜೊತೆಗಿದ್ದರು.