ಸಿರಿ ಕೇಂದ್ರ ಕಚೇರಿಗೆ ಡಾ. ಹೆಗ್ಗಡೆ ದಂಪತಿ ಭೇಟಿ

| Published : Sep 27 2025, 12:03 AM IST

ಸಾರಾಂಶ

ಸಿರಿ ಆಡಳಿತ ಮಂಡಳಿಯ ಅಧ್ಯಕ್ಷ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಆಡಳಿತ ಮಂಡಳಿಯ ನಿರ್ದೇಶಕಿ ಹೇಮಾವತಿ ವೀ. ಹೆಗ್ಗಡೆ ಗುರುವಾರ, ಬೆಳ್ತಂಗಡಿಯ ಸಿರಿ ಕೇಂದ್ರ ಕಚೇರಿಗೆ ಭೇಟಿ ನೀಡಿದರು.

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿರಿ ಆಡಳಿತ ಮಂಡಳಿಯ ಅಧ್ಯಕ್ಷ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಆಡಳಿತ ಮಂಡಳಿಯ ನಿರ್ದೇಶಕಿ ಹೇಮಾವತಿ ವೀ. ಹೆಗ್ಗಡೆ ಗುರುವಾರ, ಬೆಳ್ತಂಗಡಿಯ ಸಿರಿ ಕೇಂದ್ರ ಕಚೇರಿಗೆ ಭೇಟಿ ನೀಡಿದರು.

ಸಿರಿ ಸಂಸ್ಥೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಹೆಗ್ಗಡೆ ದಂಪತಿ, ಇಲ್ಲಿ ನಡೆಯುತ್ತಿರುವ ವಿವಿಧ ಉತ್ಪನ್ನಗಳ ಉತ್ಪಾದನಾ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.ನವರಾತ್ರಿ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನವರಾತ್ರಿಯು ಶಕ್ತಿ, ಬುದ್ಧಿವಂತಿಕೆ, ಧೈರ್ಯ, ಭಕ್ತಿ ಮತ್ತು ರಕ್ಷಣೆಯಂತಹ ವಿಭಿನ್ನ ಗುಣಗಳ ಸ್ವರೂಪವಾಗಿರುವ ನವದುರ್ಗೆಯರ ಪೂಜೆಗೆ ಸಮರ್ಪಿತವಾಗಿದೆ. ಸಿರಿಯಲ್ಲಿ ದುಡಿಯುವ ಮಹಿಳೆಯರು ಕೂಡಾ ಸಿರಿಯ ಶಕ್ತಿ ಸ್ವರೂಪಿಣಿಯರಾಗಿದ್ದು, ಎಲ್ಲರೂ ಶ್ರದ್ಧೆ, ಪ್ರಾಮಾಣಿಕತೆಯಿಂದ ದುಡಿದು ಸಿರಿ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿ, ಮುನ್ನಡೆಸುವ ಮೂಲಕ ಇನ್ನೂ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ದೊರೆತು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕರಾದ ಕೆ.ಎನ್ ಜನಾರ್ದನ ಅವರು, ಹೆಗ್ಗಡೆ ದಂಪತಿಯನ್ನು ಆತ್ಮೀಯವಾಗಿ ಸ್ವಾಗತಿಸಿ, ಗೌರವ ಸಲ್ಲಿಸಿದರು.

ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ರಾಜೇಶ್ ಪೈ, ಸಿರಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಮಹಾವೀರ ಅಜ್ರಿ, ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ಮುಖ್ಯ ನಿರ್ವಹಣಾಧಿಕಾರಿ ಪ್ರಸನ್ನ, ಮಾರುಕಟ್ಟೆ ವಿಭಾಗ ಮತ್ತು ವಿವಿಧ ಉತ್ಪಾದನಾ ವಿಭಾಗಗಳ ಮೇಲಾಧಿಕಾರಿಗಳು, ಮೇಲ್ವಿಚಾರಕರು, ಗೋದಾಮು ಪ್ರಬಂಧಕರು ಹಾಗೂ ಸಿರಿ ಸಿಬ್ಬಂದಿ ಇದ್ದರು.