ಸಾರಾಂಶ
ಬಳ್ಳಾರಿ: ಪ್ರಪಂಚದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಭಾರತ ದೇಶ 2ನೇ ಸ್ಥಾನದಲ್ಲಿರಲು ಡಾ.ವರ್ಗೀಸ್ ಕುರಿಯನ್ ಅವರೇ ಕಾರಣರು. ಅವರನ್ನು ಕ್ಷೀರ ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ. ಹಾಲು ಉತ್ಪಾದನೆಯಲ್ಲಿ ಡಾ.ವರ್ಗೀಸ್ ಕುರಿಯನ್ ಅವರ ಸೇವೆ ಅಪಾರವಾಗಿದೆ ಎಂದು ರಾಬಕೊವಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ (ಮಾರುಕಟ್ಟೆ) ಕೆ.ಎಸ್.ಎರ‍್ರಿಸ್ವಾಮಿರೆಡ್ಡಿ ಅವರು ಹೇಳಿದರು.
ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲಾ ಹಾಲು ಒಕ್ಕೂಟದಿಂದ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಾಂತಿಧಾಮ ಆವರಣದ ಬಾಲಕಿಯರ ಬಾಲಮಂದಿರದಲ್ಲಿ ಮಂಗಳವಾರ ಕ್ಷೀರಕ್ರಾಂತಿಯ ಪಿತಾಮಹ ಪದ್ಮಭೂಷಣ ಡಾ.ವರ್ಗೀಸ್ ಕುರಿಯನ್ ಅವರ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಹಾಲು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಮೂಲ್ ಡೇರಿಯ ಸ್ಥಾಪಕರು ಮತ್ತು ಭಾರತದಲ್ಲಿ ಕ್ಷೀರ ಕ್ರಾಂತಿ ಎಂಬ ಜಗತ್ತಿನ ಅತಿ ದೊಡ್ಡ ಡೇರಿ ಯೋಜನೆಯನ್ನು ಪ್ರಾರಂಭಿಸಿ ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕರ ದೇಶವನ್ನಾಗಿ ಮಾಡಲು ಕಾರಣೀಕೃತರಾದ ಡಾ.ವರ್ಗೀಸ್ ಕುರಿಯನ್ ಅವರ ಜನ್ಮ ದಿನವಾದ ನ.26 ರಂದು ರಾಷ್ಟ್ರೀಯ ಹಾಲು ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ರಾಬಕೊವಿ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಟಿ.ಮಲ್ಲಿಕಾರ್ಜುನ ಮಾತನಾಡಿ, ದೈನಂದಿನ ಜೀವನದಲ್ಲಿ ಬಹಳಷ್ಟು ಕಲಬೆರಕೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ದೂರವಿರಲು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಉಪಯೋಗಿಸಿ ಆರೋಗ್ಯವಾಗಿರಬಹುದು ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಪದ್ಮಭೂಷಣ ಡಾ.ವರ್ಗೀಸ್ ಕುರಿಯನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ, ಸಮತೋಲನ ಆಹಾರದಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕ್ಕೆ ಅವುಗಳ ಮಹತ್ವ ಕುರಿತು ಅರಿವು ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ರಾಬಕೊವಿ ಹಾಲು ಒಕ್ಕೂಟದ ಮಾರುಕಟ್ಟೆ ಗುತ್ತಿಗೆ ಸಮಾಲೋಚಕರಾದ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ನಾಗವೇಣಿ, ಪಾರ್ವತಿ, ಒಕ್ಕೂಟದ ಸಿಬ್ಬಂದಿಗಳಾದ ವೆಂಕಟರತ್ನಬಾಬು, ಬಿ.ಜಗದೀಶ್, ಪೊಬ್ಬತ್ತಿ ಗೋವಿಂದರಾಜುಲು, ಮಲ್ಲಿಕಾರ್ಜುನ, ವೀರೇಶ ಹಳೇಕೋಟೆ, ಸರೋಜಾ, ಲೋಹಿತ್ ಕುಮಾರ್, ಸಿ.ಎನ್.ಮಂಜುನಾಥ, ಬಾಬು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನಂದಿನಿ ಬಾದಾಮಿ ಹಾಲನ್ನು ವಿತರಿಸಲಾಯಿತು.ಬಳ್ಳಾರಿಯಲ್ಲಿ ಜರುಗಿದ ರಾಷ್ಟ್ರೀಯ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ರಾಬಕೊವಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಕೆ.ಎಸ್.ಎರ‍್ರಿಸ್ವಾಮಿರೆಡ್ಡಿ ಮಾತನಾಡಿದರು.