ಗ್ರಾಮೀಣರ ಕಲ್ಯಾಣಕ್ಕೆ ಕಾರ್ಯಕ್ರಮ ರೂಪಿಸಿದ ಡಾ.ವೀರೇಂದ್ರ ಹೆಗ್ಡೆ: ಸುಬ್ರಮಣ್ಯ

| Published : Mar 11 2024, 01:23 AM IST

ಗ್ರಾಮೀಣರ ಕಲ್ಯಾಣಕ್ಕೆ ಕಾರ್ಯಕ್ರಮ ರೂಪಿಸಿದ ಡಾ.ವೀರೇಂದ್ರ ಹೆಗ್ಡೆ: ಸುಬ್ರಮಣ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ವೀರೇಂದ್ರ ಹೆಗ್ಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜನರ ಕಲ್ಯಾಣಕ್ಕಾಗಿ ಬಡವರ, ಹಿಂದುಳಿದವರ, ಶೋಷಿತರ, ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ವಿಮಾ ಸಮನ್ವಯಾಧಿಕಾರಿ ಸುಬ್ರಮಣ್ಯ ಹೇಳಿದರು.

ಶೆಟ್ಟಿಕೊಪ್ಪದಲ್ಲಿ ಧ.ಗ್ರಾ.ಯೋಜನೆಯ ಸಾಧನಾ ಸಮಾವೇಶ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಡಾ.ವೀರೇಂದ್ರ ಹೆಗ್ಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜನರ ಕಲ್ಯಾಣಕ್ಕಾಗಿ ಬಡವರ, ಹಿಂದುಳಿದವರ, ಶೋಷಿತರ, ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ವಿಮಾ ಸಮನ್ವಯಾಧಿಕಾರಿ ಸುಬ್ರಮಣ್ಯ ಹೇಳಿದರು.

ಭಾನುವಾರ ತಾಲೂಕಿನ ಶೆಟ್ಟಿಕೊಪ್ಪದ ಸರ್ಕಾರಿ ಶಾಲೆಯಲ್ಲಿ ಸಹಾಯ ಸಂಘಗಳು, ಪ್ರಗತಿ ಬಂಧು, ಒಕ್ಕೂಟದ ಆಶ್ರಯದಲ್ಲಿ ನಡೆದ ಸಾಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾರಿಗೆ ಬಂದು 15 ರಿಂದ 18 ವರ್ಷಗಳಾಗಿವೆ. ಹಿಂದೆ ಜನರ ಜೀವನ ಕಷ್ಟವಾಗಿತ್ತು. ಆರ್ಥಿಕ, ಸಾಮಾಜಿಕವಾಗಿ ಕಷ್ಟ ಪಡುತ್ತಿದ್ದರು. ಜನರಲ್ಲಿ ಬಡತನ ಕಾಡುತ್ತಿತ್ತು. 5 ರಿಂದ 10 ಸಾವಿರ ರು.ಗಳಿಗೆ ಕೆಲ ಕುಟುಂಬಗಳು ಜೀತದಾಳುಗಳಂತೆ ದುಡಿಯಬೇಕಿತ್ತು. ಅಂತಹ ಸಂದರ್ಭದಲ್ಲಿ ಪೂಜ್ಯ ಖಾವಂದರು ಗ್ರಾಮೀಣ ಜನರ ನೊಂದವರ, ಬಡವರ ಆತ್ಮಸ್ಥೈರ್ಯ ತುಂಬಲು ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳನ್ನು ರಚಿಸಿ ಆರ್ಥಿಕ ಸಹಾಯ ನೀಡಿ ಹಂತ, ಹಂತವಾಗಿ ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರ ನೀಡಿದ್ದರ ಫಲವಾಗಿ ಇಂದು ರಾಜ್ಯದಾದ್ಯಂತ ಲಕ್ಷಾಂತರ ಸಂಘಗಳು ರಚನೆಗಳಾಗಿವೆ ಎಂದರು.

ಅತಿಥಿಯಾಗಿದ್ದ ಉಪನ್ಯಾಸಕಿ ಮಧುರ ಮಂಜುನಾಥ್ ಮಾತನಾಡಿ, ಪ್ರತಿಯೊಂದು ಕುಟುಂಬಕ್ಕೂ ಶಿಕ್ಷಣದ ಜೊತೆಗೆ ಸಂಸ್ಕಾರವೂ ಇರಬೇಕು. ತಾಳ್ಮೆ ಮತ್ತು ಸಂಸ್ಕಾರದಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ಯೋಜನೆ ಮೂಲಕ ಸಾಲ ನೀಡುವುದು, ನಿಮ್ಮ ಬದುಕಿನ ಮೂಲಭೂತ ಅಗತ್ಯತೆ ಪಡೆಯುವುದಕ್ಕೇ ಹೊರತು ಐಷಾರಾಮಿ ಜೀವನ ನಡೆಸಲಿಕ್ಕಲ್ಲ. ಮಹಿಳೆ ಕುಟುಂಬದ ಕಣ್ಣು, ಮಹಿಳೆಯಲ್ಲಿ ಕುಟುಂಬ ನಿಯಂತ್ರಿಸುವ ಮತ್ತು ನಿರ್ವಹಿಸುವ ಶಕ್ತಿ ಅಡಗಿದೆ ಎಂದರು.ಈ ಹಿಂದೆ ಯೋಜನೆಯ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿ ಈಗ ಮುಂಬಡ್ತಿ ಪಡೆದು ಕಾರಾವಾರ ತಾಲೂಕಿನ ಮೇಲ್ವಿಚಾರಕರಾಗಿ ನಿಯೋಜನೆಗೊಂಡ ಅನುಪ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಸಂಘಗಳ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಶೆಟ್ಟಿಕೊಪ್ಪ ವಿಪತ್ತು ನಿರ್ವಹಣಾ ಘಟಕದ ಸದಸ್ಯರನ್ನು ಹಾಗೂ ವಿವಿಧ ಒಕ್ಕೂಟಗಳಲ್ಲಿ ಸಾಧನೆಗೈದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ಕಡಹಿನಬೈಲು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಎ.ಇ.ಎಲ್ದೋ ವಹಿಸಿದ್ದರು. ಶೆಟ್ಟಿಕೊಪ್ಪ ಶಾಲೆ ಮುಖ್ಯೋಪಾಧ್ಯಾಯಿನಿ ಪುಟ್ಟಮ್ಮ, ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾಮಹೇಶ್, ಮೆಣಸೂರು ಗ್ರಾಪಂ ಅಧ್ಯಕ್ಷೆ ಬಿಂದು ಸತೀಶ್ , ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಗಾಂಧಿ ಗ್ರಾಮ ನಾಗರಾಜು, ಮುಖಂಡ ಎನ್.ಎಂ.ಕಾಂತರಾಜ್ ಇದ್ದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಜಗದೀಶ್, ಶೆಟ್ಟಿಕೊಪ್ಪ ವಲಯದ ಮೇಲ್ವಿಚಾರಕ ಸತೀಶ್, ಹೊನ್ನಮ್ಮ, ಕಳ್ಳಿಕೊಪ್ಪ ಸೇವಾ ಪ್ರತಿನಿಧಿ ರಮಾ, ನಿರೀಕ್ಷಾ ಇದ್ದರು. ಸಮಾವೇಶದಲ್ಲಿ ಕಡಹಿನಬೈಲು, ಮಾಕೋಡು, ಸೌತಿಕೆರೆ, ಅಳಲಗೆರೆ, ಕಳ್ಳಿಕೊಪ್ಪ ಒಕ್ಕೂಟಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.