ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ವಿಧಾನಸಭಾ ಕ್ಷೇತ್ರ ಸ್ಥಾನದ ಉಪ ಚುನಾವಣೆಗೆ ಆಯೋಗ ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ಮತದಾರರ ಪರಿಷ್ಕರಣೆಯೂ ಆರಂಭವಾಗಿದ್ದು, ಜ.3ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.
- ವಿವಿಧ ಪಕ್ಷಗಳ ಮುಖಂಡರ ಸಭೆಯಲ್ಲಿ ಚುನಾವಣಾಧಿಕಾರಿ ಮಾಹಿತಿ । ಶಾಮನೂರು ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ವಿಧಾನಸಭಾ ಕ್ಷೇತ್ರ ಸ್ಥಾನದ ಉಪ ಚುನಾವಣೆಗೆ ಆಯೋಗ ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ಮತದಾರರ ಪರಿಷ್ಕರಣೆಯೂ ಆರಂಭವಾಗಿದ್ದು, ಜ.3ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.ನಗರದ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಗುರುವಾರ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು-ಆಕ್ಷೇಪಣೆಗಳಿದ್ದಲ್ಲಿ ಜ.24ರೊಳಗೆ ಸಲ್ಲಿಸಬೇಕು. ಅಂತಿಮ ಮತದಾರರ ಪಟ್ಟಿಯನ್ನು ಫೆ.14ರಂದು ಪ್ರಕಟಿಸಲಾಗುವುದು.
ಒಟ್ಟು 2,31,062 ಮತದಾರರು:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 113538 ಪುರುಷ, 117479 ಮಹಿಳೆಯರು, 47 ಇತರೆ ಮತದಾರರು ಸೇರಿದಂತೆ ಒಟ್ಟು 2,31,062 ಮತದಾರರಿದ್ದಾರೆ. ಒಟ್ಟು 217 ಮತಗಟ್ಟಿಗಳನ್ನು ಕ್ಷೇತ್ರ ಒಳಗೊಂಡಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ 2497 ಯುವಕರು, 2360 ಯುವತಿಯರು ಸೇರಿದಂತೆ 4857 ಯುವ ಮತದಾರರಿದ್ದಾರೆ. 1395 ಪುರುಷ, 1146 ಮಹಿಳಾ ವಿಶೇಷಚೇತನ ಮತದಾರರು ಸೇರಿದಂತೆ ಒಟ್ಟು 2541 ವಿಶೇಷಚೇತನ ಮತದಾರರಿದ್ದಾರೆ ಎಂದು ತಿಳಿಸಿದರು.
ಒಟ್ಟು 284 ಮತಗಟ್ಟೆ ಅಗತ್ಯ:ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳ ಭೌತಿಕ ಪರಿಶೀಲನೆ ನಂತರ ರಾಷನಲೈಸೇಷನ್ ಪ್ರಕ್ರಿಯೆ ಕೈಗೊಂಡಿದ್ದು, 300ಕ್ಕಿಂತ ಕಡಿಮೆ ಮತದಾರರಿರುವ ಮತ್ತು 1200ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಯುಕ್ತೀಕರಣ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಾಗಲೇ 67 ಮತಗಟ್ಟೆಗಳನ್ನು ಗುರುತಿಸಿದೆ. ಕಟ್ಟಡ ಬದಲಾವಣೆ ಕಾರಣದಿಂದ 24 ಮತಗಟ್ಟೆಗಳ ಸ್ಥಳಾಂತರ ಹಾಗೂ 2 ಮತಗಟ್ಟೆಗಳ ಹೆಸರು ಬದಲಾವಣೆ ಸೇರಿದಂತೆ ರಾಷನಲೈಸೇಷನ್ ಪ್ರಕ್ರಿಯೆ ಕೈಗೊಂಡು, ಒಟ್ಟು 284 ಮತಗಟ್ಟೆ ಸ್ಥಾಪಿಸುವ ಅಗತ್ಯತೆ ಬಗ್ಗೆ ಅವರು ಸಭೆಗೆ ಮಾಹಿತಿ ನೀಡಿದರು.
ಯುವ ಮತದಾರರು ವೋಟರ್ ಹೆಲ್ಪ್ ಲೈನ್ ಆಪ್ ಮುಖಾಂತರ ನಮೂನೆ-6ರ ಅರ್ಜಿ ಸಲ್ಲಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಸಾರ್ವಜನಿಕರು ಆನ್‌ಲೈನ್: ** https://voters.eci.gov.in ** ಮುಖಾಂತರ ಮತದಾರರ ಪಟ್ಟಿಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿದ್ದರು.
- - -(ಕೋಟ್) * ವೋಟರ್ ಹೆಲ್ಪ್ ಲೈನ್
ದಾವಣಗೆರೆ ದಕ್ಷಿಣ ಕ್ಷೇತ್ರ ಮತದಾರರು ತಮ್ಮ ಮತಪಟ್ಟಿ ವಿವರಗಳನ್ನು ವೋಟರ್ ಹೆಲ್ಪ್ ಲೈನ್ ಆ್ಯಪ್ ಮುಖಾಂತರ ಪರಿಶೀಲಿಸಿಕೊಳ್ಳಬಹುದು. ಮತದಾರರ ವಿಳಾಸ ಬದಲಾವಣೆ, ಜನ್ಮ ದಿನಾಂಕ ತಿದ್ದುಪಡಿ, ಪೋಟೋ ಬದಲಾವಣೆ, ಸ್ಥಳಾಂತರಗೊಂಡಿದ್ದಲ್ಲಿ ನಮೂನೆ-8ರ ಅರ್ಜಿಯನ್ನು ವೋಟರ್ ಹೆಲ್ಪ್ ಲೈನ್ ಮುಖಾಂತರ ಸಲ್ಲಿಸಲು ಅವಕಾಶವೂ ಇದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಡಿಸಿ ಅವರು ವಿವರಿಸಿದರು.- - -
-25ಕೆಡಿವಿಜಿ1:ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ಜ.3ರಂದು ಕರಡು ಮತದಾರರ ಪಟ್ಟಿ ಪ್ರಕಟ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ ಮಾಹಿತಿ ನೀಡಿದರು.