ಸಾರಾಂಶ
ಕನಕಗಿರಿ : ರಣ ಬಿಸಿಲು ಹಾಗೂ ತೇವಾಂಶ ಕೊರತೆಯಿಂದಾಗಿ ಡ್ರ್ಯಾಗನ್ ಫ್ರೂಟ್ ಬೆಳೆ ಒಣಗುತ್ತಿದೆ.
ತಾಲೂಕು ವ್ಯಾಪ್ತಿಯಲ್ಲಿ ಬೆಳೆಯಲಾಗಿರುವ ಡ್ರ್ಯಾಗನ್ ಫ್ರೂಟ್ ಬೆಳೆ ಬಿಸಿಲಿನ ಝಳಕ್ಕೆ ಕೆಂಪು ರೋಗ ತಗುಲಿ ಬಾಡಿ ಹೋಗುತ್ತಿದೆ. ತೋಟಗಳಲ್ಲಿ ಅಂತರ್ಜಲ ಕುಸಿದಿದ್ದು, ಬೆಳೆ ದಿನದಿಂದ ದಿನಕ್ಕೆ ಒಣಗಲು ಪ್ರಾರಂಭವಾಗಿದೆ. ತಾವು ಬೆಳೆದ ಡ್ರ್ಯಾಗನ್ ಫ್ರೂಟ್ ತೋಟವನ್ನು ಉಳಿಸಿಕೊಳ್ಳುವ ಸವಾಲು ರೈತರಿಗೆ ಎದುರಾಗಿದೆ.
ತಾಲೂಕಿನ ಕನಕಾಪೂರ ಗ್ರಾಮದ ಯುವ ರೈತ ಬಸವರಾಜ ಜಾಲಿಹಾಳ 1 ಎಕರೆ ಜಮೀನಿನಲ್ಲಿ ನಾಟಿ ಮಾಡಲಾಗಿದ್ದ ಮೂರು ಸಾವಿರ ಗಿಡಗಳು ತೇವಾಂಶ ಕೊರತೆ ಹಾಗೂ ಉಷ್ಣಾಂಶಕ್ಕೆ ಒಣಗಿ ಹೋಗಿವೆ. ತೇವಾಂಶ ಕಾಪಾಡಲು ಸಾಧ್ಯವಿಲ್ಲವಾಗಿದ್ದು, ತಾಲೂಕಿನ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ.
ತಾಲೂಕಿನಲ್ಲಿ ಕಳೆದೆರೆಡು ವರ್ಷಗಳಿಂದ ಪಂಪಸೆಟ್ ಇರುವ ರೈತರ ತೋಟಗಳಲ್ಲಿ ಬೆಳೆಯಲಾಗುತ್ತಿದ್ದ ಡ್ರ್ಯಾಗನ್ ಫ್ರೂಟ್ ವಿಪರೀತ ತಾಪಮಾನಕ್ಕೆ ಕುಂದು ಹೋಗುತ್ತಿದ್ದು, ಈ ಬೆಳೆ ಹಾನಿಗೆ ತೇವಾಂಶ ಕೊರತೆಯೊಂದೇ ಕಾರಣವಾಗದೆ, ಸೂರ್ಯನ ಪ್ರಖರತೆಯೂ ಕಾರಣವಾಗಿದ್ದು, ಪ್ರತಿ ಎಕರೆಗೆ ಲಕ್ಷಾಂತರ ರೂ. ನಷ್ಟ ಅನುಭವಿಸಿರುವ ರೈತರು ಸರ್ಕಾರದಿಂದ ದೊರೆಯುವ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಯೋಜನೆ ಇಲ್ಲ: ಒಣಗಿ ಹೋಗುತ್ತಿರುವ ಈ ಬೆಳೆ ಸಂರಕ್ಷಣೆಗೆ ಅಥವಾ ನಿರ್ವಹಣೆಗೆ ತೋಟಗಾರಿಕೆ ಇಲಾಖೆಯಲ್ಲಿ ಯಾವ ಯೋಜನೆಗಳಿಲ್ಲ. ರೈತರು ಸ್ವಂತ ಖರ್ಚಿನಲ್ಲಿ ಬೆಳೆ ಉಳಿಸಿಕೊಳ್ಳುವುದೊಂದೇ ಮಾರ್ಗವಾಗಿದೆ. ಭೀಕರ ಬರಗಾಲದಲ್ಲಿ ರೈತನ ಕೈಯಲ್ಲಿ ಹಣವಿಲ್ಲದಿರುವಾಗ ಬೆಳೆ ಉಳಿಸಿಕೊಳ್ಳುವುದು ಚಿಂತೆಯಾಗಿದೆ. ಇನ್ನೊಂದೆಡೆ ಸಾಲ-ಸೋಲ ಮಾಡಿಯಾದರೂ ಬೆಳೆ ಉಳಿಸಿಕೊಳ್ಳೋಣ ಎಂದರೂ ಸಾಲವೂ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತನ ಜೀವನ ಬಲು ದುಸ್ತರವಾಗಿದೆ.
ಕೋಟ್‌ಕನಕಗಿರಿ ತಾಲೂಕನ್ನು ಬರ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ ಇಲ್ಲಿ ಪಂಪಸೆಟ್ ಇರುವ ರೈತರು ಡ್ರ್ಯಾಗನ್ ಫ್ರೂಟ್ ಬೆಳೆಯಲಾರಂಭಿಸಿದ್ದು, ಹವಾಮಾನ ವೈಪರೀತ್ಯಕ್ಕೆ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ಪರಿಹಾರ ನೀಡಬೇಕು ಎನ್ನುತ್ತಾರೆ ರೈತ ಬಸವರಾಜ ಜಾಲಿಹಾಳ.
ಕನಕಗಿರಿ ವ್ಯಾಪ್ತಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದ ರೈತರು ತೀರಾ ಸಂಕಷ್ಟದಲ್ಲಿದ್ದಾರೆ. ಬೆಳೆ ನಿರ್ವಹಣೆಗೆ ಇಲಾಖೆಯಲ್ಲಿ ಯಾವದೇ ಯೋಜನೆಗಳಿಲ್ಲ. ಸರ್ಕಾರದಿಂದ ಬರುವ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ತೋಟಗಾರಿಕೆ ಅಧಿಕಾರಿ ಹನುಮೇಶ ತಿಳಿಸಿದ್ದಾರೆ.