ಕೆರೆ ನೀರು ಹೊರಹಾಕಿ; ಹೊಸ ನೀರು ತುಂಬಿಸಿ

| Published : Sep 26 2025, 01:00 AM IST

ಕೆರೆ ನೀರು ಹೊರಹಾಕಿ; ಹೊಸ ನೀರು ತುಂಬಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಹೆಬ್ಬಾಳದ ಗ್ರಾಮದ ಕೆರೆಗೆ ಈ ಹಿಂದೆ ಮಲಪ್ರಭಾ ಕಾಲುವೆಯಿಂದ ನೀರು ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಕೆರೆಯಲ್ಲಿ ಮೊದಲಿದ್ದ ಕಲುಷಿತ ನೀರನ್ನು ಹೊರ ಹಾಕದೆ ಇರುವುದರಿಂದ ಪ್ರಸ್ತುತ ಕರೆಯ ನೀರು ಮತ್ತಷ್ಟು ಕಲುಷಿತಗೊಂಡಿದೆ.

ನವಲಗುಂದ:

ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿನ ಕೆರೆಯಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ. ಕೂಡಲೆ ಕೆರೆಯಲ್ಲಿನ ಮಲೀನ ನೀರು ಹೊರಹಾಕಿ ಹೊಸ ನೀರು ತುಂಬಿಸುವಂತೆ ಆಗ್ರಹಿಸಿ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಗ್ರಾಮಸ್ಥರು ಕೆರೆಯಲ್ಲಿಳಿದು ಪ್ರತಿಭಟನೆ ನಡೆಸಿದರು.

ಗ್ರಾಮದ ಕೆರೆಗೆ ಈ ಹಿಂದೆ ಮಲಪ್ರಭಾ ಕಾಲುವೆಯಿಂದ ನೀರು ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಕೆರೆಯಲ್ಲಿ ಮೊದಲಿದ್ದ ಕಲುಷಿತ ನೀರನ್ನು ಹೊರ ಹಾಕದೆ ಇರುವುದರಿಂದ ಪ್ರಸ್ತುತ ಕರೆಯ ನೀರು ಮತ್ತಷ್ಟು ಕಲುಷಿತಗೊಂಡಿದೆ. ಗ್ರಾಪಂ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಕೆರೆಯ ನೀರನ್ನು ಹೊರಹಾಕಿ ಹೊಸದಾಗಿ ನೀರು ತುಂಬಿಸುವವರೆಗೂ ಹೋರಾಟ ನಡೆಸಲಾಗುವುದೆಂದು ಗ್ರಾಮಸ್ಥರು ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ಗ್ರಾಪಂ ಪಿಡಿಒ ಧರ್ಮರಾಜ ಚವ್ಹಾಣ, ಗ್ರಾಮದಲ್ಲಿನ ಕೆರೆಯ ನೀರು ಶುದ್ಧವಾಗಿದೆ. ಮಳೆಯಿಂದಾಗಿ ರಾಡಿಯಾಗಿದೆ. ಎಲ್ಲರೂ ಕೆರೆಯ ನೀರನ್ನು ಕುದಿಸಿ, ಆರಿಸಿ ಕುಡಿಯಬೇಕೆಂದು ಸಲಹೆ ನೀಡಿದರು. ಆದರೆ ಪಿಡಿಒ ಸಲಹೆ ಒಪ್ಪದ ಗ್ರಾಮಸ್ಥರು ಕೆರೆ ನೀರನ್ನು ಬದಲಾಯಿಸುವಂತೆ ಹಾಗೂ ಅಲ್ಲಿಯ ವರೆಗೆ ಟ್ಯಾಂಕರ್‌ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸುವಂತೆ ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಹಿತಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಶ್ರೀಕಾಂತ ಹಲಗಪ್ಪನವರ, ಹನುಮಂತಪ್ಪ ಸಂದನ್ನವರ, ಶಾಂತಪ್ಪ ದುಬ್ಬದಮಟ್ಟಿ, ಬಸವ್ವ ಬಾರಿಗಿಡದ, ನಿಜಗುಣಗೌಡ ಪಾಟೀಲ, ಸಿದ್ದಲಿಂಗಪ್ಪ ಯಮನೂರ, ಹೊನ್ನಪ್ಪ ದುಬ್ಬದಮಟ್ಟಿ, ಬಸಪ್ಪ ಕೊಪ್ಪದ, ಬಸವರಾಜ ದುಬ್ಬದಮಟ್ಟಿ, ಪುಂಡಲೀಕ ಸಂದನ್ನವರ, ಪಕೀರಪ್ಪ ಗೊಬ್ಬರಗುಪ್ಪಿ, ಅರ್ಜುನ ತಳವಾರ ಸೇರಿದಂತೆ ಹೆಬ್ಬಾಳ ಗ್ರಾಮಸ್ಥರು ಇದ್ದರು.