ಸಾರಾಂಶ
ಜಿಲ್ಲೆಯ ಜೀವನಾಡಿಗಳಾದ ಕೃಷ್ಣರಾಜಸಾಗರ ಮತ್ತು ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯಗಳು ಭರ್ತಿಯಾಗಿ ಜನವರಿ ತಿಂಗಳಿನಲ್ಲಿಯೂ ತುಂಬಿ ತುಳುತ್ತಿವೆ. ಇದರಿಂದ ಜಿಲ್ಲೆಯ ರೈತ ಸಮೂಹದಲ್ಲಿ ಹರ್ಷ ತಂದಿದೆ ಎಂದು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಳೆರಾಯನ ಕೃಪೆಯಿಂದ ಹೇಮಾವತಿ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ನಾಲೆಗಳ ಮೂಲಕ ಬೇಸಿಗೆ ಬೆಳೆಗೆ ನೀರು ಹರಿಸುವಂತೆ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಸಚಿವರು, ಶಾಸಕರನ್ನು ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನದಿ ಅಣೆಕಟ್ಟೆಗಳಿಂದ ಬೇಸಿಗೆ ಬೆಳೆಗೆ ನೀರು ಹರಿಸದಿದ್ದರೆ ರೈತಸಂಘ ನೀರಿಗಾಗಿ ಹೋರಾಟ ಆರಂಭಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಜೀವನಾಡಿಗಳಾದ ಕೃಷ್ಣರಾಜಸಾಗರ ಮತ್ತು ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯಗಳು ಭರ್ತಿಯಾಗಿ ಜನವರಿ ತಿಂಗಳಿನಲ್ಲಿಯೂ ತುಂಬಿ ತುಳುತ್ತಿವೆ. ಇದರಿಂದ ಜಿಲ್ಲೆಯ ರೈತ ಸಮೂಹದಲ್ಲಿ ಹರ್ಷ ತಂದಿದೆ ಎಂದು ತಿಳಿಸಿದ್ದಾರೆ.ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ ಮತ್ತು ಪಾಂಡವಪುರ ತಾಲೂಕಿನ ಕೆಲವು ಪ್ರದೇಶಗಳು ಹೇಮಾವತಿ ನೀರನ್ನು ಆಶ್ರಯಿಸಿ ಬದುಕುತ್ತಿವೆ. ತೀವ್ರ ಬರಗಾಲ ಮತ್ತಿತರ ಕೆಲವು ಕಾರಣಗಳಿಂದ ಜಲಾನಯನ ಪ್ರದೇಶದ ರೈತರು ಕೆಲವು ವರ್ಷಗಳಿಂದ ಬೇಸಿಗೆ ಬೆಳೆಯನ್ನು ಬೆಳೆಯಲಾಗಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಅದನ್ನು ರೈತರ ಉಪಯೋಗಕ್ಕೆ ಬಿಡದೆ ನೆರೆಯ ತಮಿಳನಾಡಿಗೆ ಬಿಟ್ಟು ಈ ಭಾಗದ ರೈತರನ್ನು ವಂಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ಜಿಲ್ಲೆಯ ರೈತರಿಗೆ ಬೇಸಿಗೆ ಬೆಳೆಗೆ ನೀರು ಹರಿಸಲು ಅಗತ್ಯ ಕ್ರಮ ವಹಿಸಬೇಕು. ಈ ನಾಲಾ ವ್ಯಾಪ್ತಿಯ ಶಾಸಕರಾದ ಎಚ್.ಟಿ.ಮಂಜು, ದರ್ಶನ್ ಪುಟ್ಟಣ್ಣಯ್ಯ, ಪಿ.ರವಿಕುಮಾರ್, ಮದ್ದೂರಿನ ಉದಯ್ ಅವರು ಹೇಮೆ ನೀರಿಗಾಗಿ ಸಂಘಟಿತ ಧ್ವನಿಯೆತ್ತಬೇಕೆಂದು ಒತ್ತಾಯಿಸಿದ್ದಾರೆ.