ಕೃಷ್ಣ ನದಿ, ಘಟಪ್ರಭ ಕಾಲುವೆಗೆ ನೀರು ಹರಿಸಿ

| Published : Apr 09 2024, 12:46 AM IST

ಸಾರಾಂಶ

ಪಾಲಬಾವಿ: ಕುಡಚಿ ಮತ ಕ್ಷೇತ್ರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮಹಾರಾಷ್ಟ್ರದ ಕೊಯ್ನಾ ಡ್ಯಾಮ್‌ನಿಂದ ಕೃಷ್ಣಾ ನದಿಗೆ ಹಾಗೂ ಘಟಪ್ರಭ ಎಡದಂಡೆ ಕಾಲುವೆಗೆ ಹಿಡಕಲ್ ಜಲಾಶಯದಿಂದ ನೀರು ಹರಿಸಬೇಕು. ಕ್ಷೇತ್ರದ ಜನರ ನೀರಿಗಾಗಿ ಹಾಹಾಕಾರ ನಿಲ್ಲಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್‌ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಪಾಲಬಾವಿ

ಕುಡಚಿ ಮತಕ್ಷೇತ್ರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮಹಾರಾಷ್ಟ್ರದ ಕೊಯ್ನಾ ಡ್ಯಾಮ್‌ನಿಂದ ಕೃಷ್ಣಾ ನದಿಗೆ ಹಾಗೂ ಘಟಪ್ರಭ ಎಡದಂಡೆ ಕಾಲುವೆಗೆ ಹಿಡಕಲ್ ಜಲಾಶಯದಿಂದ ನೀರು ಹರಿಸಬೇಕು. ಕ್ಷೇತ್ರದ ಜನರ ನೀರಿಗಾಗಿ ಹಾಹಾಕಾರ ನಿಲ್ಲಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್‌ ಒತ್ತಾಯಿಸಿದರು.

ಕುಡಚಿ ಮತಕ್ಷೇತ್ರದ ಆಲಖನೂರ ಗ್ರಾಮದಲ್ಲಿ ಮಾಜಿ ಶಾಸಕ ಪಿ.ರಾಜೀವ್ ಅವರ ಕಚೇರಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು. ಕ್ಷೇತ್ರದ ಪ್ರತಿ ಗ್ರಾಮದಲ್ಲೂ ನೀರಿನ ಕೊರತೆ ಆಗಬಾರದು. ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ರಾಯಬಾಗ ತಾಲೂಕಿನಲ್ಲಿ ಜನಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ. ಅಧಿಕಾರಿಗಳಿಂದ ದಬ್ಬಾಳಿಕೆ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಗೋಶಾಲೆಗಳನ್ನು ತೆರೆಯಬೇಕು, ಕುಡಚಿ ಮತಕ್ಷೇತ್ರವು ಮೀಸಲು ಕ್ಷೇತ್ರವಾಗಿರುವುದರಿಂದ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ವಿಧಾನಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಪರವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಲಿದ್ದಾರೆ. ಹತ್ತು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಜಿ ಅವರ ಜನಪರ ಯೋಜನೆಗಳಿಂದ ದೇಶ ಅಭಿವೃದ್ಧಿ ಪಥದಲ್ಲಿದೆ, ಚಿಕ್ಕೋಡಿ ಸಂಸದರು ಅಣ್ಣಾಸಾಹೇಬ ಜೊಲ್ಲೆ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ 650ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೇಂದ್ರದ ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಇಂತವರು ಮತ್ತೊಮ್ಮೆ ಚಿಕ್ಕೋಡಿ ಕ್ಷೇತ್ರದ ಸಂಸದರಾಗಬೇಕು ಎಂದರು.

ಈ ಸಂದರ್ಭದಲ್ಲಿ ಕುಡಚಿ ಬ್ಲಾಕ್ ಅಧ್ಯಕ್ಷ ಶ್ರೀಧರ ಮೂಡಲಗಿ, ಗೌಡಪ್ಪ ಖೇತಗೌಡರ, ಸಂತೋಷ ಶಿಂಗಾಡಿ, ಮಹಾಂತೇಶ ಯರಡತ್ತಿ, ಮುತ್ತು ಗೋಲಸಂಗಿ, ಸಂಸದರ ಆಪ್ತ ಸಹಾಯಕ ಮಾರುತಿ ಹೊಸಪೇಟಿ, ರಾಹುಲ ಕುರಿ ಸೇರಿದಂತೆ ಇತರರು ಹಾಜರಿದ್ದರು.