ತಮಿಳುನಾಡಿಗೆ ನೀರು ಹರಿಸುವಾಗ ಕೆಆರ್‌ಎಸ್ ಅಣೆಕಟ್ಟೆ ವ್ಯಾಪ್ತಿಯ ಕಬಿನಿ, ಹಾರಂಗಿ ಹಾಗೂ ಹೇಮಾವತಿ ಅಣೆಕಟ್ಟೆಗಳಿಂದ ನೀರನ್ನು ಕೆಆರ್‌ಎಸ್‌ಗೆ ಹರಿಸಿಕೊಂಡು ನೀರು ಬಿಡಲಾಗಿದೆ. ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಪ್ರಮಾಣದ ನೀರನ್ನು ಅಣೆಕಟ್ಟೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಲಾಗುತ್ತಿತ್ತು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಮಂಡ್ಯ ಜಿಲ್ಲಾದ್ಯಂತ ನೀರಿಲ್ಲದೆ ಒಣಗುತ್ತಿರುವ ಬೆಳೆಗಳ ರಕ್ಷಣೆಗಾಗಿ ಒಂದು ಕಟ್ಟು ಕೆಆರ್‌ಆಎಸ್ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸಬೇಕು. ಇಲ್ಲ ಒಣಗಿ ನಷ್ಟಕ್ಕೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಜಿಲ್ಲಾಡಳಿತವನ್ನು ಆಗ್ರಹಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಬಹುಬೇಗ ಅಣೆಕಟ್ಟೆ ಭರ್ತಿಯಾಯಿತು. ಆದರೆ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ನೀರನ್ನು ವ್ಯವಸ್ಥಿತವಾದ ರೀತಿಯಲ್ಲಿ ಬಳಕೆ ಮಾಡುವುದರಲ್ಲಿ ವಿಫಲರಾದರು ಎಂದು ದೂರಿದರು.
ಕೆಆರ್‌ಎಸ್ ಅಣೆಕಟ್ಟೆ ನೀರು ನಿರ್ವಹಣೆ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಇದರಿಂದಾಗಿ ಅಣೆಕಟ್ಟೆಯಲ್ಲಿ ನೀರಿನ ಸಾಮರ್ಥ್ಯ ಕುಸಿದು ಬೆಳೆಗಳಿಗೆ ನೀರಿನ ಸಮಸ್ಯೆ ತಲೆದೂರಿದೆ ಎಂದು ಕಿಡಿಕಾರಿದರು.ತಮಿಳುನಾಡಿಗೆ ನೀರು ಹರಿಸುವಾಗ ಕೆಆರ್‌ಎಸ್ ಅಣೆಕಟ್ಟೆ ವ್ಯಾಪ್ತಿಯ ಕಬಿನಿ, ಹಾರಂಗಿ ಹಾಗೂ ಹೇಮಾವತಿ ಅಣೆಕಟ್ಟೆಗಳಿಂದ ನೀರನ್ನು ಕೆಆರ್‌ಎಸ್‌ಗೆ ಹರಿಸಿಕೊಂಡು ನೀರು ಬಿಡಲಾಗಿದೆ. ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಪ್ರಮಾಣದ ನೀರನ್ನು ಅಣೆಕಟ್ಟೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಲಾಗುತ್ತಿತ್ತು ಎಂದರು.
ಹಾಸನ, ಮಂಡ್ಯ ಹಾಗೂ ತುಮಕೂರಿನ ಕೆಲವು ಭಾಗಗಳ ನೀರಾವರಿ ಸೌಲಭ್ಯಕ್ಕಾಗಿ ಹೇಮಾವತಿ ಅಣೆಕಟ್ಟೆ ನಿರ್ಮಾಣ ಮಾಡಲಾಗಿದೆ. ಆದರೆ, ಈ ಬಾರಿ ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ರಾಜಕೀಯ ಮಾಡಲಾಗಿದೆ ಎಂದು ದೂರಿದರು.ಕುಡಿಯುವ ನೀರಿಗೆ ತೊಂದರೆಯಾಗದಂತೆ ನೀರು ಹರಿಸುವುದಾಗಿ ಹೇಳಿ ಕೆಲವು ರಾಜಕಾರಣಿಗಳು ತುಮಕೂರು ಜಿಲ್ಲೆಯ ಭಾಗಕ್ಕೆ ಶೇ.90ರಷ್ಟು ನೀರು ತೆಗೆದುಕೊಂಡು ಹೋಗಿದ್ದಾರೆ, ಇದರಿಂದ ನಮ್ಮ ಭಾಗದ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಜಿಲ್ಲಾಡಳಿತ ರೈತರಿಗೆ ಸರಿಯಾದ ಮಾಹಿತಿ ನೀಡದೆ ನಾಲೆಗೆ ನೀರು ಹರಿಸಿದ್ದಾರೆ. ಜಿಲ್ಲೆಯಲ್ಲಿ ಕಬ್ಬು ಸೇರಿದಂತೆ ಸಾಕಷ್ಟು ಬೆಳೆಗಳು, ತೋಟಗಾರಿಕೆ ಬೆಳೆಗಳು ಒಣಗುತ್ತಿವೆ. ಹಾಗಾಗಿ ಜಿಲ್ಲಾಡಳಿತ ರೈತರಿಗೆ ಸ್ಪಷ್ಟ ಮಾಹಿತಿ ನೀಡಿ ಒಣಗುತ್ತಿರುವ ಬೆಳೆಗಳ ರಕ್ಷಣೆಗೆ ನೀರು ಹರಿಸಿ ಇಲ್ಲವಾದರೆ ಬೆಳೆಗಳ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.ಬೆಳೆಗಳು ಒಣಗಿ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಈಗ ಜಿಲ್ಲೆಯಲ್ಲಿ ಯಾವುದೇ ಉಸ್ತುವಾರಿ ಮಂತ್ರಿಗಳು ಇಲ್ಲದಿರುವುದರಿಂದ ಜಿಲ್ಲಾಧಿಕಾರಿಗಳೇ ಹೆಚ್ಚಿನ ಹೊಣೆ ಹೊರಬೇಕು. ಇಲ್ಲವಾದರೆ ಜಿಲ್ಲೆಯ ರೈತರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಬೇಸಿಗೆ ಭತ್ತದ ಬೆಳೆ ಕಟಾವು ಮುಕ್ತಾಯ ಹಂತಕ್ಕೆ ಬರುತ್ತಿದ್ದರೂ ಈವರೆಗೂ ರೈತ ಸಂಪರ್ಕ ಕೇಂದ್ರಗಳನ್ನು ಆರಂಭಿಸಿಲ್ಲ. ಇದರಿಂದಾಗಿ ರೈತರ ಭತ್ತ ದಲ್ಲಾಳಿಗಳ ಪಾಲಾಗುತ್ತಿವೆ. ಈ ಸರಕಾರ ದಲ್ಲಾಳಿಗೆ ಅನುಕೂಲ ಮಾಡಿಕೊಡುವ ದಲ್ಲಾಳಿ ಸರಕಾರವಾಗಿದೆ ಎಂದು ಕಿಡಿಕಾರಿದರು.ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಆರ್.ಸೋಮಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ಅರಳಕುಪ್ಪೆ ಮಹದೇವು, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಕ್ಯಾತನಹಳ್ಳಿ ಚೇತನ್ ಸೇರಿದಂತೆ ಹಲವರು ಇದ್ದರು.