ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಪಟ್ಟಣದಲ್ಲಿ ಅತೀ ಶೀಘ್ರ ಒಳಚರಂಡಿ ಯೋಜನೆಯ ಕಾಮಗಾರಿ ಪ್ರಾರಂಭಗೊಳ್ಳಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಂತ ಹಂತವಾಗಿ ಕಾಮಗಾರಿ ಆರಂಭಿಸುತ್ತಿರುವುದರಿಂದ ಪ್ರತಿಯೊಬ್ಬರ ಸಹಕಾರ ಅತ್ಯವಶ್ಯವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಪಟ್ಟಣದ ಯಲ್ಲಮ್ಮ ಪುರಸಭೆ ಸಭಾಭವನದಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪುರಸಭೆಯ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರೆ ಪಟ್ಟಣದ ಸೌಂದರ್ಯೀಕರಣ ಹಾಗೂ ರಸ್ತೆಗಳ ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ಮುಖ್ಯ ರಸ್ತೆಗಳಲ್ಲಿ ಅನಧಿಕೃತವಾಗಿರುವ ಎಲ್ಲ ಡಬ್ಬಾ ಅಂಗಡಿಗಳನ್ನು ತೆರುವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ನಗರದಲ್ಲಿನ ಲಂಡೇನ ನಾಲಾ ಅಭಿವೃದ್ಧಿಗೆ ₹5 ಕೋಟಿ ಮಂಜೂರು ಮಾಡಿಸಲಾಗಿದ್ದು, ನಾಲಾ ತಡೆಗೋಡೆ ಸೇರಿದಂತೆ ನಾಲಾಕ್ಕೆ ಹೊಂದಿಕೊಂಡಿರುವ ಸೇತುವೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದ ಅವರು, ಪಟ್ಟಣದ ಪ್ರತಿ ಬೀದಿಗಳಲ್ಲಿ ಸಂಪೂರ್ಣ ಬೆಳಕಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ₹5 ಕೋಟಿ ಮಂಜೂರಾಗಿದ್ದು, ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಪಟ್ಟಣದ ತುಂಬೆಲ್ಲ ಬೆಳಕಿನ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದರು.ಪುರಸಭೆ ಸದಸ್ಯರಾದ ರಾಜಶೇಖರ ಕಾರದಗಿ, ಶಿವಾನಂದ ಹೂಗಾರ, ಅರ್ಜುನ ಅಮ್ಮೋಜಿ ಮಾತನಾಡಿ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವುದಕ್ಕೆ ನಮ್ಮಸಂಪೂರ್ಣ ಒಪ್ಪಿಗೆ ಇದ್ದು, ಇನ್ನೊಮ್ಮೆ ಸರಿಯಾಗೆ ಸರ್ವೇ ಮಾಡಿ ಸೂಕ್ತ ಕ್ರಮ ಕೈಗೊಂಡಲ್ಲಿ ಪಟ್ಟಣದ ಅಭಿವೃದ್ದಿಗೆ ನಾವೂ ಕೈಜೋಡಿಸುವುದಾಗಿ ಹೇಳಿದರು.ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿನಮಠ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು.ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚಣ್ಣವರ, ಉಪಾಧ್ಯಕ್ಷೆ ದಾವಲಬಿ ಸನದಿ, ಸದಸ್ಯರಾದ ದೀಪಕ ಜಾನ್ವೇಕರ, ಶಿವನಗೌಡ ಪಾಟೀಲ, ವೀರೇಶ ಪ್ರಭುನವರ, ಸಂಗಮೇಶ ಹಾದಿಮನಿ, ಯಲ್ಲಪ್ಪ ರುದ್ರಾಕ್ಷಿ, ನಿಂಗಪ್ಪ ಬೆಟಸೂರ, ಧರೆಪ್ಪ ಮಡ್ಲಿ, ಮೌಲಾಸಾಬ ತಬ್ಬಲಜಿ, ಮಲ್ಲಿಕಾರ್ಜುನ ಪುರದಗುಡಿ, ಬಾಪುಸಾಬ ಚೂರಿಖಾನ್, ದ್ಯಾಮನ್ನ ಸುತಗಟ್ಟಿ, ಪುಷ್ಪಲತಾ ಮೊಖಾಶಿ, ಭಾಗ್ಯಶ್ರೀ ಸಾಲೋಣಿ ಹಾಗೂ ಅಧಿಕಾರಿಗಳು ಇದ್ದರು.
ನೂತನ ತರಕಾರಿ ಮಾರುಕಟ್ಟೆಗೆ ಎಲ್ಲ ವ್ಯಾಪಾರಸ್ಥರನ್ನು ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ವ್ಯಾಪಾರಸ್ಥರಿಗೆ ಎಲ್ಲ ರೀತಿಯ ಮೂಲ ಸೌಕರ್ಯ ಕಲ್ಪಿಸಿ ಬಜಾರದಲ್ಲಿರುವ ತರಕಾರಿ ವ್ಯಾಪಾರಸ್ಥರನ್ನು ನೂತನ ಮಾರುಕಟ್ಟೆಗೆ ಸ್ಥಳಾಂತರಿಸುವ ಕಾರ್ಯ ಮಾಡಲಾಗುತ್ತಿದೆ.
-ವಿಶ್ವಾಸ ವೈದ್ಯ ಶಾಸಕರು ಸವದತ್ತಿ-ಯಲ್ಲಮ್ಮ ಮತಕ್ಷೇತ್ರ.