ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ 24ನೇ ವಾರ್ಡ್ ಗುಂಡಾಪುರ ಗ್ರಾಮದ ಎಸ್.ಟಿ ಕಾಲೋನಿಯಲ್ಲಿ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಚರಂಡಿ ಸ್ವಚ್ಛತೆ ಮಾಡಿ ಒಂದು ತಿಂಗಳಾದರೂ ತ್ಯಾಜ್ಯವನ್ನು ಬೇರೆಡೆ ಸಾಗಿಸಿಲ್ಲ. ಕುಡಿಯುವ ನೀರಿನ ಘಟಕವಿದ್ದರೂ ಬಳಕೆಗೆ ಇಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.ಈ ಹಿಂದೆ ಕಾದಲವೇಣಿ ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಿದ್ದ ಗುಂಡಾಪುರ ಗ್ರಾಮವು ಪಂಚಾಯಿತಿ 5 ವರ್ಷಗಳ ಹಿಂದೆ ನಗರ ಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಬರೀ ವಿದ್ಯುತ್ ದೀಪ, ನಾಮ್ ಕೆ ವಾಸ್ತೆ ಚರಂಡಿ ಸ್ವಚ್ಛತೆ ಬಿಟ್ಟರೆ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗುವಂತಹ ಯಾವುದೇ ಕೆಲಸಗಳು ನಡೆದೇ ಇಲ್ಲ.ಗ್ರಾಮದಲ್ಲಿ 280 ಮನೆ ಈ ಗ್ರಾಮದಲ್ಲಿ ಸುಮಾರು 280 ಮನೆಗಳು ಇದ್ದು, 1 ಸಾವಿರ ಕ್ಕೂ ಹೆಚ್ಚು ಜನ ವಾಸವಿದ್ದಾರೆ, ಇವರಿಗೆ ನಗರಸಭೆ ವತಿಯಿಂದ ಶುದ್ಧ ಕುಡಿಯುವ ನೀರು, ಚರಂಡಿ ಸ್ವಚ್ಛತೆ, ರಸ್ತೆ ಹೀಗೆ ಹಲವು ಮೂಲಭೂತ ಸೌಲಭ್ಯಗಳು ಒದಗಿಸುವಲ್ಲಿ ಸ್ಥಳೀಯ ಆಡಳಿತ ಸಂಸ್ಥೆ ವಿಫಲವಾಗಿರುವುದು ಎದ್ದು ಕಾಣಿಸುತ್ತಿದೆ. 2 ವರ್ಷ ಕಳೆದರು ಕುಡಿಯುವ ನೀರಿಗೆ ಬೇರೆ ಕಡೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ, ಕುಡಿಯುವ ನೀರಿನ ಘಟಕವಿದ್ದರೂ ಪ್ರಯೋಜನಕ್ಕೆ ಬಾರದಂತೆ ಹಾಳಾಗಿದೆ ಎಂಬುದು ಗ್ರಾಮಸ್ಥರ ಆರೋಪ.
ಇದೀಗ ಹೊಸದಾಗಿ ಚರಂಡಿ ನಿರ್ಮಾಣ ಮಾಡಿದ್ದು ಮಧ್ಯದಲ್ಲಿ ಹಾಗೆ ಬಿಟ್ಟಿದ್ದಾರೆ ಚರಂಡಿ ನೀರು ಮುಂದಕ್ಕೆ ಹೋಗುತ್ತಿಲ್ಲ, ಪಂಚಾಯಿತಿ ವ್ಯಾಪ್ತಿಯಲ್ಲಿದ್ದಾಗ ಚರಂಡಿ ಸ್ವಚ್ಛತೆ ಮಾಡಿ ಒಂದು ದಿನ ಬಿಟ್ಟು ತ್ಯಾಜ್ಯ ಸಾಗಿಸುತ್ತಿದ್ದರು. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಕೇಳಿದರೆ, ಇಷ್ಟಕ್ಕೆ ನಮಗೆ ಕಾಮಗಾರಿ ಅನುಮೋದನೆ ನೀಡಿದ್ದಾರೆ, ಉಳಿದ ಕಾಮಗಾರಿಗೆ ಟೆಂಡರ್ ಕರೆದ ಮೇಲೆ ಮುಂದುವರಿಸಲಾಗುವುದು ಎನ್ನುತ್ತಾರೆ. ನೀರಿನ ಘಟಕ ಬಳಕೆಗಿಲ್ಲಎಸ್.ಟಿ. ಕಾಲೋನಿಯಲ್ಲಿ ಚರಂಡಿಯ ತೊಂದರೆ ಬಹಳಷ್ಟು ಇದೆ, ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಪ್ರಯೋಜನವಿಲ್ಲ, ಚರಂಡಿ ಚಿಕ್ಕದಾಗಿ ಇರುವುದಕ್ಕೆ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತದೆ. ಹೀಗಾಗಿ ಅಕ್ಕಪಕ್ಕದ ಮನೆಗಳಲ್ಲಿ ಜಗಳ, ಗಲಾಟೆ ನಡೆಯುತ್ತದೆ, ಆದ್ದರಿಂದ ಅರ್ಧಕ್ಕೆ ನಿಂತಿರುವ ಚರಂಡಿ ಕಾಮಗಾರಿ ಮೊದಲು ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಪಂ ವ್ಯಾಪ್ತಿಗೆ ಸೇರಿಸಿ
ಈ ಹಿಂದೆ ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಿದ್ದ ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಸೇರಿದ ಬಳಿಕ ಸಮಸ್ಯೆಗಳು ಹೆಚ್ಚಾಗಿವೆ. ಗ್ರಾಮಕ್ಕೆ ಸೌಲಭ್ಯಗಳನ್ನು ಕಲ್ಪಿಸಿ ಇಲ್ಲವೇ ಗ್ರಾಮವನ್ನು ಪಂಚಾಯಿತಿಗೆ ಸೇರಿಸಿ ಎಂದು ಒತ್ತಾಯಿಸಿದ್ದಾರೆ.