ಸಾಣೇಹಳ್ಳಿಯಲ್ಲಿ ಪ್ರಾರಂಭಗೊಂಡ ಬೇಸಿಕೆ ಶಿಬಿರವನ್ನು ಮಕ್ಕಳ ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಪಂಡಿತಾರಾಧ್ಯ ಸ್ವಾಮೀಜಿ ಚಾಲನೆ ನಿಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬೆಳೆಸಲು ರಂಗಶಿಬಿರಗಳು ಅವಶ್ಯಕ. ಶಿಬಿರವು ಕೇವಲ ಕಲೆಯ ಕಲಿಕೆಯಲ್ಲ ಬದಲಾಗಿ ಜೀವನದ ಶಿಸ್ತನ್ನು ರೂಢಿಸಿಕೊಳ್ಳುವ ವೇದಿಕೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ರಂಗಶಾಲೆಯ ಆವರಣದಲ್ಲಿರುವ ಲತಾ ಮಂಟಪದಲ್ಲಿ ನಡೆದ ಮಕ್ಕಳ ಹಬ್ಬ ಬೇಸಿಗೆ ಶಿಬಿರ-26ರ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಕೇವಲ ಪಠ್ಯದ ಶಿಕ್ಷಣ ನೀಡಿದರೆ ಸಾಲದು ಬದಲಾಗಿ ಅವರನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸುವ ಶಿಕ್ಷಣದ ಅಗತ್ಯವಿದೆ. ಶಿಬಿರವು ಒಂದು ಹಬ್ಬದ ಸಂಭ್ರಮದಂತೆ ಇರಬೇಕು. 15 ದಿನಗಳ ಶಿಬಿರದಲ್ಲಿ ಇಂಗ್ಲಿಷ್, ಕನ್ನಡ, ಗಣಿತದಂತಹ ಪಠ್ಯ ವಿಷಯಗಳ ಬದಲಾಗಿ, ಮನುಷ್ಯ ಮನುಷ್ಯನಾಗಿ ಹೇಗೆ ಬಾಳಬೇಕು ಮತ್ತು ನಡವಳಿಕೆಯಲ್ಲಿ ಬದಲಾವಣೆ ತರುವುದು ಹೇಗೆ ಎಂಬುದನ್ನು ಕಲಿಸಿಕೊಡಲಾಗುವುದು ಎಂದರು.

ಮಕ್ಕಳು ಕೇವಲ ಅಂಕಗಳ ಬೆನ್ನತ್ತದೆ ಪ್ರಕೃತಿಯನ್ನು ಪ್ರೀತಿಸುವ, ಸತ್ಯವನ್ನೇ ನುಡಿಯುವ ಮತ್ತು ಶ್ರಮಜೀವಿಗಳಾಗಿ ಬೆಳೆಯಬೇಕು. ಇಂದಿನ ಮಕ್ಕಳು ಮೊಬೈಲ್ ಮತ್ತು ಟಿವಿಯ ದಾಸರಾಗುತ್ತಿದ್ದಾರೆ. ಮೊಬೈಲ್ ಮನುಷ್ಯನ ತಲೆ ತಗ್ಗಿಸುವಂತೆ ಮಾಡಿದರೆ, ಶಿಬಿರವು ತಲೆ ಎತ್ತಿ ಬಾಳುವುದನ್ನು ಕಲಿಸುತ್ತದೆ. ಶಿಬಿರದ ಅವಧಿಯಲ್ಲಿ ಮಕ್ಕಳು ಮೊಬೈಲ್ ಮತ್ತು ಟಿವಿ ಮಾಯಾಲೋಕದಿಂದ ದೂರವಿರುವುದು ಒಂದು ದೊಡ್ಡ ಸಾಧನೆಯಾಗಿದೆ. ಮನೆಯಲ್ಲಿ ತಂದೆ-ತಾಯಿಯ ಅವಲಂಬನೆಯಲ್ಲಿರುವ ಮಕ್ಕಳು, ಇಲ್ಲಿ ತಮ್ಮ ಬಟ್ಟೆಗಳನ್ನು ತಾವೇ ಒಗೆಯುವುದು, ನಿಗದಿತ ಸಮಯಕ್ಕೆ ಊಟ ಮಾಡುವುದು ಮತ್ತು ಸ್ವಂತ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಮೂಲಕ ಸ್ವಾವಲಂಬನೆಯ ಪಾಠ ಇಲ್ಲಿ ಕಲಿಯಲಿದ್ದೀರಿ ಎಂದರು.

ಅಮೆರಿಕ, ಇಸ್ರೇಲ್ ಮತ್ತು ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳ ಉದಾಹರಣೆ ನೀಡಿ ನೈತಿಕತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಕೊರತೆಯಿಂದಾಗಿ ಇಂತಹ ಅಹಿತಕರ ಘಟನೆಗಳು ಸಂಭವಿಸುತ್ತಿವೆ. ಮಕ್ಕಳಲ್ಲಿ ರಾಕ್ಷಸತ್ವವನ್ನು ಹೋಗಲಾಡಿಸಿ ಮನುಷ್ಯತ್ವವನ್ನು ಬೆಳೆಸುವುದೇ ಈ ಶಿಬಿರದ ಮುಖ್ಯ ಉದ್ದೇಶ. ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ಗೀತೆಗಳ ಪ್ರಭಾವಕ್ಕೆ ಒಳಗಾಗುತ್ತಿರುವ ಮಕ್ಕಳಿಗೆ ವಚನ ಸಾಹಿತ್ಯದ ಪರಿಚಯ ಮಾಡಿಕೊಡುವ ಅಗತ್ಯವಿದೆ. 15 ದಿನಗಳ ಈ ಶಿಬಿರದಲ್ಲಿ ಮಕ್ಕಳು ಕನಿಷ್ಠ 15 ವಚನಗಳನ್ನು ಕಲಿಯುವುದರ ಜೊತೆಗೆ ಚಿತ್ರಕಲೆ, ಮಣ್ಣಿನ ಕಲೆ, ನಾಟಕ, ನೃತ್ಯದ ಕಲೆ ಹಾಗೂ ಪ್ರಕೃತಿಯನ್ನು ಗುರುತಿಸುವ ಹೀಗೆ ಹಲವಾರು ಕಲೆಗಳನ್ನು ಅಭ್ಯಾಸ ಮಾಡುವುದರ ಜೊತೆಗೆ ತಮ್ಮ ವ್ಯಕ್ತಿತ್ವ ವಿಕಾಸಗೊಳಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಎಸ್.ರೇವಣಸಿದ್ಧಯ್ಯ, ಶಿಬಿರದ ನಿರ್ದೇಶಕ ರಾಘವೇಂದ್ರ ಪುರಪ್ಪ ಮನೆ ಮಾತನಾಡಿದರು.

ವೇದಿಕೆಯಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ, ಹನುಮಂತಪ್ಪ, ಮರಿಯಮ್ಮ, ರಮೇಶ ಕಾವ, ಶ್ವೇತ ಕಾವ ಹಾಗೂ ರಂಗಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಬಿರದ ಆರಂಭದಲ್ಲಿ ನಾಗರಾಜ್ ಹಾಗೂ ಶರಣ್ ವಚನಗೀತೆಗಳನ್ನು ಹಾಡಿದರು. ಸಂಗೀತ ಬಿಡೆ ಸ್ವಾಗತಿಸಿ ನಿರೂಪಿಸಿದರು. ರಾಜು ವಂದಿಸಿದರು. ಶಿಬಿರದಲ್ಲಿ ನೂರಾರು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.