ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ರಂಗಭೂಮಿಯ ಪ್ರತಿಷ್ಠಿತ ಸಂಸ್ಥೆ ರಂಗಾಯಣ ಆಯೋಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಗುರುವಾರ ಸಂಭ್ರಮದ ಚಾಲನೆ ದೊರೆಯಿತು.ಇವ ನಮ್ಮವ ಇವ ನಮ್ಮವ ಆಶಯದೊಡನೆ ಆಯೋಜಿಸಿರುವ ಬಹುರೂಪಿಗೆ ಕವಿ ಜಯಂತಿ ಕಾಯ್ಕಿಣಿ ಅವರು ವೇದಿಕೆಯಲ್ಲಿ ನಿರ್ಮಿಸಿದ ಅನುಭವ ಮಂಟಪದ ಪರದೆ ತೆರೆದು ಉದ್ಘಾಟಿಸಿದರು. ಆ ಮೂಲಕ ರಂಗಾಯಣದ ವನರಂಗದಲ್ಲಿ ನೆರೆದಿದ್ದ ನೂರಾರು ಮಂದಿಯ ಸಮ್ಮುಖದಲ್ಲಿ ಬಹುರೂಪಿಯು ರಂಗ ಕಣ್ಣುಗಳೆಡೆಗೆ ತೆರೆದುಕೊಂಡಿತು.
ಈ ವೇಳೆ ಪರದೆಯೊಳಗಿಂದ ಹೊರ ಬಂದ ಬಸವಣ್ಣನವರ ವೇಷಧಾರಿ ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ... ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ... ಎಂಬ ವಚನ ಹೇಳುತ್ತಾ ಗಣ್ಯರು ಮತ್ತು ಸಾರ್ವಜನಿಕರಿಗೆ ವಚನಗಳ ಪುಸ್ತಕ ಹಂಚಿದರು.ಅವರ ಹಿಂದೆ ಅನೇಕ ಕಾಯಕ ಶರಣರ ವೇಷಧಾರಿಗಳು ಹೊರ ಬಂದು ವಚನ ಹೇಳಿದರು. ಈ ಮಧ್ಯೆ ಕಲಾವಿದರಿಂದ ಮೂಡಿಬಂದ ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಎಂಬ ಹಿನ್ನೆಲೆ ಗಾಯನದೊಂದಿಗೆ ಬಹುರೂಪಿ ರಂಗು ಪಡೆಯಿತು.
ಬಳಿಕ ಮಾತನಾಡಿದ ಜಯಂತ ಕಾಯ್ಕಿಣಿ ಅವರು, ಮನುಷ್ಯನಿಗೆ ಮನುಷ್ಯ ಬೇಕಾಗಿಲ್ಲದ ಈ ಕಾಲಘಟ್ಟದಲ್ಲಿ ಆತನ ಅತಃ ಸತ್ವವನ್ನು ಒರೆಗೆ ಹಚ್ಚಿ ಸಾಮಾಜಿಕವಾಗಿ ಒಳಗೊಳ್ಳುವಂತೆ ಮಾಡುವ ಜವಾಬ್ದಾರಿ ಕಲೆಗೆ ಇದೆ ಎಂದರು.ವಾಟ್ಸ್‌ಆಪ್ ಸ್ಟೇಟಸ್ ಗೆ ಲೈಕ್ ಕೊಡುವವರು, ಶುಭಾಶಯ ಹೇಳುವವರು ಮುಖಾಮುಖಿಯಾದಾಗ ಮುಕ್ತ ಮನಸ್ಸಿನಿಂದ ಮಾತನಾಡುವುದು ಇರಲಿ ಒಂದು ಸಣ್ಣ ಕಿರುನಗೆಯನ್ನೂ ಸೂಚಿಸುವುದಿಲ್ಲ. ಆಗದರೇ ನಮ್ಮವರೂ ಯಾರು? ನಮ್ಮನ್ನು ಉಜ್ಜಿವನಗೊಳಿಸುವಂತಹ ರಂಗ ಚಟುವಟಿಕೆಗಳೇ ನಮ್ಮವರು ಎಂದು ಅವರು ವಿಶ್ಲೇಷಿಸಿದರು.
ಮಮತೆ- ಸಮತೆಗಿಂತ ದೊಡ್ಡ ಆಧ್ಯಾತ್ಮವಿಲ್ಲ. ಎಲ್ಲರನ್ನೂ ಕಾರುಣ್ಯದಿಂದ ಕಾಣುತ್ತಾ, ಸಮಾನಾಗಿ ನೋಡಬೇಕು. ನಮ್ಮ ಜೀವನದ ವಿಕಾಸ ಪಥದಲ್ಲಿ ಹಾವು- ಏಣಿ ಆಟವಾಡಬೇಕು. ಮೂಢನಂಬಿಕೆ, ಅಸಮಾನತೆ, ಅನಕ್ಷರತೆ ಹಾವುಗಳಿದ್ದಂತೆ. ಇದೇ ಹಾದಿಯಲ್ಲಿ ಶರಣರು, ದಾರ್ಶನಿಕರು, ದಾಸರು, ಸಂತರು ನಮಗೆ ಏಣಿಗಳಾಗಿ ಮೇಲೆ ಹತ್ತಲು ಸಹಕಾರಿಯಾದರು. ಆದರೆ ಗುರಿ ಮುಟ್ಟಲು ಇನ್ನೇನು ಕೆಲವು ಮನೆ ಇದೆ ಎನ್ನುವಾಗ ದೊಡ್ಡ ಹಾವಿನ ಕೈಯಲ್ಲಿ ಕಚ್ಚಿಸಿಕೊಂಡರೇ ನೇರ ಶಿಲಾಯುಗಕ್ಕೆ ಹಿಂದಿರುಗಬೇಕಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಆಟವಾಡಬೇಕಾಗುತ್ತದೆ ಎಂದರು.ಸಮಾಜ ಎಂಬುದು ಒಂದೇ ಕಂಬದ ಮೇಲೆ ನಿಂತ ಡೇರೆ ಅಲ್ಲ. ಅದು ಸಾವಿರ ಕಂಬಗಳ ಚಪ್ಪರ. ಇದರ ಆತ್ಮಬಲ ಹೆಚ್ಚಿಸುವ ಕಲಾಪ ರಂಗಭೂಮಿ. ಅಂತರ್ಜಾಲ ಬಳಕೆಯಿಂದ ಮನುಷ್ಯ ಸಂಬಂಧ ಕೊಂಡಿಯನ್ನು ಕಳೆದುಕೊಳ್ಳುತ್ತಿದೆ. ನಾವಾಗಿಯೇ ಹಿಂದೆ ಇಳಿಯುವುದು ಬೇಡ. ಮಮತೆ ಮತ್ತು ಸಮತೆಗೆ ಮಿಗಿಲಾದ ಯಾವುದೇ ಅಧ್ಯಾತ್ಮವಿಲ್ಲ ಎಂದು ಹೇಳಿದರು.
ಪ್ರಪಂಚದಲ್ಲಿ ಇರುವ ಎಲ್ಲರಿಗೂ ಒಂದೇ ಸಮಾನದ ಸವಲತ್ತುಗಳು ಸಧ್ಯಕ್ಕೆ ಸಿಗುವುದಿಲ್ಲ. ಆದರೆ, ಈ ಆಶಯ ಈಡೇರಲು ಕಲೆ ಜವಾಬ್ದಾರಿ ಹೆಚ್ಚಿದ್ದು, ಸಾಮಾಜಿಕ ಋಣದ ಆಚರಣೆ ಕಲೆಯಾಗಿದೆ ಎಂದರು.ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ಸಮಾಜದಲ್ಲಿ ಬೇರೆರುವ ಜಾತಿಯತೆ, ಅಂಧ ಶ್ರದ್ಧೆ, ಲಿಂಗ ತಾರತಮ್ಯವನ್ನು 12ನೇ ಶತಮಾನದ ಶರಣರು ತೊಲಗಿಸಲು ಪ್ರಯತ್ನಿಸಿದರು. ಶರಣರ ಆಶಯವೇ ರಂಗಭೂಮಿ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಶಕ್ತಿ ರಂಗಭೂಮಿಗಿದೆ ಎಂದು ಹೇಳಿದರು.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಂಚಾಲಕ ಪ್ರೊ.ಎಚ್.ಎಸ್. ಉಮೇಶ್ ಮಾತನಾಡಿ, ರಂಗಭೂಮಿ ಎಲ್ಲರಿಗಾಗಿ, ಎಲ್ಲರೊಂದಿಗೆ ಬೆರೆಯುವ ಸಮಾಜ ಮುಖಿಯಾದ ಕಲೆ. 12ನೇ ಶತಮಾನದವರೆಗೂ ಸಮಾಜವು ಮೇಲ್ವರ್ಗದ ಪರವಾಗಿತ್ತು. ಶರಣರ ಅನುಭವ ಮಂಟಪ ಆರಂಭವಾದ ನಂತರ ಜನ ಸಾಮಾನ್ಯರ ಪರವಾಯಿತು. ಮೇಲು-ಕೀಳು ಎಂಬ ತಾರತಮ್ಯ ನಾಶವಾಗಿತ್ತು. ಇದೆ ಕಾರ್ಯವನ್ನು ರಂಗಭೂಮಿ ಮತ್ತು ಕಲಾಪ್ರಕಾರಗಳು ಮಾಡಬೇಕಿದೆ ಎಂದರು.ಬಹುರೂಪಿ ನಾಟಕೋತ್ಸವ ಸಂಚಿಕೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್ ಬಿಡುಗಡೆಗೊಳಿಸಿದರು. ಶಾಸಕ ಕೆ. ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಇದ್ದರು.