ಕುಡಿವ ನೀರಿನ ಸಮಸ್ಯೆ ನಿವಾರಣೆ ಮುಂಜಾಗ್ರತಾ ಕ್ರಮ: ಇಒ ಜಾನಕಿರಾಮ್‌

| Published : Mar 08 2024, 01:49 AM IST

ಸಾರಾಂಶ

ಮುಂದಿನ ಆರು ತಿಂಗಳ ವರೆಗೆ ಉದ್ಬವಿಸಬಹುದಾದ ಬರಗಾಲವನ್ನು ಗಂಭೀರವಾಗಿ ಪರಿಗಣಿಸಿ ತಾಲೂಕಿನ 68 ಗ್ರಾಮಗಳ ಕುಡಿವ ನೀರು ಮತ್ತಿತರೆ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಾಪಂ ಇಒ ಜಾನಕಿರಾಮ್‌ ಅವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ಮುಂದಿನ ಆರು ತಿಂಗಳ ವರೆಗೆ ಉದ್ಬವಿಸಬಹುದಾದ ಬರಗಾಲವನ್ನು ಗಂಭೀರವಾಗಿ ಪರಿಗಣಿಸಿ ತಾಲೂಕಿನ 68 ಗ್ರಾಮಗಳ ಕುಡಿವ ನೀರು ಮತ್ತಿತರೆ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಾಪಂ ಇಒ ಜಾನಕಿರಾಮ್‌ ಅವರು ತಿಳಿಸಿದ್ದಾರೆ.ಈ ಕುರಿತು ತಾಪಂನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪಾವಗಡ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಈ ಸಂಬಂಧ ಬರ ನಿರ್ವಹಣೆಗೆ ತಾಲೂಕು ಆಡಳಿತ ಹಾಗೂ ಜಿಪಂ ವತಿಯಿಂದ ಅಗತ್ಯ ಕ್ರಮ ಕೈಗೊಂಡಿದ್ದು, ಮುಂದಿನ ಆರು ತಿಂಗಳಿಗೆ ತಾಲೂಕಿನ 68 ಗ್ರಾಮಗಳ ಕುಡಿವ ನೀರಿನ ಸಮಸ್ಯೆ ಉದ್ಬವವಾಗಲಿದೆ. ಮಳೆಯ ಪ್ರಮಾಣ ಕಡಿಮೆ ಹಿನ್ನೆಲೆ ಕುಡಿವ ನೀರಿನ ಸಮಸ್ಯೆ ಎದುರಾಗಲಿದ್ದು, ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸದ್ಯದ ಬರ ಸ್ಥಿತಿ ನಿರ್ವಹಣೆಗೆ ಇಲ್ಲಿನ ಜಿಪಂ ಕುಡಿವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಚೇರಿಗೆ 75 ಲಕ್ಷ ರು. ಜಿಲ್ಲಾಡಳಿತ ಅನುದಾನ ಬಿಡುಗಡೆಗೊಳಿಸಿರುವ ಮಾಹಿತಿ ಇದೆ ಎಂದರು.

ಹೊಸ ಕೊಳವೆಬಾವಿ ಕೊರೆಸುವುದು. ಲಭ್ಯವಿರುವ ಸ್ಥಳದಿಂದ ಪೈಪ್‌ಲೈನ್‌ ಮೂಲಕ ವಾಟರ್‌ ಟ್ಯಾಂಕ್‌ಗಳಿಗೆ ಕುಡಿವ ನೀರು ಪೂರೈಕೆ ಹಾಗೂ ತೀರ ಅಭಾವ ವಿರುವ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಉಚಿತ ಕುಡಿವ ನೀರು ಸರಬರಾಜಿಗೆ ಕ್ರಮವಹಿಸಲಾಗಿದೆ. ಕುಡಿವ ನೀರಿಗೆ ಎಲ್ಲಾ ರೀತಿಯ ಅಗತ್ಯ ಕ್ರಮ ವಹಿಸುವಂತೆ ಸಂಬಂಧಪಟ್ಟ ಗ್ರಾಪಂ ಪಿಡಿಒ ಹಾಗೂ ಇತರೆ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಆದೇಶಿಸಲಾಗಿದೆ.

ಜಾನುವಾರುಗಳ ಮೇವಿನ ಸಮಸ್ಯೆ ನಿವಾರಣೆಗೆ ಈಗಾಗಲೇ ಪಶುಆರೋಗ್ಯ ಇಲಾಖೆಯಿಂದ ಅಗತ್ಯ ಕ್ರಮವಹಿಸಿದ್ದು ಗ್ರಾಪಂ ವ್ಯಾಪ್ತಿಯಲ್ಲಿ ಮೇವು ಕಿಟ್‌ ವಿತರಣೆಗೆ ಸಿದ್ಧತೆ ನೀರಿನ ತೊಟ್ಟಿಗಳನ್ನು ಶುದ್ಧಗೊಳಿಸಿ ಜಾನುವಾರುಗಳಿಗೆ ಕುಡಿವ ನೀರು ಪೂರೈಕೆಗೆ ಕ್ರಮ ವಹಿಸಲಾಗಿದೆ.

ಸರ್ಕಾರ ಹಾಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವಹಿಸುವ ಮೂಲಕ ಬರ ನಿರ್ವಹಣೆಗೆ ಎಲ್ಲಾ ರೀತಿಯ ಸಿದ್ಧತೆ ಕೈಗೊಂಡಿದೆ. ನರೇಗಾ ಯೋಜನೆ ಹಾಗೂ ಕೂಲಿ ಹಣ ಹೆಚ್ಚಳ ಸೇರಿದಂತೆ ರೈತರ ಜಮೀನುಗಳ ಪ್ರಗತಿ ಇನ್ನಿತರೆ ಹಲವಾರು ಕಾರ್ಯಕ್ರಮ ರೂಪಿಸಿರುವುದಾಗಿ ಅವರು ಹೇಳಿದರು.