ನಾಟಕಕ್ಕಿದೆ ಸಮಾಜ ಜಾಗೃತಿ ಶಕ್ತಿ: ಅಕ್ಷರ ಕೆ.ವಿ. ಹೆಗ್ಗೋಡು

| Published : Dec 23 2024, 01:04 AM IST

ನಾಟಕಕ್ಕಿದೆ ಸಮಾಜ ಜಾಗೃತಿ ಶಕ್ತಿ: ಅಕ್ಷರ ಕೆ.ವಿ. ಹೆಗ್ಗೋಡು
Share this Article
  • FB
  • TW
  • Linkdin
  • Email

ಸಾರಾಂಶ

ಹೆಗ್ಗೋಡಿನ ನೀನಾಸಂ ಸಂಸ್ಥೆಗೆ ೭೫ ವರ್ಷ ಪೂರ್ಣಗೊಳ್ಳುತ್ತಿದೆ. ನಾಟಕ ತರಬೇತಿಯಲ್ಲದೇ ನೃತ್ಯ, ಸಂಗೀತ, ಸಾಹಿತ್ಯ, ಚಿತ್ರಕಲೆ ಮುಂತಾಗಿ ರಂಗಭೂಮಿಗೆ ಸಂಬಂಧಿಸಿದ ತರಬೇತಿಯ ಒಂದು ವರ್ಷದ ಕೋರ್ಸ್‌ ಅನ್ನು ನಡೆಸುತ್ತ ಬಂದಿದೆ.

ಸಿದ್ದಾಪುರ: ನಾಟಕಗಳಿಗೆ ಮನರಂಜನೆ ಮಾತ್ರ ಉದ್ದೇಶವಲ್ಲ. ಮನರಂಜನೆಗೆ ಕೆಟ್ಟ ಅರ್ಥ ಬರುವಂಥ ಸ್ಥಿತಿಯಿದೆ. ನಾಟಕದ ಮೂಲಕ ಸಮಾಜದ ಆಗುಹೋಗುಗಳ ಅರಿವು ಮೂಡಿಸುವ ಜತೆಗೆ ಮನಸ್ಸನ್ನು ವಿಕಾಸಗೊಳಿಸುವ, ಪ್ರೇಕ್ಷಕರಿಗೆ ಖುಷಿ ತರುವ ಮನರಂಜನೆಯೂ ಇರಬೇಕು ಎಂದು ಪ್ರಸಿದ್ಧ ರಂಗನಿರ್ದೇಶಕ ಅಕ್ಷರ ಕೆ.ವಿ. ಹೆಗ್ಗೋಡು ತಿಳಿಸಿದರು.

ಒಡ್ಡೋಲಗ ಹಿತ್ಲಕೈ ಹಾಗೂ ಸಂಸ್ಕೃತಿ ಸಂಪದದ ಸಹಯೋಗದಲ್ಲಿ ಪಟ್ಟಣದ ಶಂಕರಮಠದಲ್ಲಿ ಆಯೋಜಿಸಿದ್ದ ಎರಡು ದಿನಗಳ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಹೆಗ್ಗೋಡಿನ ನೀನಾಸಂ ಸಂಸ್ಥೆಗೆ ೭೫ ವರ್ಷ ಪೂರ್ಣಗೊಳ್ಳುತ್ತಿದೆ. ನಾಟಕ ತರಬೇತಿಯಲ್ಲದೇ ನೃತ್ಯ, ಸಂಗೀತ, ಸಾಹಿತ್ಯ, ಚಿತ್ರಕಲೆ ಮುಂತಾಗಿ ರಂಗಭೂಮಿಗೆ ಸಂಬಂಧಿಸಿದ ತರಬೇತಿಯ ಒಂದು ವರ್ಷದ ಕೋರ್ಸ್‌ ಅನ್ನು ನಡೆಸುತ್ತ ಬಂದಿದೆ. ಕಳೆದ ೪೦ ವರ್ಷಗಳಿಂದ ನೀನಾಸಂ ತಿರುಗಾಟದ ನಾಟಕಗಳು ರಾಜ್ಯದೆಲ್ಲೆಡೆ ಪ್ರದರ್ಶನಗೊಳ್ಳುತ್ತಿವೆ. ಈ ವರ್ಷ ಮಾಲತೀ ಮಾಧವ ಹಾಗೂ ಅಂಕದ ಪರದೆ ನಾಟಕಗಳು ರಾಜ್ಯದ ೮೦ಕ್ಕೂ ಹೆಚ್ಚು ಕಡೆ ಪ್ರದರ್ಶನಗೊಳ್ಳುತ್ತಿದೆ. ನಗರಗಳಿಗಿಂತ ಸಣ್ಣ ಊರುಗಳಲ್ಲಿ ಪ್ರದರ್ಶನ ನೀಡುವುದು ನಮಗೆ ಇಷ್ಟದ ಸಂಗತಿ ಎಂದರು.

೮ನೇ ಶತಮಾನದಲ್ಲಿ ಭವಭೂತಿ ಸಂಸ್ಕೃತದಲ್ಲಿ ಬರೆದ ನಾಟಕ ಮಾಲತೀ ಮಾಧವ. ಮೂಲ ಮರಾಠಿಯಲ್ಲಿ ಅಭಿರಾಮ ಭಡ್ಕಮಕರ್ ಬರೆದ ಜಯಂತ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ ಅಂಕದ ಪರದೆ ವಯಸ್ಸಾದವರ ಬದುಕಿನ ಕಥೆಯನ್ನು ನಿರೂಪಿಸುತ್ತದೆ. ವೃದ್ಧಾಶ್ರಮ ಮತ್ತು ನಾಟಕಕ್ಕೆ ಇರುವ ಸಂಬಂಧವನ್ನು ಇದು ನಿರೂಪಿಸುತ್ತದೆ ಎಂದರು.ನಾಟಕಕಾರ ಎಸ್.ವಿ. ಹೆಗಡೆ ಮಗೇಗಾರ ಮಾತನಾಡಿ, ನೀನಾಸಂ ರಂಗಭೂಮಿಯ ಶಿಸ್ತು ಕಾಪಾಡಿಕೊಂಡು ಬಂದಿದೆ. ಸ್ವಾಯತ್ತ ವಿಶ್ಚವಿದ್ಯಾಲಯದಂಥ ಮಹತ್ವ ಅದಕ್ಕಿದೆ. ಸುಸಂಸ್ಕೃತ ಸಮುದಾಯ ಮತ್ತು ಸಾಂಸ್ಕೃತಿಕ ಶಕ್ತಿ ಹೆಚ್ಚಿಸುವಲ್ಲಿ ಪ್ರೇಕ್ಷಕರ ಜವಾಬ್ದಾರಿಯೂ ಇದೆ ಎಂದರು.ಒಡ್ಡೋಲಗ ಸಂಸ್ಥೆಯ ಗಣಪತಿ ಹಿತ್ಲಕೈ ಸ್ವಾಗತಿಸಿದರು. ಮೊದಲ ದಿನ ಭವಭೂತಿ ರಚನೆಯ ಕೆ.ವಿ. ಅಕ್ಷರ ಕನ್ನಡರೂಪ, ನಿರ್ದೇಶನದ, ವಿದ್ಯಾ ಹೆಗಡೆ, ಭಾರ್ಗವ ಕೆ.ಎನ್., ಎಂ.ಎಚ್. ಗಣೇಶ ಸಂಗೀತ ವಿನ್ಯಾಸದ ಮಾಲತೀ ಮಾಧವ ನಾಟಕ, ಎರಡನೆಯ ದಿನ ಅಭಿರಾಮ ಭಡ್ಕಮಕರ್ ಮರಾಠಿಮೂಲದ, ಜಯಂತ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ, ವಿದ್ಯಾನಿಧಿ ವನಾರಸೆ(ಪ್ರಸಾದ್) ನಿರ್ದೇಶನದ ಅಂಕದ ಪರದೆ ನಾಟಕ ಪ್ರದರ್ಶನಗೊಂಡಿತು.ತಾಲೂಕು ಸೌಧದಲ್ಲಿ ಅಧಿಕಾರಿ, ಸಿಬ್ಬಂದಿಯಿಂದ ಸ್ವಚ್ಛತಾ ಶ್ರಮದಾನ

ಕುಮಟಾ: ಇಲ್ಲಿನ ಮೂರೂರು ರಸ್ತೆಯಲ್ಲಿರುವ ತಾಲೂಕು ಸೌಧದಲ್ಲಿ ಭಾನುವಾರ ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಅಶೋಕ ಭಟ್ಟ ಹಾಗೂ ಗ್ರೇಡ್ ೨ ತಹಸೀಲ್ದಾರ್ ಸತೀಶ ಗೌಡ ಸಹಿತ ಎಲ್ಲ ವಿಭಾಗದ ಅಧಿಕಾರಿ, ಸಿಬ್ಬಂದಿ ಸ್ವತಃ ಕಸ ಗುಡಿಸಿ ಸ್ವಚ್ಛತಾ ಶ್ರಮದಾನ ಮಾಡಿದರು.ನಿಗದಿತ ಸ್ವಚ್ಛತಾ ಸಿಬ್ಬಂದಿ ಇಲ್ಲದಿರುವುದರಿಂದ ತಾಲೂಕು ಸೌಧ ಉದ್ಘಾಟನೆಗೊಂಡ ದಿನದಿಂದಲೂ ಸ್ವಚ್ಛತೆಯ ಕಾರ್ಯ ಸಮರ್ಪಕವಾಗಿ ಸಾಧ್ಯವಿಲ್ಲದಂತಾಗಿದೆ. ಮೂರು ಮಹಡಿಗಳ ವಿಶಾಲವಾದ ಕಟ್ಟಡದ ಜತೆಗೆ ನೆಲಅಂತಸ್ತಿನಲ್ಲಿರುವ ಪಾರ್ಕಿಂಗ್ ಕ್ಷೇತ್ರವಂತೂ ಕೊಟ್ಟಿಗೆಯಂತೆ ಅಸಹ್ಯವಾಗಿರುತ್ತಿತ್ತು.

ಕಟ್ಟಡದ ಎಷ್ಟೋ ಕೊಠಡಿಗಳನ್ನು ಒಮ್ಮೆಯೂ ಗುಡಿಸಿದ ಲಕ್ಷಣ ಇಲ್ಲದಂತಾಗಿತ್ತು. ಹೀಗಾಗಿ ಸಾರ್ವಜನಿಕರ ನಿರಂತರ ದೂರಿಗೆ ಬೇಸತ್ತು ಅನಿವಾರ್ಯವಾಗಿ ತಾಲೂಕು ಸೌಧದ ಅಧಿಕಾರಿ- ಸಿಬ್ಬಂದಿಯೇ ಸ್ವಚ್ಛತಾ ಶ್ರಮದಾನಕ್ಕೆ ಸಂಕಲ್ಪ ಮಾಡಿದ್ದರು. ಅದರಂತೆ ಎಲ್ಲರೂ ಸೇರಿ ಭಾನುವಾರದ ರಜಾ ದಿನವೇ ತಾಲೂಕು ಸೌಧದ ಮೂಲೆಮೂಲೆಯನ್ನೂ ಸ್ವಚ್ಛಗೊಳಿಸಿದರು.ಗ್ರೇಡ್ ೨ ತಹಸೀಲ್ದಾರ್ ಸತೀಶ ಗೌಡ ತಂಡದವರು ನೆಲಅಂತಸ್ತು ಹಾಗೂ ಕಟ್ಟಡದ ಸುತ್ತಲೂ ಸ್ವಚ್ಛಗೊಳಿಸಿದರೆ, ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಅಶೋಕ ಭಟ್ಟ ಅವರ ತಂಡ ೨- ೩ನೇ ಮಹಡಿ ಸ್ವಚ್ಛಗೊಳಿಸಿದರು. ಈ ಮೂಲಕ ನಮ್ಮ ಕಚೇರಿ ನಮ್ಮ ಹೆಮ್ಮೆ ಎಂಬ ಅಭಿಮಾನವನ್ನು ಪ್ರದರ್ಶಿಸಿದರು.