ಮೊಬೈಲ್, ಧಾರಾವಾಹಿಗಳ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಟಕಗಳ ಪ್ರದರ್ಶನ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ
ಹರಪನಹಳ್ಳಿ: ಮೊಬೈಲ್, ಧಾರಾವಾಹಿಗಳ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಟಕಗಳ ಪ್ರದರ್ಶನ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ವಿ. ಅಂಜಿನಪ್ಪ ತಿಳಿಸಿದ್ದಾರೆ.
ನಗರದ ಬಸಮ್ಮ ಕಲಾಮಂದಿರದಲ್ಲಿ ಆಯೋಜಿಸಿದ್ದ ಅಕ್ಷತಾ ಪಾಂಡವಪುರ ರಚಿಸಿ ನಟಿಸಿದ ‘ಲೀಕ್ ಔಟ್’ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜಾತಿ ವ್ಯವಸ್ಥೆ, ದ್ವೇಷ, ಅಸೂಯೆ ಇಂದಿಗೂ ಸಮಾಜದಲ್ಲಿ ಕಾಣಿಸಿಕೊಳ್ಳುತ್ತಿವೆ. ಇವುಗಳನ್ನು ಹೋಗಲಾಡಿಸಲು ನಾಟಕಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ನಾಟಕಗಳು ಮಾನವನ ಬದುಕಿನಲ್ಲಿ ಚಿಂತನೆ, ಪರಿವರ್ತನೆ ಮತ್ತು ಮೌಲ್ಯಗಳನ್ನು ಬೆಳೆಸುವ ಶಕ್ತಿ ಹೊಂದಿವೆ ಎಂದು ಅವರು ಅಭಿಪ್ರಾಯಪಟ್ಟರು.ಕನ್ನಡ ಉಪನ್ಯಾಸಕ ಎಚ್.ಮಲ್ಲಿಕಾರ್ಜುನ ಮಾತನಾಡಿ, ಅಕ್ಷತಾ ಪಾಂಡವಪುರ ಅವರ 118ನೇ ಪ್ರಯೋಗವಾದ ‘ಲೀಕ್ ಔಟ್’ ನಾಟಕವು ಪ್ರೇಕ್ಷಕರ ಮನಸೂರೆಗೊಂಡ ರೂಪಕ ನಾಟಕವಾಗಿದೆ ಎಂದು ಹೇಳಿದರು.ಹೆಣ್ಣಿನ ಬಗ್ಗೆ ಗಂಡು ತಾಳುವ ದೃಷ್ಟಿಕೋನ, ತಾಯಿಯ ಮಹತ್ವ, ತಾಯಿಯ ಪ್ರೀತಿ ಮತ್ತು ಕುಟುಂಬ ಸಂಬಂಧಗಳ ಮೌಲ್ಯವನ್ನು ಮನ ಕರಗುವಂತೆ ಹಾಗೂ ಮನಪರಿವರ್ತನೆಗೊಳ್ಳುವಂತೆ ಈ ನಾಟಕ ಚಿತ್ರಿಸುತ್ತದೆ. ಕುಟುಂಬದಲ್ಲಿ ಪ್ರತಿಯೊಬ್ಬರು ತಾಯಿ ಮತ್ತು ಮಡದಿಯನ್ನು ಪ್ರೀತಿಸಬೇಕು, ಗೌರವಿಸಬೇಕು ಎಂಬ ಸಂದೇಶದೊಂದಿಗೆ, ಇನ್ನೊಬ್ಬರ ಬದುಕಿನ ವಿಷಯಗಳನ್ನು ಅನವಶ್ಯಕವಾಗಿ ‘ಲೀಕ್ ಔಟ್’ ಮಾಡುವ ಮನಸ್ಥಿತಿಯ ಅಪಾಯವನ್ನು ನಾಟಕ ತೀಕ್ಷ್ಣವಾಗಿ ಬಿಂಬಿಸುತ್ತದೆ ಎಂದರು.
ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ನಡೆದ ಈ ಏಕಪಾತ್ರ ನಾಟಕದಲ್ಲಿ ನಗು-ನೋವು, ಕಣ್ಣೀರು-ಚಿಂತನೆಗಳ ಸಂಗಮ ಕಂಡುಬಂತು. ಸಮಾಜದಲ್ಲಿ ಮಹಿಳೆಗೆ ನಾವು ನೀಡುವ ಗೌರವ, ಕುಟುಂಬಕ್ಕೆ ಮೀಸಲಿಡುವ ಸಮಯ ಹಾಗೂ ಪರರ ಬದುಕಿನಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವ ನಮ್ಮ ಮನೋಭಾವವನ್ನು ಕಲಾವಿದೆ ಹೃದಯಸ್ಪರ್ಶಿಯಾಗಿ ಅನಾವರಣಗೊಳಿಸಿದರು. ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯ ಅಧ್ಯಕ್ಷೆ ಸಪ್ನ ಮಲ್ಲಿಕಾರ್ಜುನ ಕಲಾವಿದರಿಗೆ ಸನ್ಮಾನಿಸಿದರು.ಹಾಸ್ಟೆಲ್ ಮೇಲ್ವಿಚಾರಕ ಬಿ.ಎಚ್. ಚಂದ್ರಪ್ಪ, ಜೆಸಿಐ ಅಧ್ಯಕ್ಷೆ ಅಮೃತಾ ಪ್ರಶಾಂತ್, ಸಪ್ನ ಮಲ್ಲಿಕಾರ್ಜುನ, ಹೇಮಣ್ಣ ಮೋರಿಗೆರೆ, ಅಕ್ಕಿ ಬಸಣ್ಣ, ಕಲಾವಿದರಾದ ಅರುಣ್, ನವ್ಯ, ರಮೇಶ್ ಕಲ್ಲೂರು, ಸೌಭಾಗ್ಯ, ಜೆಎಸಿ ಇರ್ಷಾದ್ ಬಾಷಾ, ಶಿಕ್ಷಕರಾದ ಸಿ.ಗಂಗಾಧರ್ ಮತ್ತು ಶೇಖರ್ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.