ನಾಟಕಗಳು ನಮ್ಮ ಸಂಸ್ಕೃತಿ, ಪರಂಪರೆಯ ಒಂದು ಭಾಗ. ನಮ್ಮ ಜೀವನದ ನಿತ್ಯ ಬದುಕಿನ ನೈಜ ಘಟನೆಗಳೇ ನಾಟಕ ರೂಪದಲ್ಲಿ ಪ್ರದರ್ಶನವಾಗಿ ಸಮಾಜ ಪರಿವರ್ತನೆಗೆ ಸಹಕಾರಿಗಳಾಗುತ್ತವೆ. ಇಂದು ನಾಟಕಗಳು ಜೀವಂತವಾಗಿರಲು ವೃತ್ತಿ ರಂಗಭೂಮಿಯೇ ಕಾರಣ.

ಧಾರವಾಡ:

ನಾಟಕಗಳು ಮಾನಸಿಕ ಸಮತೋಲನ ಉಂಟು ಮಾಡುವ ಜೊತೆಗೆ ಸಮಾಜದಲ್ಲಿ ಬದುಕುವ ಕಲೆ ಕಲಿಸುತ್ತವೆ ಎಂದಿರುವ ರಂಗ ಕಲಾವಿದೆ ಆರತಿ ದೇವಶಿಖಾಮಣಿ, ಸಾಮಾಜಿಕ ಸಂಬಂಧ ಗಟ್ಟಿಗೊಳಿಸುವ ಪ್ರಬಲ ಮಾಧ್ಯಮಗಳೇ ನಾಟಕಗಳು ಎಂದು ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಹಸಿವು ರಷ್ಯನ್ ಸಸ್ಯವಿಜ್ಞಾನಿ ವ್ಯಾವಿಲಾವ ನಿಕೊಲಾಯ್ ಜೀವನ ಆಧಾರಿತ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾಟಕಗಳು ನಮ್ಮ ಸಂಸ್ಕೃತಿ, ಪರಂಪರೆಯ ಒಂದು ಭಾಗ. ನಮ್ಮ ಜೀವನದ ನಿತ್ಯ ಬದುಕಿನ ನೈಜ ಘಟನೆಗಳೇ ನಾಟಕ ರೂಪದಲ್ಲಿ ಪ್ರದರ್ಶನವಾಗಿ ಸಮಾಜ ಪರಿವರ್ತನೆಗೆ ಸಹಕಾರಿಗಳಾಗುತ್ತವೆ. ಇಂದು ನಾಟಕಗಳು ಜೀವಂತವಾಗಿರಲು ವೃತ್ತಿ ರಂಗಭೂಮಿಯೇ ಕಾರಣ. ಸಿನಿಮಾಕ್ಕಿಂತ ನಾಟಕಗಳೇ ಹೆಚ್ಚು ಜನಪ್ರಿಯವಾದವುಗಳು. ಇಂದಿನ ಬದಲಾದ ಸನ್ನಿವೇಷದಲ್ಲಿ ಮಕ್ಕಳಿಗೆ ರಂಗ ಶಿಕ್ಷಣ ನೀಡುವುದು ಅಗತ್ಯವಾಗಿದೆ. ನಾನು ಅನೇಕ ಹಿರಿಯ ರಂಗಕಲಾವಿದರ ಜೊತೆ ಅಭಿನಯಿಸಿದ್ದು, ನನ್ನ ಸಾಧನೆಗೆ ಆ ಹಿರಿಯ ಕಲಾವಿದರ ಶ್ರೀರಕ್ಷೆಯೇ ಕಾರಣ. ರಂಗಕಲೆ ಒಂದು ತಪಸ್ಸು ಎಂಬ ಪವಿತ್ರ ಭಾವನೆಯಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದರು.

ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಹಸಿವು ನಾಟಕ ಖ್ಯಾತ ರಷ್ಯನ್ ಸಸ್ಯವಿಜ್ಞಾನಿಯೊಬ್ಬರ ಜೀವನಾಧಾರಿತ ನಾಟಕ. ವಿಜ್ಞಾನದ ಮೂಲಕ ಜನರಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುವುದು ನಮ್ಮ ಪ್ರಯತ್ನ ಎಂದರು.

ರಂಗ ಕಲಾವಿದರಾದ ಹಾವೇರಿಯ ರಾಘವೇಂದ್ರ ಕಬಾಡಿ ಹಾಗೂ ಧಾರವಾಡದ ಮಹಾಂತೇಶ ಹವಳಣ್ಣವರ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಶಂಕರ ಕುಂಬಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಸದಾಶಿವ ಮರ್ಜಿ, ಡಾ. ಮಂಜುಳಾ ಮರ್ಜಿ, ಸಿ.ಎಸ್. ಪಾಟೀಲ ಕುಲಕರ್ಣಿ, ಭೀಮು ಖಟಾವಿ ಇದ್ದರು.