ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಇತ್ತೀಚಿನ ದಿನಮಾನಗಳಲ್ಲಿ ನಾಟಕಗಳು ನಶಿಸಿ ಹೋಗುತ್ತಿವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಕಾಡಾಧ್ಯಕ್ಷ ಪಿ. ಮರಿಸ್ವಾಮಿ ವಿಷಾದ ವ್ಯಕ್ತಪಡಿಸಿದರು.ನಗರದ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದದಲ್ಲಿ ಚೇತನ ಕಲಾವಾಹಿನಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಪೌರಾಣಿಕ ನಾಟಕೋತ್ಸವ ಮತ್ತು ರಂಗಕಲಾವಿದರಿಗೆ ಶ್ರೀ.ಕೆ.ಆರ್. ಶ್ರೀನಿವಾಸಯ್ಯ (ಸೀನಪ್ಪ) ರಂಗರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಚಾಮರಾಜನಗರ, ಮಂಡ್ಯ ಇತರೆ ಕೆಲವು ಜಿಲ್ಲೆಗಳಲ್ಲಿ ರಂಗ ಕಲಾವಿದರು ಇರುವುದರಿಂದ ಮಾತ್ರ ನಾಟಕಗಳು ಜೀವಂತವಾಗಿ ಉಳಿದುಕೊಂಡಿವೆ ಎಂದರು.ರಂಗಭೂಮಿ ಕಲಾವಿದರೇ ನಿಜವಾದ ಕಲಾವಿದರಾಗಿದ್ದಾರೆ. ಚಲನಚಿತ್ರ, ಧಾರಾವಾಹಿಗಳಲ್ಲಿ ಅಭಿನಯ ಮಾಡಬೇಕಾದರೆ ಒಂದು ಸೀನ್ ಮಾಡಬೇಕಾದರೆ ಅನೇಕ ಬಾರಿ ಕಟ್ ಹೇಳುತ್ತಾರೆ. ಆದರೆ ನಾಟಕಗಳಲ್ಲಿ ನೈಜವಾಗಿ ನಿರಂತರವಾಗಿ ಅಭಿನಯ ಮಾಡುತ್ತಾರೆ. ಒಳ್ಳೆಯ ಕಲಾವಿದರು ಬರಬೇಕಾದರೆ ಅದು ರಂಗಭೂಮಿಯಲ್ಲಿ ಕಾಣಲು ಸಾಧ್ಯ. ರಂಗಭೂಮಿಯಲ್ಲಿ ಬೆಳೆದು ಬರುವವರು ನಿಜವಾದ ಕಲಾವಿದರು. ಏಕೆಂದರೆ ಜಿಲ್ಲೆಯ ಡಾ.ರಾಜ್‌ಕುಮಾರ್ ರಂಗಭೂಮಿ ಕಲಾವಿದರಾಗಿದ್ದು ಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿರುವುದನ್ನು ಸ್ಮರಿಸಿಬಹುದು. ಪಾಶ್ಚಿಮಾತ್ರ ಸಂಸ್ಕೃತಿಯಿಂದ ನಶಿಸಿಹೋಗುತ್ತಿರುವ ನಾಟಕವನ್ನು ಜಿಲ್ಲೆಯ ಕಲಾವಿದರು ಉಳಿಸಿ ಬೆಳೆಸಿಬೆಳಸಿಕೊಂಡು ಹೋಗುತಿದ್ದಾರೆ. ಇದಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಗರದ ಸಿದ್ಧಮಲ್ಲೇಶ್ವರ ವಿರಕ್ತಮಠದ ಶ್ರೀಚನ್ನಬಸವ ಸ್ವಾಮೀಜಿ ಮಾತನಾಡಿ, ಜಿಲ್ಲೆಯು ಕಲೆಗಳ ತವರೂರಾಗಿದ್ದು, ಕಲೆಗೆ ಬೆಲೆ ಕೊಟ್ಟಾಗ ಕಲೆ ಜೀವಂತವಾಗಿ ಉಳಿಯುತ್ತಿದೆ. ಪೌರಾಣಿಕ ನಾಟಕೋತ್ಸವ ಯಶಸ್ವಿಯಾಗಲಿ ಎಂದು ಶುಭ ಕೋರಿದರು.ರಂಗರತ್ನ ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ರಂಗಭೂಮಿ ಕಲಾವಿದರಾದ ಎಂ.ಸಿ.ಮಲ್ಲೇದೇವರು, ಹೆಚ್.ಎಲ್.ಬಂಗಾರು, ಪುಟ್ಟಣ, ದಶಪಾಲ್, ವೆಂಕಟೇಶ್, ಲೋಕೇಶ್, ಡಾ.ಪಂಡಿತ್ ರಾಜಶೇಖರ್, ದೊರೆಸ್ವಾಮಿ, ಗೋವಿಂದರಾಜು, ಸಿ.ರಾಮಯ್ಯ ಅವರಿಗೆ ಶ್ರೀ.ಕೆ.ಆರ್.ಶ್ರೀನಿವಾಸಯ್ಯ (ಸೀನಪ್ಪ ) ರಂಗರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಮಂಜುನಾಥ ಪ್ರಸನ್ನ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮರಿಯುಲ ಮುರುಘರಾಜೇಂದ್ರ ಮಹಾಸಂಸ್ಥಾನದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಕರ್, ಸ್ವರ್ಣಲಂ ಶ್ರೀನಿವಾಸಯ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಗ್ರಾಪಂ ಅಧ್ಯಕ್ಷ ಶೇಖರಪ್ಪ, ಪಶುಸಂಗೋಪನಾ ನಿವೃತ್ತ ಅಧಿಕಾರಿ ಡಾ. ಸುಗಂಧರಾಜ್ ನಾಟಕ ನಿರ್ದೇಶಕ ಆರ್.ಶಿವಣ್ಣ ಮಂಗಲ ಇತರರು ಹಾಜರಿದ್ದರು.