ನಾಟಕಗಳು ವ್ಯಕ್ತಿಯ ಹೃದಯ ಗೆಲ್ಲುತ್ತವೆ: ನಾಡೋಜ ಪಟ್ಟದ್ದೇವರು

| Published : Mar 23 2024, 01:04 AM IST

ನಾಟಕಗಳು ವ್ಯಕ್ತಿಯ ಹೃದಯ ಗೆಲ್ಲುತ್ತವೆ: ನಾಡೋಜ ಪಟ್ಟದ್ದೇವರು
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನ ರಂಗ ಮಂದಿರದಲ್ಲಿ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ನಾಟಕಗಳು ವ್ಯಕ್ತಿಯ ಹೃದಯ ಗೆಲ್ಲುತ್ತವೆ. ದೀರ್ಘಕಾಲೀನ ರೋಗಗಳ ಹೊಂದಿರುವ ಇಂದಿನ ಜನರು ಅರ್ಥಪೂರ್ಣ ನಾಟಕಗಳ ವೀಕ್ಷಿಸಿದರೆ ಮನಸ್ಸಿಗೆ ತಟ್ಟುತ್ತವೆ. ವ್ಯಕ್ತಿಯ ಉದ್ವೇಗಗಳನ್ನು ಕಡಿಮೆ ಮಾಡುತ್ತವೆ ಎಂದು ಅನುಭವ ಮಂಟಪ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

ಜಾನಪದ ಕಲಾವಿದರ ಬಳಗ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆಯುತ್ತಿರುವ ಏಳು ದಿವಸಗಳ ನೇಪಥ್ಯ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿ, ಒಂದು ತಿಂಗಳ ಪ್ರವಚನಕ್ಕಿಂತ ಕಲಾವಿದರ ಮೂರು ಗಂಟೆಯ ನಾಟಕಗಳು ವ್ಯಕ್ತಿಯ ಮನಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತವೆ.

ಪುಸ್ತಕೀಯ ಸಾಹಿತ್ಯ ನಾಟಕ ರೂಪದಲ್ಲಿ ತೋರಿಸಿದಾಗ ಮಹಾತ್ಮರ, ಸಾಧಕರ, ಕಲಾವಿದರ ಪರಿಚಯ ಸಮಾಜಕ್ಕೆ ಯಶಸ್ವಿಯಾಗಿ ಮಾಡಿಕೊಟ್ಟಂತಾಗುತ್ತದೆ ಎಂದರು. ಸರ್ಕಾರದ ಮಟ್ಟದಲ್ಲಿ ನಮ್ಮ ಜಿಲ್ಲೆಯ ಕಲಾವಿದರಿಗೆ ಸ್ಥಾನಮಾನಗಳು ಸಿಗುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಪ್ರತಿಭಾವಂತ ಕಲಾವಿದರ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರೆ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರಾಗಬಹುದು. ಈ ನಿಟ್ಟಿನಲ್ಲಿ ವಿಜಯಕುಮಾರ ಸೋನಾರೆ ಹಳ್ಳಿ ಕಲಾವಿದರಿಗೆ ಕರೆಸಿ, ಅವರಿಗೆ ವೇದಿಕೆ ಒದಗಿಸಿ ಪ್ರಶಸ್ತಿ ಕೊಡಿಸುತ್ತಿರುವುದು ಶ್ಲಾಘನೀಯ ಎಂದರು.

ಉದ್ಯಮಿ ಬಸವರಾಜ ಧನ್ನೂರ ಮಾತನಾಡಿ, ನಾಟಕಗಳು ಮನಸ್ಸಿನಲ್ಲಿ ಅಡಗಿರುವ ಸೂಪ್ತ ಶಕ್ತಿಯನ್ನು ಹೊರಹಾಕುತ್ತವೆ. ಕಲೆ ಮತ್ತು ಕಲಾವಿದರ ಬಗ್ಗೆ ಅಪಾರ ಕಾಳಜಿ ಹೊಂದಿರುವ ವಿಜಯಕುಮಾರ ಸೋನಾರೆ ಜನಪದ ಕಲೆಗಳನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಒತ್ತಡ ಬದುಕಿನಲ್ಲಿಯೂ ಏಳು ದಿವಸಗಳ ನಾಟಕ ವೀಕ್ಷಣೆ ಮಾಡಿದರು ಮನಸ್ಸು ಹಗುರವಾಗುತ್ತದೆ ಎಂದರು.

ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ಜನಪದ ಕಲೆಗಳು ನಶಿಸುತ್ತಿವೆ. ಕಲಾವಿದರು ಉಳಿಯುತ್ತಿಲ್ಲ. ಹೀಗಾಗಿ ಬೀದರ್‌ನಲ್ಲಿ ಪ್ರಥಮ ಬಾರಿಗೆ ಏಳು ದಿವಸಗಳ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಮುಂದಿನ ವರ್ಷ ಕಲಾವಿದರ ನಡೆ ಹಳ್ಳಿಗಳ ಕಡೆ ಎಂಬ ಯೋಜನೆ ಹಾಕಿಕೊಂಡು ನಾಟಕ ಪ್ರದರ್ಶನ ಮಾಡಲಿದ್ದೇವೆ. ಸಾಣೆಹಳ್ಳಿ ಶ್ರೀಗಳು ಕೂಡಾ ಈ ನಾಟಕೋತ್ಸವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಅಲ್ಲದೇ ತತ್ವಪದ, ಜಾನಪದ ಮತ್ತು ನಾಟಕೋತ್ಸವದ ಜೊತೆಗೆ ಜಾನಪದ ಕಲಾವಿದರ ಬಳಗ ಹಾಗೂ ಅಪ್ಪು ಗೆಳೆಯರ ಬಳಗದಿಂದ ನಗರದ ನೆಹರೂ ಮೈದಾನದಲ್ಲಿ ಮಾ.22ರಿಂದ 29ರವರೆಗೆ ಯುವಕರಿಗಾಗಿ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.

ಸವಿಗಾನ ಅಕಾಡೆಮಿ ಅಧ್ಯಕ್ಷೆ ಭಾನುಪ್ರಿಯ ಅರಳಿ, ನಾಟ್ಯಶ್ರೀ ನೃತ್ಯಾಲಯ ನಿರ್ದೇಶಕಿ ರಾಣಿ ಸತ್ಯಮೂರ್ತಿ ಉಪಸ್ಥಿತರಿದ್ದರು. ಸುನೀಲ ಕಡ್ಡೆ ನಿರೂಪಿಸಿದರು. ಏಸುದಾಸ ಅಲಿಯಂಬರ ಸ್ವಾಗತಿಸಿದರು. ಪಾರ್ವತಿ ಸೋನಾರೆ ವಂದಿಸಿದರು. ಸಾಣೆಹಳ್ಳಿಯ ಶಿವಸಂಚಾರ ನಾಟಕ ತಂಡದಿಂದ ಜಯಂತ ಕಾಯ್ಕಿಣಿ ರಚಿಸಿರುವ, ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನ ಮಾಡಲಾಯಿತು. ಸಿಂಧನೂರಿನ ನಾರಾಯಣಪ್ಪ ಮಾಡಶಿರವಾರ ಅವರ ತತ್ವಪದ ಗಾಯನ ಸಭೀಕರ ಗಮನ ಸೆಳೆಯಿತು.

ಮಾ.23ಕ್ಕೆ ‘ಕಲ್ಯಾಣದ ಬಾಗಿಲು’

ಡಾ.ನಟರಾಜ ಬೂದಾಳು ರಚನೆಯ, ಸಿ.ಬಸವಲಿಂಗಯ್ಯ ನಿರ್ದೇಶನದ ‘ಕಲ್ಯಾಣದ ಬಾಗಿಲು’ ನಾಟಕ ಪ್ರದರ್ಶನವಾಗಲಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಸಿದ್ಧರಾಮ ಬೆಲ್ದಾಳ ಶರಣರು ಕೌಠಾವಹಿಸುವರು.

ಮಹಾರಾಷ್ಟ್ರದ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲ್ಲಿಕಜಾನ್ ಶೇಖ್ ಉದ್ಘಾಟನೆ ಮಾಡುವರು. ಮುಖ್ಯ ಅತಿಥಿಗಳಾಗಿ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ರಾಯಚೂರು ಜಿಲ್ಲೆಯ ಜಂಬಣ್ಣ ಹಸಮಕಲ್ ಹಾಗೂ ಸಂಗಡಿಗರಿಂದ ತತ್ವಪದ ಗಾಯನ ಜರುಗಲಿದೆ ಎಂದು ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ತಿಳಿಸಿದ್ದಾರೆ.