ಪುಟಾಣಿ ಮಕ್ಕಳ ಕೈಲಿ ಮೂಡಿ ಬಂದ ಚಿತ್ತಾರ

| Published : Dec 25 2023, 01:30 AM IST

ಸಾರಾಂಶ

ಹಾಸನ ನಗರದಲ್ಲೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಇಪ್ಪತ್ತನಾಲ್ಕು ಮಂದಿ ಕಲಾವಿದರಿಂದ ಸಮೂಹ ಚಿತ್ರಕಲಾ ಪ್ರದರ್ಶನವು ನಡೆಯಿತು. ಪ್ರದರ್ಶನಗೊಂಡ ಕೆಲವು ಕಲಾಕೃತಿಗಳು ಒಂದು ಕ್ಷಣ ನೋಡುಗರ ನೋಟವನ್ನು ಹಿಡಿದಿಟ್ಟವು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಶಾಂತಲಾ ಲಲಿತ ಕಲಾ ಶಾಲೆ ಹಾಗೂ ಶಾಂತಲಾ ಆರ್ಟ್ ಕ್ಲಬ್ ವತಿಯಿಂದ ನಗರದ ಸಂಸೃತ ಭವನದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಚಿತ್ರಕಲಾ ಸ್ಪರ್ಧೆಯಲ್ಲಿ ಹಾಸನ ನಗರದ ನೂರಾರು ಮಕ್ಕಳು ಭಾಗವಹಿಸಿ ತಮ್ಮಲ್ಲಿ ಅಡಗಿದ್ದ ಸುಪ್ತಪ್ರತಿಭೆಯನ್ನು ಪ್ರದರ್ಶಿಸಿದರು. ಭಾಗವಹಿಸಿದ್ದ ಬಹುತೇಕ ಮಕ್ಕಳು ಪರಿಸರಕ್ಕೆ ಸಂಬಂಧಪಟ್ಟ ಚಿತ್ರಕಲೆಯನ್ನು ಚಿತ್ತಾಕರ್ಷಕವಾಗಿ ಮೂಡಿಸಿದ್ದು ನೋಡುಗರ ಗಮನವನ್ನು ಸೆಳೆಯಿತು. ಕೆಲವು ಮಕ್ಕಳು ಪ್ರಾಣಿ ಚಿತ್ರಿಸಿದರೆ ಮತ್ತಷ್ಟು ಮಕ್ಕಳು ಮನೆ, ಮೋಡ, ಸೂರ್ಯ, ದೇವಾಲಯ, ಮಹಿಳೆಯರು ಹೀಗೆ ಬಗೆಬಗೆಯ ಚಿತ್ರಗಳನ್ನು ಚಿತ್ರಿಸಿ ಬಣ್ಣಗಳನ್ನು ತುಂಬಿ ಹರ್ಷ ವ್ಯಕ್ತಪಡಿಸಿದ್ದು ಕಲೆ ಮನುಷ್ಯನ ಮನಸ್ಸನ್ನು ಉಲ್ಲಾಸಪಡಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯಾಯಿತು.

ಇನ್ನೂ ಹಾಸನದ ಇಪ್ಪತ್ತನಾಲ್ಕು ಮಂದಿ ಕಲಾವಿದರಿಂದ ಸಮೂಹ ಚಿತ್ರಕಲಾ ಪ್ರದರ್ಶನವು ನಡೆಯಿತು. ಈ ಕಲಾ ಪ್ರದರ್ಶನದಲ್ಲಿ ಕಲಾವಿದರಾದ ರಂಜಿತಾ ಎಚ್.ಯು, ಕಮಲ ಜೈನ್, ಅಕ್ಷತಾ. ಯು.ಎಂ, ಭವಾನಿ, ಕಿರಣ್ .ಟಿ.ಆರ್, ಸೌಮ್ಯ. ಎಸ್, ಪುನೀತ್ ನಾಯಕ್, ವೃತ್ತಿಕ್, ಹೇಮಲತಾ, ಪ್ರೇಮ, ಬಬಿತಾ ಸಿ.ಎಸ್. ಲತಾ.ಎಲ್ .ಜಿ.ಅಸ್ಮತರ, ಬಸವರಾಜ್.ಸಿ.ಎಸ್. ಕೆ.ಜೆ.ಶಿವಶಂಕರ್ , ಆರ್ .ಶಿವಕುಮಾರ್, ನಂದಿನಿ, ಚಂದ್ರಕಾಂತ್ ನಯ್ಯರ್, ಯೋಗನಂದ. ಹೆಚ್.ಎನ್, ನಿಜಾಮುದ್ದಿನ್, ಮಂಜುಳ, ವಿಮಲ, ಸಿ.ಎನ್. ಶೋಭಾ, ಲಕ್ಷ್ಮಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದು, ತೈಲವರ್ಣ, ಜಲವರ್ಣ, ಪೆನ್ಸಿಲ್ ಡ್ರಾಯಿಂಗ್ ನಲ್ಲಿ ಗಣೇಶ, ಲಾಟೀನ್ , ಪುಸ್ತಕ ಚಕ್ರ , ಜಗ್ಗು , ಹುಡುಗಿಯರು, ಬುದ್ಧ, ಕಡವೆ, ಮಳೆಯಲ್ಲಿ ನೆನೆಯುತ್ತಿರುವ ಹುಡುಗಿ, ಕುಂಬಳ ಹೀಗೆ ಪೋಟ್ರೈಟ್ , ಸ್ಟಿಲ್‌ಲೈಪ್, ಲ್ಯಾಂಡ್‌ಸ್ಕೇಪ್‌ನಲ್ಲಿ ಚಿತ್ತಾರದ ಚಿತ್ರಾಕರ್ಷಕವಾಗಿ ಕಲೆಗಳನ್ನು ಕಲಾವಿದರು ತಮ್ಮ ಅಂತರಂಗದ ಭಾವನೆಗಳಲ್ಲಿ ಅಭಿವ್ಯಕ್ತಿಯಲ್ಲಿ ಅರಳಿದ ಕಲೆಗಳಾಗಿದ್ದು ದೇಶಿತನವನ್ನು ಬಿಂಬಿಸಲಾಗಿತ್ತು.

ಕಲೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಒಬ್ಬ ಜನಪದ, ಸಾಂಪ್ರದಾಯಿಕ, ರೇಖೆ ಪ್ರಧಾನ ಚಿತ್ರಕಲಾಕೃತಿಗಳು ಆಗಿದ್ದರೂ ಕೂಡ ಯುವಕಲಾವಿದರು ತಮ್ಮ ಕಲೆಯನ್ನು ಸೃಜಶೀಲತೆಯ ಗುಣವನ್ನು ಆರಂಭದಲ್ಲಿಯೇ ಅಳವಡಿಸಿಕೊಂಡರೆ ಉತ್ತಮ ಕಲಾವಿದನಾಗಲು ಸಾಧ್ಯವಾಗಬಹುದು. ಪ್ರದರ್ಶನಗೊಂಡಿದ್ದ ಬಹುತೇಕ ಕಲೆಗಳು ನೋಡುತ್ತಿದ್ದರೆ ನೋಡುಗನನ್ನು ಕೆಲವು ಕಲಾಕೃತಿಗಳು ಒಂದು ಕ್ಷಣ ಹಿಡಿದಿಟ್ಟರು ಸಹ ಹಳೆಯ ಮಾದರಿಯಾಗಿದ್ದು ಕಲಾವಿದ ನೋಡಗನಿಗೆ ಹೊಸತನವನ್ನು ಚಿತ್ರಿಸುವಲ್ಲಿ ಸೋತಿದ್ದಾರೆ.

ಕಲೆಗಳು ಹೆಚ್ಚು ವಾಸ್ತವವಾದ ಹೆಚ್ಚು ಸಂಗತವಾಗಿದ್ದು ಒಂದು ಪರಿಸರದಿಂದ ಅವಿರ್ಭವಿಸಿದ ಶೈಲಿಯಲ್ಲಿ ಮಾತ್ರ ಯಥಾರ್ಥವಾದ ಚಿತ್ರಣವಾಗಿದ್ದು ಹೆಚ್ಚು ಜನರನ್ನು ತಲುಪುತ್ತದೆ. ಏಕೆಂದರೆ ಕಲೆಯ ಬಗ್ಗೆ ಅರಿವಿಲ್ಲದವನ್ನು ತನ್ನ ರೂಪವನ್ನೇ ಹೋಲುವ ಬಿಂಬಗಳನ್ನು ಹೆಚ್ಚು ಇಷ್ಟಪಡುತ್ತಾನೆ. ಸ್ಥಳೀಯತೆಯಲ್ಲೇ ಬೇರೂರಿದ್ದರೂ ತನ್ನ ಸ್ಥಳೀಯ ಪರಿಮಳವನ್ನು ಸಾರ್ವತ್ರಿಕಗೊಳಿಸುವ ಸಾಮರ್ಥ್ಯ ಪಡೆದಿದ್ದರೆ ಅಂಥ ಶೈಲಿ ಈಗ ಜಗತ್ತಿನ ಕಲಾಕ್ಷೇತ್ರದಲ್ಲಿ ಗರಿಗಟ್ಟಿಕೊಳ್ಳುತ್ತಿರುವ ವಾಸ್ತವ ಶೈಲಿಯ ಪುನಶ್ಚೇತನ ಪ್ರಕ್ರಿಯೆಯ ಭಾಗವಾಗಬಹುದು. ಉದಯೋನ್ಮಖ ಕಲಾವಿದರು ಹಿರಿಯ ಕಲಾವಿದರ ಕಲೆಗಳನ್ನು ಹೆಚ್ಚು ವೀಕ್ಷಿಸಿ ಅವರ ಶೈಲಿ ಮೀಮಾಂಸೆ, ಸೃಜನಶೀಲತೆಯನ್ನು ಗಮನಿಸಿದರೆ ತಮ್ಮದೇ ಆದ ಹೊಸ ಮೀಮಾಂಸೆಯಲ್ಲಿ ಕಲೆಗಳನ್ನು ರಚಿಸಲು ಸಾಧ್ಯವಾಗುವುದರಲ್ಲಿ ಎರಡು ಮಾತಿಲ್ಲ.

ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಮಾಧ್ಯಮದೊಂದಿಗೆ ಮಾತನಾಡಿ, ಮಕ್ಕಳು ಸಂತೋಷದಿಂದ ಚಿತ್ರ ಬಿಡಿಸುತ್ತಿರುವುದನ್ನು ನೋಡಿದರೇ ನಮ್ಮ ಪೈಂಟಿಂಗ್ ಇವರ ಮುಂದೆ ಏನು ಇಲ್ಲ ಅನಿಸುತ್ತದೆ. ಅವರ ಮನಸ್ಸಿನಲ್ಲಿ ಇರುವ ಚಿತ್ರ ಬಿಡಿಸಿ ಅದಕ್ಕೆ ಬಣ್ಣ ತುಂಬುತ್ತಿದ್ದಾರೆ. ಈ ಥರ ಶಿಬಿರಗಳನ್ನು ಹೆಚ್ಚೆಚ್ಚು ನಡೆಸಿಕೊಂಡು ಹೋದರೇ ತುಂಬ ಚಿತ್ರಕಲಾವಿದರು ನಮಗೆ ಸಿಗುತ್ತಾರೆ. ಹೆಚ್ಚು ಪರಿಸರಕ್ಕೆ ಸಂಬಂಧಿಸಿದ ಚಿತ್ರವನ್ನು ಮಕ್ಕಳು ಬಿಡಿಸುತ್ತಿದ್ದಾರೆ ಎಂದರು.

ಇದಾದ ನಂತರ ಮಾಧ್ಯಮದೊಂದಿಗೆ ಮಕ್ಕಳ ಪೋಷಕರು ಕೂಡ ಮಾತನಾಡಿ, ನಮ್ಮ ಮಕ್ಕಳು ಓದುವುದರ ಜೊತೆಯಲ್ಲಿ ಚಿತ್ರಕಲೆಯಲ್ಲೂ ಕೂಡ ಆಸಕ್ತಿ ತೋರಿಸಿದ್ದು, ಅದಕ್ಕೆ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಕೇವಲ ಓದುವಿಗೆ ಮಾತ್ರ ಸೀಮಿತ ಮಾಡಿರುವುದಿಲ್ಲ. ಅವರ ಅಭಿಲಾಷೆ ಗುರುತಿಸಿ ಅದಕ್ಕೆ ಸೇತುವೆ ಆಗುತ್ತಿದ್ದೇವೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಇದೆ ವೇಳೆ ಸಾಹಿತಿ ಸಿ.ಸುವರ್ಣ ಶಿವಪ್ರಸಾದ್, ಚಿತ್ರಕಲಾವಿದರಾದ ಶಿವಕುಮಾರ್, ಎಲ್.ಜೆ. ಲತಾ, ಬಸವರಾಜು, ನಂದಿನಿ, ಚಂದ್ರಶೇಖರ್‌, ಇತರರು ಉಪಸ್ಥಿತರಿದ್ದರು.