ಪೂರ್ಣ ಚೇತನ ಶಾಲೆಯಲ್ಲಿ ನಿರ್ಮಾಣವಾಗಲಿದೆ ವಿದ್ಯಾರ್ಥಿಗಳ ಕನಸಿನ ಸ್ಮಾರ್ಟ್ ವಿಲೇಜ್

| Published : Jul 05 2024, 12:48 AM IST

ಪೂರ್ಣ ಚೇತನ ಶಾಲೆಯಲ್ಲಿ ನಿರ್ಮಾಣವಾಗಲಿದೆ ವಿದ್ಯಾರ್ಥಿಗಳ ಕನಸಿನ ಸ್ಮಾರ್ಟ್ ವಿಲೇಜ್
Share this Article
  • FB
  • TW
  • Linkdin
  • Email

ಸಾರಾಂಶ

ಪೂರ್ಣ ಚೇತನ ಶಾಲೆಯಲ್ಲಿ 7 ರಿಂದ 10ನೇ ತರಗತಿಯವರೆಗಿನ 136 ವಿದ್ಯಾರ್ಥಿಗಳನ್ನೊಳಗೊಂಡ 68 ತಂಡಗಳು ಈ ಪ್ರತಿಕೃತಿಗಳನ್ನು ಸೃಷ್ಟಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಎಚ್‌.ಡಿ. ಕೋಟೆಯ ರಸ್ತೆಯಲ್ಲಿರುವ ಪೂರ್ಣ ಚೇತನ ಶಾಲೆಯಲ್ಲಿ ವಿದ್ಯಾರ್ಥಿಗಳ ಕನಸಿನ ಸ್ಮಾರ್ಟ್ ವಿಲೇಜ್ ನಿರ್ಮಾಣವಾಗಲಿದೆ.

ಜು. 6ರ ಶನಿವಾರ ಬೆಳಗ್ಗೆ 6.30ಕ್ಕೆ ಆರಂಭವಾಗಲಿರುವ ಈ ಪ್ರಯತ್ನದ ಉದ್ದೇಶ ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಏಷ್ಯನ್ ರೆಕಾರ್ಡ್ಸ್ ಅಕಾಡಮಿ ಹಾಗೂ ಇಂಡಿಯಾ ರೆಕಾರ್ಡ್ಸ್ ಸೃಷ್ಟಿಸುವುದಾಗಿದೆ. ಇದು ಪೂರ್ಣ ಚೇತನ ವರ್ಲ್ಡ್ ರೆಕಾರ್ಡ್ಸ್ ಫೆಸ್ಟಿವಲ್ ನ ಮೊದಲನೇ ಪ್ರಯತ್ನ. ರಾತ್ರಿ 10.30ಕ್ಕೆ ಇದು ಮುಕ್ತಾಯಗೊಳ್ಳಲಿದೆ.

ಪೂರ್ಣ ಚೇತನ ಶಾಲೆಯಲ್ಲಿ 7 ರಿಂದ 10ನೇ ತರಗತಿಯವರೆಗಿನ 136 ವಿದ್ಯಾರ್ಥಿಗಳನ್ನೊಳಗೊಂಡ 68 ತಂಡಗಳು ಈ ಪ್ರತಿಕೃತಿಗಳನ್ನು ಸೃಷ್ಟಿಸಲಿದ್ದಾರೆ. 68 ವಿಶಿಷ್ಟ ರೊಬೊಟಿಕ್ ಮಾದರಿಗಳನ್ನು ಅವರು ಇಲ್ಲಿ 16 ಗಂಟೆಗಳ ಅವಧಿಯಲ್ಲಿ ಸೃಷ್ಟಿಸಲಿದ್ದಾರೆ. ಈ ಯುವ ಬಾಲ ಪ್ರತಿಭೆಗಳು ಕೋಡಿಂಗ್, ರೊಬೋಟಿಕ್ ಹಾಗೂ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಸಿಕೊಂಡು ಅತ್ಯಾಧುನಿಕ, ಸುಸ್ಥಿರ ಸ್ಮಾರ್ಟ್ ಹಳ್ಳಿಯ ಕಲ್ಪನೆಯನ್ನು ಸಾಕಾರಗೊಳಿಸಲಿದ್ದಾರೆ.

ಈ ಕನಸಿನ ಹಳ್ಳಿಯಲ್ಲಿ ಬೀದಿ ದೀಪಗಳು ಸ್ವಯಂ ಚಾಲಿತವಾಗಿ ಕಾರ್ಯ ನಿರ್ವಹಿಸುತ್ತವೆ. ಈ ಹಳ್ಳಿಯ ರೈತ ತನ್ನ ಹೊಲದಲ್ಲಿನ ಬೆಳೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಇಲ್ಲಿನ ಹೊಲಗಳಿಗೆ ಲೇಸರ್ ಭದ್ರತಾ ಕವಚವಿದೆ. ಈ ಹಳ್ಳಿಯಲ್ಲಿ ಸ್ವಯಂಚಾಲಿತ ರೈಲ್ವೆ ಗೇಟ್ ಎಲ್ಲರಿಗೂ ಸುರಕ್ಷಾ ಕವಚದಂತಿದೆ. ಇಲ್ಲಿ ಯಾರಾದರು ಮದ್ಯಪಾನ ಮಾಡಿ ಬಂದರೆ, ಸ್ವಯಂ ಚಾಲಿತ ಸಾಧನ ಅದನ್ನು ಪತ್ತೆ ಹಚ್ಚುತ್ತದೆ. ಈ ಹಳ್ಳಿಯ ಮನೆಗಳಲ್ಲಿ ಅಗ್ನಿ ಅವಘಡ ಆಗಲಾರದು.. ಏಕೆಂದರೆ ಇಲ್ಲಿ, ಅಗ್ನಿ ಪತ್ತೆ ಹಚ್ಚುವಿಕೆ ಸಾಧನ ಸ್ವಯಂ ಕಾರ್ಯ ನಿರ್ವಹಿಸುತ್ತದೆ. ಮಾತಿನಲ್ಲಿ ಕಮಾಂಡ್ ಕೊಟ್ಟರೆ ಉರಿಯುವ, ಆಫ್ ಆಗುವ ವಿದ್ಯುತ್ ದೀಪಗಳು ಇಲ್ಲಿನ ಮನೆಗಳ ವಿಶೇಷತೆಗಳು.

ಇನ್ನು ಮೈಸೂರು ನಗರ ಸೇರಿದಂತೆ, ಎಲ್ಲ ಹಳ್ಳಿ, ಪಟ್ಟಣಗಳ ಅತಿ ದೊಡ್ಡ ಸವಾಲು ತ್ಯಾಜ್ಯ ನಿರ್ವಹಣೆ. ಅದಕ್ಕೂ ಈ ಸ್ಮಾರ್ಟ್ ಹಳ್ಳಿಯಲ್ಲಿ ತಂತ್ರಜ್ಞಾನದ ಮೂಲಕ ಮಕ್ಕಳು ಪರಿಹಾರ ಒದಗಿಸಲಿದ್ದಾರೆ.

ಈ ಹಳ್ಳಿಯಲ್ಲಿ ಕಸ, ತ್ಯಾಜ್ಯ ವಿಂಗಡಣೆ ಸಂಪೂರ್ಣ ಆಟೋಮ್ಯಾಟಿಕ್ (ಸ್ವಯಂ ಚಾಲಿತ). ಇಲ್ಲಿನ ಸ್ಮಾರ್ಟ್ ಕಸದ ಬುಟ್ಟಿಗಳು ಅಷ್ಟು ಸ್ಮಾರ್ಟ್! ಕಸ ನಿರ್ವಹಣೆಯ ತಲೆ ನೋವು ಈ ಹಳ್ಳಿಯಲ್ಲಿಲ್ಲ. ಇನ್ನು ಈ ಹಳ್ಳಿಯಲ್ಲಿ ವಾಯು ಮಾಲಿನ್ಯ ಉಂಟಾದರೆ, ತಕ್ಷಣ ಹಳ್ಳಿಗರಿಗೆ ಎಚ್ಚರಿಕೆ ಸಂದೇಶ ಹೋಗುತ್ತದೆ. ಇನ್ನು ಹಳ್ಳಿ ಬದುಕಿನ ಅವಿಭಾಜ್ಯ ಅಂಗವಾದ ಪಶುಪಾಲನೆಯಲ್ಲಿನ ಪ್ರಮುಖ ಅಂಶವಾದ ಪಶುಗಳಿಗೆ ಮೇವು ನೀಡಿಕೆಯ ಕೆಲಸ ಸಂಪೂರ್ಣ ಅಟೋಮೇಟೆಡ್. ರೈತರ ಹೊಲಕ್ಕೆ ಎಷ್ಟು ನೀರು ಬೇಕು, ಹೊಲದ ಮಣ್ಣಿನಲ್ಲಿ ನೀರಿನ ಅಂಶವಿದೆಯೇ ಹೀಗೆ ಎಲ್ಲವನ್ನೂ ಇಲ್ಲಿ ಸ್ಮಾರ್ಟ್ ಆಗಿ ನಿರ್ವಹಿಸಲಾಗುತ್ತದೆ.

ಇಲ್ಲಿ ವಿದ್ಯಾರ್ಥಿಗಳು ರೂಪಿಸುವ ಎಲ್ಲ ಪ್ರತಿಕೃತಿಗಳು ಕೆಲಸ ಮಾಡುವಂತಾಗಿದ್ದು, ನಮ್ಮ ಹಳ್ಳಿಗಳ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿವೆ. ವಿದ್ಯಾರ್ಥಿಗಳು ನಮ್ಮ ಹಳ್ಳಿಗಳ ಬದುಕನ್ನು ಇನ್ನಷ್ಟು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಇಂತಹ ಪ್ರಯತ್ನ ನಡೆಸಲಿದ್ದಾರೆ.

ಎಲೈಟ್ ವರ್ಲ್ಡ್ ರೆಕಾರ್ಡ್ಸ್ನ ರಾಯಭಾರಿ ಹಾಗೂ ತೀರ್ಪುಗಾರರಾದ ಅಮೀತ್ ಕೆ. ಹಿಂಗೋರಾಣಿ, ಡಾ. ಹನೀಫಾ ಬಾನು, ತೀರ್ಪುಗಾರರು , ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಡಾ. ಬಿ. ಶಿವಕುಮಾರನ್, ಏಷ್ಯನ್ ರೆಕಾರ್ಡ್ಸ್ ಅಕಾಡೆಮಿಯ ರಾಯಭಾರಿ ಮತ್ತು ಹಿರಿಯ ತೀರ್ಪುಗಾರರು, ಕೆ.ಆರ್. ವೆಂಕಟೇಶ್ವರನ್, ಇಂಡಿಯಾ ರೆಕಾರ್ಡ್ಸ್ ಅಕಾಡೆಮಿಯ ವ್ಯವಸ್ಥಾಪಕರು, ಡಾ. ಜಮುನಾ ರಾಜು, ಇಂಡಿಯಾ ರೆಕಾರ್ಡ್ಸ್ ಅಕಾಡೆಮಿಯ ರೆಕಾರ್ಡ್ಸ್ ವ್ಯವಸ್ಥಾಪಕರು ಮಕ್ಕಳ ಪ್ರತಿಕೃತಿಗಳನ್ನು ಪರಿಶೀಲಿಸಲಿದ್ದಾರೆ.