ಸಾರಾಂಶ
ತಾಲೂಕಿನ ಹಾಗಲವಾಡಿ ಹೋಬಳಿಯ ಮಂಚಲದೊರೆ, ಹೂವಿನಕಟ್ಟೆ, ಕುಂಟರಾಮನಹಳ್ಳಿ, ಯರಬಳ್ಳಿ, ಜೋಗಿಹಳ್ಳಿ , ಭೋಡತಿಮ್ಮನಹಳ್ಳಿ ಭಾಗಗಳಲ್ಲಿ ಶುಕ್ರವಾರ ಭರ್ಜರಿ ಮಳೆಯಾಗಿದೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಹಾಗಲವಾಡಿ ಹೋಬಳಿಯ ಮಂಚಲದೊರೆ, ಹೂವಿನಕಟ್ಟೆ, ಕುಂಟರಾಮನಹಳ್ಳಿ, ಯರಬಳ್ಳಿ, ಜೋಗಿಹಳ್ಳಿ , ಭೋಡತಿಮ್ಮನಹಳ್ಳಿ ಭಾಗಗಳಲ್ಲಿ ಶುಕ್ರವಾರ ಭರ್ಜರಿ ಮಳೆಯಾಗಿದೆ.ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೆರೆಕಟ್ಟೆಗಳಿಗೆ ನೀರು ಬಂದಿದೆ. ಸುಮಾರು ದಿನಗಳಿಂದ ಮಳೆಯಿಲ್ಲದೆ ಕಂಗಾಲಾಗಿದ ರೈತರಿಗೆ ಮುಂಗಾರು ಮಳೆ ಬಂದು ಮಂದಹಾಸ ಮೂಡಿಸಿದೆ. ಮಳೆ ಇಲ್ಲದೆ ರೈತರು ಹಾಗೂ ಜಾನುವಾರುಗಳಿಗೆ ಮೇವು ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿತ್ತು.
ಮಂಚಲದೊರೆಯಲ್ಲಿ ಗಾಳಿ, ಮಳೆಗೆ ಮರಗಳು ಧರೆಗುರುಳಿದ್ದು, ಕೆಲವೆಡೆ ತೋಟಗಳಲ್ಲಿ ನೀರು ತುಂಬಿಕೊಂಡು ಜಲಾವೃತವಾಗಿದೆ. ಗುರುವಾರ ರಾತ್ರಿ ಮೂರು ಗಂಟೆ ಭರ್ಜರಿ ಮಳೆಯಾಗಿದ್ದು, ಮಂಚಲದೊರೆ ಕುಂಟರಾಮನಹಳ್ಳಿ ಸೇತುವೆ ಜಲಾವೃತವಾಗಿತ್ತು. ವಾಹನ ಸವಾರರಿಗೆ ಕೆಲಕಾಲ ಸಂಚಾರಕ್ಕೆ ತೊಂದರೆಯಾಗಿತ್ತು. ಮಂಚಲದೊರೆಯಲ್ಲಿ ಚೆಕ್ ಡ್ಯಾಂ ಗಳು ತುಂಬಿ ಹರಿಯುತ್ತಿವೆ. ಗಾಳಿ, ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ರಾತ್ರಿ ವಿದ್ಯುತ್ ಇಲ್ಲದೆ ರೈತರು ಪರದಾಡಿದ್ದಾರೆ.ಮಂಚಲದೊರೆಯಲ್ಲಿ ಸುರಿದ ಭಾರಿ ಮಳೆಗೆ ರಾಜಣ್ಣ ಎಂಬುವರ ಮನೆಗೆ ನೀರು ನುಗ್ಗಿದೆ. ಇಂತಹ ಮಳೆಯಾಗಿ ಎರಡು ವರ್ಷಗಳೇ ಆಗಿತ್ತು. ರೈತರು ಭೂಮಿಯನ್ನು ಹದಮಾಡಿಕೊಂಡು ಬಿತ್ತನೆಗೆ ಮುಂದಾಗಿದ್ದಾರೆ.